Asianet Suvarna News Asianet Suvarna News

ಬಡವರಿಗೆ ಸೇವೆ ಮಾಡುವ ಬಯಕೆ ​ನ​ನ್ನದು: ಸಚಿವ ಸೋಮಣ್ಣ

ಅಭಿವೃದ್ಧಿಯೊಂದೇ ನನ್ನ ಮಂತ್ರ. ಇದರಲ್ಲಿ ರಾಜಕೀಯ ಬೆರೆಸುವ ಅವಶ್ಯಕತೆ ಇಲ್ಲ. 12 - 13 ವರ್ಷಗಳ ಕಾಲದಿಂದ ಮಂತ್ರಿಸ್ಥಾನದಲ್ಲಿರುವ ನಾನು ಬಡವರ, ರೈತರ, ಜನಸಾಮಾನ್ಯರ ನೆರವಿಗೆ ಅಗತ್ಯವಾದ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು ನನಗೆ ಸಮಾಧಾನ ತಂದಿದೆ ಎಂದ ವಸತಿ ಸಚಿವ ವಿ. ಸೋಮಣ್ಣ. 

I Want to Serve the Poor Says Minister V Somanna grg
Author
First Published Mar 8, 2023, 2:30 AM IST | Last Updated Mar 8, 2023, 2:30 AM IST

ಕನಕಪುರ(ಮಾ.08): ನನ್ನ ಆಸೆ - ಬಯಕೆ ಎಲ್ಲವೂ ರೈತರು, ಜನಸಾಮಾನ್ಯರು ಹಾಗೂ ಬಡವರಿಗೆ ಕೈಲಾದಷ್ಟುಸೇವೆ ಮಾಡುವುದಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿ​ದರು. ತಾಲೂಕಿನ ರಾಯಸಂದ್ರ ಬಳಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ರಾಷ್ಟ್ರ ಕವಿ ಕುವೆಂಪು ಬಡಾವಣೆಯ ಸ್ವಾಗತ ಕಮಾನು ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯೊಂದೇ ನನ್ನ ಮಂತ್ರ. ಇದರಲ್ಲಿ ರಾಜಕೀಯ ಬೆರೆಸುವ ಅವಶ್ಯಕತೆ ಇಲ್ಲ. 12 - 13 ವರ್ಷಗಳ ಕಾಲದಿಂದ ಮಂತ್ರಿಸ್ಥಾನದಲ್ಲಿರುವ ನಾನು ಬಡವರ, ರೈತರ, ಜನಸಾಮಾನ್ಯರ ನೆರವಿಗೆ ಅಗತ್ಯವಾದ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು ನನಗೆ ಸಮಾಧಾನ ತಂದಿದೆ ಎಂದು ಹೇಳಿ​ದ​ರು.

ರಾಯಸಂದ್ರ ಬಳಿ ಬಡಾವಣೆ ನಿರ್ಮಾಣ ಮಾಡಲು ಶಾಸಕ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿಯವರ ಮುತುವರ್ಜಿ ಹಾಗೂ ಅಭಿಲಾಷೆಯಂತೆ ನಿರ್ಮಾಣ ಮಾಡಲಾ​ಗಿದೆ. ಜಮೀನು ಕಳೆದುಕೊಂಡ ರೈತರಿಗೆ ಅನ್ಯಾಯವಾಗದಂತೆ ಅವರಿಗೆ ನಿವೇಶನಗಳನ್ನು ಇಲಾಖೆ ವತಿಯಿಂದ ನೀಡಲಾಗಿದೆ. ಇನ್ನೂ ಹತ್ತು ವರ್ಷಗಳಲ್ಲಿ ಈ ಬಡಾವಣೆಯ ಚಿತ್ರಣವೇ ಬದಲಾಗಲಿದೆ. ಈ ಬಡಾವಣೆಯು ಉಪನಗರವಾಗಿ ಬದಲಾಗುವುದು ಶತಸಿದ್ದ, ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆ ಗಳ ಫಲವಾಗಿ ವೈದ್ಯಕೀಯ ಕಾಲೇಜು, ರೈಲ್ವೆ ಸಂಪರ್ಕ ಹಾಗೂ ಉತ್ತಮ ದರ್ಜೆಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗುವುದರಿಂದ ಕನಕಪುರ ಮತ್ತೊಂದು ಬೆಂಗಳೂರು ಆಗಿ ಬೆಳೆಯಲಿದೆ. ಈ ಬಡಾವಣೆಗೆ ರಾಷ್ಟ್ರ ಕವಿ ಕುವೆಂಪು ಹೆಸರನ್ನು ಇಟ್ಟು ಗೌರವಿಸಲಾಗಿದ್ದು,ಈ ಬಡಾವಣೆಯಲ್ಲಿ ನಿವೇಶನವನ್ನು ಕೊಂಡುಕೊಂಡಿರುವ ಯಾರು ಮಾರಾಟ ಮಾಡದಂತೆ ಮನವಿ ಮಾಡಿದರು.

ಬಿಜೆಪಿ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯ ದಿವಾಳಿ: ರಣದೀಪ್‌ ಸಿಂಗ್‌ ವಾಗ್ದಾಳಿ

ಈ ಹೆಮ್ಮೆಯ ಬಡಾವಣೆಗೆ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟರೈತರಿಗೆ ಒಂದು ನಿವೇಶನವನ್ನು ನೀಡಿದ್ದು ಕೇವಲ ಶೇಕಡ 10 ರಷ್ಟು ನೊಂದಣಿ ಶುಲ್ಕ ಪಾವತಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳುವಂತೆ ವಿ.ಸೋ​ಮಣ್ಣ ಸಲಹೆ ನೀಡಿದರು.

ಈ ಸಂದ​ರ್ಭ​ದಲ್ಲಿ ಕೆಲ ಫಲಾನುಭವಿಗಳಿಗೆ ಸಾಂಕೇತಿಕ ವಾಗಿ ಪತ್ರ ವಿತರಿಸಲಾಯಿತು. ಸಂಸದ ಡಿ. ಕೆ. ಸುರೇಶ್‌,ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಗ್ರೇಡ್‌ - 2 ತಹ​ಸೀ​ಲ್ದಾರ್‌ ಶಿವ​ಕು​ಮಾರ್‌ , ಗೃಹ ಮಂಡಳಿ ಆಯುಕ್ತೆ ಕವಿತಾ ಎಸ್‌. ಮನ್ನಿಕೇರಿ,ತುಂಗಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್‌, ಮುಖಂಡರಾದ ರಾಯಸಂದ್ರ ರವಿ, ತುಂಗಣಿ ಪುಟ್ಟಸ್ವಾಮಿ, ದುರ್ಗಯ್ಯ ಮತ್ತಿ​ತ​ರರು ಉಪಸ್ಥಿತರಿದ್ದರು.

ಕುತೂ​ಹಲ ಮೂಡಿ​ಸಿದ ಸುರೇಶ್‌ ಮತ್ತು ಸೋಮಣ್ಣ ಚರ್ಚೆ

ಕನಕಪುರ:ರಾಯಯಸಂದ್ರ ಬಳಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ರಾಷ್ಟ್ರ ಕವಿ ಕುವೆಂಪು ಬಡಾವಣೆಯ ಸ್ವಾಗತ ಕಮಾನು ಉದ್ಘಾಟನೆ ವೇಳೆ ವಸತಿ ಸಚಿವ ವಿ.ಸೋ​ಮಣ್ಣ ಹಾಗೂ ಸಂಸದ ಡಿ.ಕೆ. ಸುರೇಶ್‌ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದ ಕುತೂ​ಹ​ಲಕ್ಕೆ ಎಡಮಾಡಿಕೊಟ್ಟಿತು.

ತಾಲೂಕಿನ ರಾಯಸಂದ್ರ ಗ್ರಾಮದ ಬಳಿ ಕುವೆಂಪು ಸಂಯುಕ್ತ ವಸತಿ ಬಡಾವಣೆ ಮುಖ್ಯ ದ್ವಾರ ಉದ್ಘಾಟನೆಗೆ ಆಗಮಿಸಿದ್ದ ವಿ.ಸೋಮಣ್ಣ ಅವರನ್ನು ಸುರೇಶ್‌ ರವರು ಮಾಧ್ಯಮ ಮಿತ್ರರು ಹಾಗೂ ಸಾರ್ವಜನಿಕರಿಂದ ಅನತಿ ದೂರಕ್ಕೆ ಕರೆದುಕೊಂಡು ಹೋದರು. ಕೈಯಲ್ಲಿ ಯಾವುದೋ ಪತ್ರ ವನ್ನು ಹಿಡಿದಿದ್ದ ಸುರೇಶ್‌ ರವರು ಕೆಲ ಹೊತ್ತು ಸೋಮಣ್ಣ ಅವ​ರೊಂದಿಗೆ ಚರ್ಚೆ ನಡೆ​ಸಿ​ದ​ರು. ಯಾರು ಹತ್ತಿರ ಬಾರದಂತೆ ಹೇಳಿ ದೂರ ಸರಿದು ಮಾತನಾಡಿದ್ದು ಬಹಳ ಕುತೂಹಲ ಮೂಡಿಸಿತು.

ಬಿಜೆಪಿ ಅಧಿ​ಕಾ​ರ​ಕ್ಕೆ ಕನ​ಕ​ಪುರ ಮತ​ದಾ​ರರು ಮುನ್ನುಡಿ ಬರೆ​ಯಿರಿ: ಸಚಿವ ಅಶೋಕ್‌

ನಾನು ಬಿಜೆಪಿ ತೊರೆ​ಯು​ತ್ತೇ​ನೆಂದು ಹೇಳಿಲ್ಲ: ಸೋ​ಮ​ಣ್ಣ

ಕನಕಪುರ: ನಾನು ಎಲ್ಲೂ ಬಿಜೆಪಿ ಪಕ್ಷ ಬಿಡುತ್ತೇನೆ ಎಂದು ಹೇಳಿಲ್ಲ ಇದೆಲ್ಲಾ ಕಪೋಲಕಲ್ಪಿತ ವಿಷಯವಾಗಿದ್ದು ಇಂತಹ ವಿಷಯಗಳಿಗೆ ಮಾಧ್ಯಮ ಸ್ನೇಹಿತರು ಹೆಚ್ಚು ಒತ್ತು ನೀಡಬಾರದು ಎಂದು ವಸತಿ ಸಚಿವ ವಿ. ಸೋಮಣ್ಣ ಪ್ರತಿ​ಕ್ರಿ​ಯಿ​ಸಿ​ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 45 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದು ನನ್ನದೇ ಆದ ತಂತ್ರಗಾರಿಕೆ,ಕೆಲಸ ಗಳಲ್ಲಿ ತೊಡಗಿದ್ದೇನೆ. ನನಗೆ ಅಭಿವೃದ್ಧಿ ಒಂದೇ ಮಂತ್ರವಾಗಿದೆ. ಬಿಜೆಪಿ ಪಕ್ಷ ನನಗೆ ಉತ್ತಮ ಅವಕಾಶಗಳನ್ನು ನೀಡಿದ್ದು ನಾನು ಎಲ್ಲೂ ಪಕ್ಷ ಬಿಡುವ ಮಾತನ್ನು ಆಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮದು ಸೋಮಣ್ಣವರದು ಸಹೋದರ ಸಂಬಂಧ: ಡಿಕೆಸು

ಕನ​ಕ​ಪು​ರ: ನಮ್ಮದು ಸೋಮಣ್ಣವರದು ಸಹೋದರ ಸಂಬಂಧ. ಪಕ್ಷ, ಜಾತಿ ಬೇರೆಯಾಗಿದ್ದರೂ ನಾವು ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣನವರು ನಮ್ಮ ತಾಲೂಕಿನವರಾಗಿದ್ದು, ರಾಜಕೀಯದಲ್ಲಿ ಹಿರಿಯರು ಆಗಿದ್ದಾರೆ. ಅವರು ಮತ್ತು ನಾವು ಒಂದು ಕುಟುಂಬದ ಸದಸ್ಯರಂತೆ ಇದ್ದೇವೆ. ಸೋಮಣ್ಣನವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್‌, ಇದುವರೆಗೂ ನಮ್ಮ ಯಾವ ನಾಯಕರು ಅದರ ಬಗ್ಗೆ ಚರ್ಚೆ ನಡೆಸಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಯಾರೇ ಬಂದರೂ ಅವರನ್ನು ಸ್ವಾಗತಿಸುವುದಾಗಿ ತಿಳಿಸಿದರು.

Latest Videos
Follow Us:
Download App:
  • android
  • ios