ಶಿರಾ ಅಭಿವೃದ್ಧಿಗೆ .3250 ಕೋಟಿ ತಂದಿದ್ದೆ: ಟಿ.ಬಿ.ಜಯಚಂದ್ರ
ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಳೆದ 10 ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ 3250 ಕೋಟಿ ರು.ಗಳಿಗೂ ಹೆಚ್ಚು ಅನುದಾನವನ್ನು ತಂದು ಶಿರಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಮಾಡಿದ್ದೇನೆ. ಮುಂದೆಯೂ ನನ್ನ ಆಶಯ ಅದೇ ಆಗಿದೆ. ಈ ಬಾರಿ ನನ್ನನ್ನು ಹರಸಿ ಗೆಲ್ಲಿಸಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು
ಶಿರಾ : ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಳೆದ 10 ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ 3250 ಕೋಟಿ ರು.ಗಳಿಗೂ ಹೆಚ್ಚು ಅನುದಾನವನ್ನು ತಂದು ಶಿರಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಮಾಡಿದ್ದೇನೆ. ಮುಂದೆಯೂ ನನ್ನ ಆಶಯ ಅದೇ ಆಗಿದೆ. ಈ ಬಾರಿ ನನ್ನನ್ನು ಹರಸಿ ಗೆಲ್ಲಿಸಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ನೀರಾವರಿ ಯೋಜನೆಗೆ 260 ಕೋಟಿ, ಜಲಸಂಪನ್ಮೂಲ ಇಲಾಖೆಗೆ 14.66 ಕೋಟಿ, ಲೋಕೋಪಯೋಗಿ ಇಲಾಖೆಗೆ 267.64 ಕೋಟಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 88.52 ಕೋಟಿ, ನಗರಸಭೆಗೆ 153.20 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 314.68, ತಾಲೂಕು ಪಂಚಾಯಿತಿಗೆ 251.27 ಕೋಟಿ ರು.ಗಳನ್ನು ಅನುದಾನ ತರಲಾಗಿದೆ. ಮುಂದೆಯೂ ಕೂಡ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದರು.
ಶಿರಾ ಕ್ಷೇತ್ರದ ಸಮಗ್ರ ಶಿಕ್ಷಣ ಅಭಿವೃದ್ಧಿಗೆ 198.34 ಕೋಟಿ ಅನುದಾನ ತಂದು ಮೊರಾರ್ಜಿ ವಸತಿ ಶಾಲೆ, ಅಲ್ಪಸಂಖ್ಯಾತರ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ತುಮಕೂರು ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸೇರಿದಂತೆ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತಂದು ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರ ಫಲವಾಗಿ ಇಂದು ಮೊರಾರ್ಜಿ ವಸತಿ ಶಾಲೆಯಲ್ಲಿ ಸುಮಾರು 3000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಆರೋಗ್ಯ ಇಲಾಖೆಗೆ 51.90 ಕೋಟಿ ಅನುದಾನ ತಂದು ಶಿರಾ ಜನತೆ ಎಂದೆಂದೂ ಮರೆಯದ 100 ಬೆಡ್‌ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸಲು ಶ್ರಮಿಸಿದ್ದೇನೆ. ಸಮಾಜ ಕಲ್ಯಾಣ ಇಲಾಖೆಗೆ 38.69 ಕೋಟಿ ಅನುದಾನ ತಂದು ರಾಜ್ಯದಲ್ಲಿ ಮಾದರಿಯಾಗಿರುವ ಪ.ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದೆ ಎಂದ ಅವರು ಡಿ.ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ 5.10 ಕೋಟಿ ತಂದು ವಿದ್ಯಾರ್ಥಿ ನಿಲಯಗಳು ಹಾಗೂ ಹಿಂದುಳಿದ ವರ್ಗಗಳ ಕಚೇರಿ ಸ್ಥಾಪಿಸಲಾಗಿದೆ ಎಂದರು.
ಕೈಗಾರಿಕಾ ಅಭಿವೃದ್ಧಿಗಾಗಿ ಕೆಐಎಡಿಬಿ ಅಭಿವೃದ್ಧಿಗೆ 269.83 ಕೋಟಿ, ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ 287.78 ಕೋಟಿ ಅನುದಾನ ತಂದು ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಈ ರಸ್ತೆಗಳು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟಕಾಪಾಡಲಾಗಿದೆ. ಇದಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿ, ದೇವಸ್ಥಾನ-ಮಸೀದಿ ಕಾಮಗಾರಿ ಹಾಗೂ ಇತರೆ ಕಾಮಗಾರಿಗಳಿಗೆ 5.74 ಕೋಟಿ ಅನುದಾನ ಖರ್ಚು ಮಾಡಲಾಗಿದೆ ಎಂದು ತಮ್ಮ ಆಡಳಿತಾವಧಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್ ಬರಗೂರು, ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ಸೂಡಾ ಮಾಜಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಮುಖಂಡರಾದ ಹುಲಿಕುಂಟೆ ಶ್ರೀರಾಮೇಗೌಡ, ಶೇಷಾನಾಯ್ಕ, ಎಸ್.ಎಲ್.ಗೋವಿಂದರಾಜು, ಬಾಂಬೆ ರಾಜಣ್ಣ ಸೇರಿದಂತೆ ಹಲವರು ಹಾಜರಿದ್ದರು.
ಸಾವಿರಾರು ಕೋಟಿ ರು.ಗಳ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ನಾನೂ ಕೈಗೊಂಡಿದ್ದರೂ ಬರದ ನಾಡನ್ನು ಸುಭೀಕ್ಷ ನಾಡನ್ನಾಗಿ ಪರಿವರ್ತಿಸಲು ಶ್ರಮಿಸಿದ್ದರೂ ಕಳೆದ ಎರಡು ಚುನಾವಣೆಗಳಲ್ಲಿ ಕ್ಷೇತ್ರದ ಜನತೆ ನನ್ನನ್ನು ಸೋಲಿಸಿದ್ದೀರಿ ಈ ನೋವು ನನಗಿದೆ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ನನ್ನ ಜೀವವಿರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ.
ಟಿ.ಬಿ.ಜಯಚಂದ್ರ ಮಾಜಿ ಸಚಿವ