ಈಗ ಮತ್ತೋರ್ವ ಶಾಸಕರಿಂದ ಮತ್ತೊಂದು ಖ್ಯಾತೆ
- ನನಗೆ ಸಚಿವನಾಗಿ ಕಾರ್ಯನಿರ್ವಹಿಸಿದ ಬಗ್ಗೆ ತೃಪ್ತಿಯಿದೆ.
- ನನಗೆ ನಿಗಮ ಮಂಡಳಿ ಸ್ಥಾನ ಬೇಡವೇ ಬೇಡ ಎಂದು ಕಾಗವಾಡ ಶಾಸಕ
ಬೆಳಗಾವಿ (ಆ.18): ನನಗೆ ಸಚಿವನಾಗಿ ಕಾರ್ಯನಿರ್ವಹಿಸಿದ ಬಗ್ಗೆ ತೃಪ್ತಿಯಿದೆ. ನನಗೆ ನಿಗಮ ಮಂಡಳಿ ಸ್ಥಾನ ಬೇಡವೇ ಬೇಡ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಕೆಳಗೆ ಬರುವುದಿಲ್ಲ. ಮೇಲಿನ ಸ್ಥಾನ ಕೊಟ್ಟರೆ ಮಾಡುತ್ತೇನೆ. ಅದು ಪಕ್ಷಕ್ಕೂ ಸರಿಯಲ್ಲ. ನನಗೂ ವೈಯಕ್ತಿಕವೂ ಸರಿಯಲ್ಲ ಎಂದರು.
ಮರಾಠ ಸಮುದಾಯಕ್ಕೆ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಮುಖಂಡರು ನಮಗೆ ಏನು ಜವಾಬ್ದಾರಿ ವಹಿಸುತ್ತಾರೋ ಅದನ್ನು ಸರಿಯಾಗಿ ನಿಭಾಯಿಸುತ್ತೇವೆ. ಪಕ್ಷದಿಂದ ನಮಗೆ ಯಾವುದೇ ಅನ್ಯಾಯವಾಗಲ್ಲ ಎಂಬ ನಂಬಿಕೆಯಿದೆ. ಅವರ ಮನಸಿನಲ್ಲಿ ಬೇರೆ ದೊಡ್ಡ ಜವಾಬ್ದಾರಿ ಕೊಡಬೇಕೆಂದಿರಬೇಕು. ಸಚಿವ ಸ್ಥಾನ ಸಿಕ್ಕಲ್ಲವೆಂದು ನಮಗೇನೂ ದೊಡ್ಡ ಆಘಾತವಾಗಿಲ್ಲ. ನೋಡೋಣ ಬೇರೆ ಜವಾಬ್ದಾರಿ ಕೊಡಬಹುದು. ಸಿಎಂ ಭೇಟಿಯಾಗಿ ನಮಗೆ ಜವಾಬ್ದಾರಿ ಕೊಡಿ ಎಂದಿದ್ದು ಅವರು ಕೂಡ ಒಪ್ಪಿದ್ದಾರೆ ಎಂದು ಹೇಳಿದರು.
ಸಚಿವರು ಸರ್ಕಾರದಲ್ಲಿ ಚೀಯರ್ ಗರ್ಲ್ಸ್ ರೀತಿ ಆಗ್ತಿದ್ದಾರೆ: ಹರಿಪ್ರಸಾದ್ ಕಿಡಿ
ಸಚಿವ ಸ್ಥಾನ ನೀಡದ್ದಕ್ಕೆ ಏನೂ ಕಾರಣ ಹೇಳಿಲ್ಲ. ಸಚಿವ ಸ್ಥಾನ ಕೊಟ್ಟರೆ ಅದನ್ನು ನಿಭಾಯಿಸುತ್ತೇವೆ. ನಾಲ್ಕು ದಿನ ಸಚಿವ ಸ್ಥಾನ ಕೊಟ್ಟಿಲ್ಲ ಅಂದರೆ ಕೈ ಬಿಟ್ಟಂಗಲ್ಲ. ಇನ್ನೂ ಸಾಕಷ್ಟುಸಮಯವಿದೆ. ಸಚಿವ ಸ್ಥಾನ ಕೊಡಬಹುದು. ಮರಾಠ ಸಮುದಾಯದವರು ಬೇಸರ ಮಾಡಿಕೊಳ್ಳಬಾರದು. ನಾಲ್ಕು ದಿನಗಳಲ್ಲಿ ನಿರ್ಧಾರವಾಗುತ್ತದೆ. ಜವಾಬ್ದಾರಿ ಕೊಡುತ್ತಾರೆ ಎಂದರು.
ಸಿಎಂ ಭೇಟಿಯಾಗಿದ್ದು ಏನಾದರೂ ಜವಾಬ್ದಾರಿ ಕೊಡೋಣ ಎಂದಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ದೊಡ್ಡ ನಿರ್ಧಾರ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ದೆಹಲಿ ಹೈಕಮಾಂಡ್ ತೆಗೆದುಕೊಂಡ ನಿರ್ಧಾರ ದೊಡ್ಡದು. ಅವರು ತೆಗೆದುಕೊಂಡ ನಿರ್ಧಾರ ತಪ್ಪು ಎಂದು ಹೇಳಲು ಬಾರದು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕೊಟ್ಟರೆ ನಾನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೇ ಖಾತೆ ದೊಡ್ಡದು, ಸಣ್ಣದೆಂದು ಇರುವುದಿಲ್ಲ. ನನಗೆ ಹಿಂದೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಜವಳಿ ಇಲಾಖೆ ಕೊಟ್ಟಿದ್ದರು. ಅಲ್ಪಸಂಖ್ಯಾತ ಸಮುದಾಯದವರು ಪಕ್ಷದತ್ತ ಬರುತ್ತಿದ್ದಾರೆ. ನಾವು ಗಡಿಬಿಡಿ ಮಾಡಬಾರದು ಎಂದು ಹೇಳಿದರು.