ರಾಜಕೀಯ ಮಾಡುವುದಾದರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮಾತ್ರ  ಚುನಾವಣೆಗೆ ನಿಲ್ಲುವುದಾದರೆ ಅದು ಕೆ.ಆರ್‌. ನಗರದಿಂದ ಮಾತ್ರ - ಸಾ ರಾ ಮಹೇಶ್ 

 ಸಾಲಿಗ್ರಾಮ (ಆ.06): ರಾಜಕೀಯ ಮಾಡುವುದಾದರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್‌ನಿಂದ ಮತ್ತು ಚುನಾವಣೆಗೆ ನಿಲ್ಲುವುದಾದರೆ ಅದು ಕೆ.ಆರ್‌. ನಗರದಿಂದ ಮಾತ್ರ ಇಲ್ಲದಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ವಿರೋಧಿಗಳಿಗೆ ಜೆಡಿಎಸ್‌ನಿಂದ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಹರದನಹಳ್ಳಿಯಲ್ಲಿ ಗ್ರಾಪಂ ಕಟ್ಟಡ ಭೂಮಿಪೂಜೆ ಮತ್ತು 1.75 ಲಕ್ಷದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಾ.ರಾ. ಮಹೇಶ್‌ ಕೆ.ಆರ್‌. ನಗರದಿಂದ ಬೇರೆ ಕ್ಷೇತ್ರೆಕ್ಕೆ ಹಾಗೂ ಬೇರೆ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಗುಸು ಗುಸು ಸುದ್ದಿಗೆ ನೇರವಾಗಿ ಉತ್ತರಿಸಿದರು.

ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾದ ಜೆಡಿಎಸ್ ಶಾಸಕ ಸಾ ರಾ

ಮೂರು ಬಾರಿ ಚುನಾವಣೆಯಲ್ಲಿಯೂ ಒಬ್ಬಬ್ಬರು ನನ್ನನ್ನು ಸೋಲಿಸಲೇಬೇಕೆಂಬ ಹಟದಿಂದ ಬೇರೆ ಪಕ್ಷಕ್ಕೆ ಹೋದರು, ಆದರೆ ಕೆ.ಆರ್‌. ನಗರ ತಾಲೂಕಿನ ಮತದಾನ ಪ್ರಭುಗಳು ಮಾತ್ರ ನನ್ನ ಕೈ ಬೀಡದೆ ಹ್ಯಾಟ್ರಿಕ್‌ ಗೆಲಿವಿಗೆ ಕಾರಣವಾಗಿದ್ದಾರೆ, ಅವರ ಋುಣ ನನ್ನ ಮೇಲಿದೆ ಅದನ್ನು ತೀರಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ತಾಲೂಕಿನ ಜನರು ಸ್ಮರಿಸಿದರು.

ಹರದನಹಳ್ಳಿಯ ಜನರ ಅನುಕೂಲಕ್ಕಾಗಿ 4 ದೇವಾಲಯಗಳ ಅಭಿವೃದ್ದಿ ಗ್ರಾಮದ ರಸ್ತೆಗಳ ಅಭಿವೃದ್ದಿ ಆಸ್ಪತ್ರೆ ಶುದ್ದ ಕುಡಿಯುವ ನೀರಿನ ಘಟಕ ನಾಲೆಗಳ ಆಧುನಿಕರಣ ಮತ್ತು ಜಿಪಂ ಕ್ಷೇತ್ರವನ್ನಾಗಿ ಮಾಡಿದ್ದು, ನಾನು ಹುಟ್ಟಿದ ಊರು ಸಾಲಿಗ್ರಾಮವಾದರು ಆಡಿ ಬೆಳೆದ ಗ್ರಾಮ ಹರದನಹಳ್ಳಿಯಾಗಿರುವುದರಿಂದ ನನ್ನ ಎರಡು ಗ್ರಾಮಗಳು ತಾಯಿ ಇದ್ದಂತೆ, ಆದ್ದರಿಂದ ಈ ಗ್ರಾಮದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದರು.

ಹರದನಹಳ್ಳಿ ಮತ್ತು ಬೆಂಗಳೂರಿಗೆ ನೇರವಾಗಿ ಹೋಗಲು ಚತುಷ್ಪಥ ರಸ್ತೆ ಮಾಡುವ ಭರವಸೆ ನೀಡಿದ್ದೆ ಅದರಂತೆ 6 ತಿಂಗಳೊಳಗೆ ಈ ರಸ್ತೆ ಪೂರ್ಣಗೊಳ್ಳದೆ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಉದ್ಘಾಟನೆಯಾಗಿದ್ದ ಬಿಳಿಕೆರೆಯಿಂದ ತಾಲೂಕಿನ ಗಡಿಭಾಗದವರೆಗೆ ರಸ್ತೆ ನಿರ್ಮಾಣದ ಹಣವನ್ನು ಬಿಜೆಪಿ ಸರ್ಕಾರ ವಾಪಸ್‌ ಪಡೆದಿತ್ತು, ಆದರೆ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರ ಒತ್ತಾಯದ ಮೇರೆಗೆ ಆ ಹಣವು ಬಿಡುಗಡೆಯಾಗಿದ್ದು, ಒಂದು ತಿಂಗಳೊಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಮೈಸೂರು ಮಾಜಿ ಎಂಡಿಎ ಅಧ್ಯಕ್ಷ ಎಚ್‌.ಎನ್‌. ವಿಜಯ್‌, ಗ್ರಾಪಂ ಅಧ್ಯಕ್ಷೆ ನಂದಿನಿ ರಮೇಶ್‌ ಮಾತನಾಡಿದರು. ಉಪಾಧ್ಯಕ್ಷೆ ಶೈಲಜ ಯೋಗೇಶ್‌, ತಾಪಂ ಮಾಜಿ ಅಧ್ಯಕ್ಷ ಎಚ್‌.ಟಿ. ಮಂಜುನಾಥ್‌, ಸಾಲಿಗ್ರಾಮ ತಾಲೂಕು ಜೆಡಿಎಸ್‌ ಅಧ್ಯಕ್ಷ ಮೆಡಿಕಲ್‌ ರಾಜಣ್ಣ, ಜಿಲ್ಲಾ ವೈದ್ಯಾಧಿಕಾರಿ ಪ್ರಸಾದ್‌, ತಾಲೂಕು ವೈದ್ಯಾಧಿಕಾರಿ ನಾಗೇಂದ್ರ, ಆಡಳಿತ ಅಧಿಕಾರಿ ಮಹೇಂದ್ರಪ್ಪ, ತಹಸೀಲ್ದಾರ್‌ ಸಂತೋಷ್‌, ಇಒ ಸತೀಶ್‌, ಮುಖಂಡರಾದ ನಿಂಗಪ್ಪ, ರಾಮೇಗೌಡ, ಅಶೋಕ, ಮರಿಗೌಡ, ಗ್ರಾಪಂ ಸದಸ್ಯರಾದ ಮಂಜುಳ ರಮೇಶ್‌, ಗೋಪಾಲ್‌, ನವೀನ್‌, ಜಯರಾಮ್‌, ಮಂಜುಳ ಚಂದ್ರ ಇದ್ದರು.