ಇಂದು ಜನರ ಕೈಯಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿ ತಂತ್ರಜ್ಞಾನವಿದೆ. ಆಧುನಿಕ ಯುಗದಲ್ಲಿ ಜನರೇ ಜೇಮ್ಸ್‌ ಬಾಂಡ್‌ಗಳಾಗಿದ್ದಾರೆ. ತಪ್ಪು ಮಾಡಿದರೆ ಪೊಲೀಸರು ಸೇರಿದಂತೆ ಯಾರೊಬ್ಬರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕಿದೆ. ತಪ್ಪು ಮಾಡಿ ಕಾನೂನಿನಡಿಯಲ್ಲಿ ಮುಚ್ಚಿ ಹಾಕಲು ಸಾಧ್ಯವಿಲ್ಲ: ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಜೂ.01): ‘ಇಂದಿನ ತಂತ್ರಜ್ಞಾನ ಯುಗದಲ್ಲಿ ಜನರೇ ಜೇಮ್ಸ್‌ ಬಾಂಡ್‌ಗಳು. ತಪ್ಪು ಮಾಡಿದ ಯಾರೊಬ್ಬರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಉಪ್ಪು ತಿಂದವನು ನೀರು ಕುಡಿಯಲೇಬೇಕು. ಕಾನೂನು ಮೀರಿದರೇ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ. ಹಾಗೆ ಜನ ಜಾಗೃತರಾಗಿದ್ದಾರೆ ಎಂಬುದನ್ನು ಅರಿತು ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು..!’ ಇವು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರ ಖಡಕ್‌ ಮಾತುಗಳು.

ಬುಧವಾರ ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ ಆಯುಕ್ತರು, ನಗರ ಪೊಲೀಸ್‌ ಆಡಳಿತ ಸುಧಾರಣೆಗೆ ತಮ್ಮ ಮುಂದಿನ ಆಲೋಚನೆಗಳನ್ನು ಹಂಚಿಕೊಂಡರು.
ಸಂದರ್ಶನ ಪೂರ್ಣ ವಿವರ ಹೀಗಿದೆ.

Bengaluru ನೂತನ ಕಮಿಷನರ್ ಆಗಿ ದಯಾನಂದ್ ಅಧಿಕಾರ ಸ್ವೀಕಾರ, ಟೋಯಿಂಗ್ ಬಗ್ಗೆ ಮಾತು

*ನಗರದ ಆಡಳಿತಕ್ಕೆ ನಿಮ್ಮ ವಿಷನ್‌ ಏನು?
-‘ನೊಂದವರ ಕಣ್ಣೀರು ಒರೆಸುವುದೇ ಪೊಲೀಸ್‌ ಠಾಣೆಗಳು’ ಎನ್ನುವುದೇ ಇದೇ ನನ್ನ ವಿಷನ್‌. ಠಾಣಾ ಮಟ್ಟದಲ್ಲಿ ಜನರ ಸಮಸ್ಯೆಗಳು ಬಗೆಹರಿಯಬೇಕು. ನನ್ನ (ಆಯುಕ್ತರ) ಬಳಿಗೆ ನಾಗರಿಕರು ಅಹವಾಲು ಹೊತ್ತು ಬಂದರೆ ಅದೂ ಆ ಠಾಣಾಧಿಕಾರಿ ಅಸಮರ್ಥತೆ ಹಾಗೂ ಕರ್ತವ್ಯಲೋಪ ತೋರಿಸುತ್ತದೆ. ಈ ಮಾತನ್ನು ಡಿಸಿಪಿಗಳಿಗೆ ಮೊದಲ ಸಭೆಯಲ್ಲೇ ಹೇಳಿದ್ದೇನೆ. ಠಾಣೆಯಲ್ಲಿ ಜನರಿಗೆ ಇನ್‌ಸ್ಪೆಕ್ಟರ್‌ ಲಭ್ಯವಿರಬೇಕು. ಸಕಾಲದಲ್ಲಿ ದೂರುಗಳು ಸ್ವೀಕರಿಸಿ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ನಾನು 24 ತಾಸುಗಳು ಜನರಿಗೆ ಲಭ್ಯವಿರುತ್ತೇನೆ.

*ರಾಜಕೀಯ ಕಾರಣಗಳಿಗೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುವ ಅರೋಪವಿದೆ?
ಇಂದು ಜನರ ಕೈಯಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿ ತಂತ್ರಜ್ಞಾನವಿದೆ. ಆಧುನಿಕ ಯುಗದಲ್ಲಿ ಜನರೇ ಜೇಮ್ಸ್‌ ಬಾಂಡ್‌ಗಳಾಗಿದ್ದಾರೆ. ತಪ್ಪು ಮಾಡಿದರೆ ಪೊಲೀಸರು ಸೇರಿದಂತೆ ಯಾರೊಬ್ಬರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕಿದೆ. ತಪ್ಪು ಮಾಡಿ ಕಾನೂನಿನಡಿಯಲ್ಲಿ ಮುಚ್ಚಿ ಹಾಕಲು ಸಾಧ್ಯವಿಲ್ಲ. ಅಕ್ರಮ ಕೃತ್ಯಗಳನ್ನು ವಿಡಿಯೋ ಅಥವಾ ಫೋಟೋ ಸಮೇತ ಜನರೇ ಬಯಲುಗೊಳಿಸುತ್ತಾರೆ. ಹೀಗಾಗಿ ಜನರು ಜಾಗೃತರಾಗಿದ್ದಾರೆ ಎಂಬುದನ್ನು ಅರಿತು ಪೊಲೀಸರು ಕೆಲಸ ಮಾಡಬೇಕು. ರೌಡಿಸಂ ಸಂಪೂರ್ಣ ಬಂದ್‌ ಆಗಬೇಕು. ಅಕ್ರಮ ಚುಟವಟಿಕೆಗಳಿಗೆ ಪೊಲೀಸರು ಸಾಥ್‌ ನೀಡಿದರೆ ತಕ್ಕಶಾಸ್ತಿ ಆಗುತ್ತದೆ.

*ರಾಜ್ಯ ಗುಪ್ತದಳ ಬದಲಿಸಿದಂತೆ ನಗರದ ಗುಪ್ತದಳಕ್ಕೂ ಮರು ಜೀವ ನೀಡುತ್ತೀರಾ?
ಪೊಲೀಸ್‌ ಇಲಾಖೆಯ ಬೆನ್ನೇಲುಬೇ ಗುಪ್ತದಳವಾಗಿದೆ. ನಗರದಲ್ಲಿ ರಹಸ್ಯವಾಗಿ ನಡೆಯುವ ಭಯೋತ್ಪಾದಕ ಚಟುವಟಿಕೆಗಳು ಹಾಗೂ ಸಮಾಜಘಾತುಕ ಶಕ್ತಿಗಳ ಸಂಘಟನೆಗಳ ಬಗ್ಗೆ ಮಾಹಿತಿ ಸಂಗ್ರಹದಲ್ಲಿ ಲೋಪವಾಗಿರಬಹುದು. ಈ ವ್ಯವಸ್ಥೆಯನ್ನು ಸುಧಾರಿಸುತ್ತೇವೆ. ನಗರಕ್ಕೆ ಶಕ್ತಿಯುತವಾದ ಗುಪ್ತದಳ ರಚಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಕೋಶ ತೆರೆಯುವ ಚಿಂತನೆ ಇದೆ. ಈಗ ಅಸ್ತಿತ್ವದಲ್ಲಿರುವ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌)ಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಿ ಬಲವರ್ಧನೆಗೆ ಕ್ರಮ ಜರುಗಿಸುತ್ತೇನೆ.

*ನೀವು ಸಿಸಿಬಿ ಮುಖ್ಯಸ್ಥರಾಗಿದ್ದಾಗ ಹಿನ್ನಲೆ ಪರಿಶೀಲಿಸಿ ಪಿಐಗಳನ್ನು ನೇಮಿಸುತ್ತಿದ್ದೀರಿ. ಈಗಲೂ ಅದೇ ನಿಯಮ ಜಾರಿ ತರುತ್ತೀರಾ?
ಹೌದು ಈ ಹಿಂದೆ ಸಿಸಿಬಿಯಲ್ಲಿದ್ದಾಗ ಇನ್‌ಸ್ಪೆಕ್ಟರ್‌ಗಳ ಬ್ಯಾಕ್‌ಗ್ರೌಂಡ್‌ ಪರಿಶೀಲಿಸಿ ನೇಮಿಸಿಕೊಂಡಿದ್ದೆ. ಈಗಲೂ ಕೂಡಾ ಪೊಲೀಸ್‌ ವರ್ಗಾವಣೆಯಲ್ಲಿ ಪಾರದರ್ಶಕತೆ ತರುತ್ತೇನೆ. ನಗರಕ್ಕೆ ಎಲ್ಲರನ್ನು ನಾನೇ ಆಯ್ಕೆ ಮಾಡಿದರೆ ನನ್ನ ತಂಡ ಎಂಬ ಟೀಕೆಗಳು ಬರುತ್ತವೆ. ಹೀಗಾಗಿ ಇಲಾಖೆ ಮಟ್ಟದಲ್ಲಿ ಚರ್ಚಿಸಿ ಒಳ್ಳೆಯ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತೇನೆ.

*ಸೈಬರ್‌ ಪ್ರಕರಣಗಳ ತನಿಖೆ ಬಗ್ಗೆ ಪೊಲೀಸರಲ್ಲಿ ಮೂಡಿರುವ ಅಸಡ್ಡೆ ತೊಲಗಿಸಲು ಗಮನಹರಿಸುತ್ತೀರಾ?
ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸೈಬರ್‌ ಕ್ರೈಂಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತೇವೆ. ಈಗ ಸೈಬರ್‌ ವಂಚನೆ ಕೃತ್ಯಗಳಲ್ಲಿ ನಾಗರಿಕರ ಹಣ ಸುರಕ್ಷತೆಗೆ ಒತ್ತು ಕೊಡಲಾಗಿದೆ. ಸೈಬರ್‌ ಅಪರಾಧಿಗಳ ಪತ್ತೆಗೆ ಸವಾಲಿನ ಕೆಲಸವಾಗಿದೆ. ಹೀಗಾಗಿ ಸಿಇಎನ್‌ ಠಾಣೆಗಳಿಗೆ ತಾಂತ್ರಿಕವಾಗಿ ನುರಿತ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಇನ್ನು ಸಿಇಎನ್‌ ಠಾಣೆಗಳ ಕಾರ್ಯದೊತ್ತಡ ಕಡಿಮೆಗೊಳಿಸುವ ಸಲುವಾಗಿ ಸ್ಥಳೀಯ ಠಾಣೆಗಳಲ್ಲಿ ಕೂಡಾ ಸೈಬರ್‌ ಕ್ರೈಂ ಬಗ್ಗೆ ಪ್ರಕರಣ ದಾಖಲಿಸುವಂತೆ ಡಿಜಿಪಿ ಹೇಳಿದ್ದಾರೆ. ಗಂಭೀರ ಸ್ವರೂಪದ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಲಾಗುತ್ತದೆ. ಇಲ್ಲವೇ ಸಿಐಡಿ ನೆರವಿನಲ್ಲಿ ಸಿಇಎನ್‌ ಪೊಲೀಸರು ತನಿಖೆ ನಡೆಸಲಿದ್ದಾರೆ.

ಪೊಲೀಸ್‌ ಇಲಾಖೆಗೆ ಗ್ಯಾರಂಟಿ ಸರ್ಕಾರದ ಮೇಜರ್‌ ಸರ್ಜರಿ, ಬಿ.ದಯಾನಂದ್‌ ಬೆಂಗಳೂರು ಪೊಲೀಸ್‌ ಆಯುಕ್ತ!

*ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ಸಲ್ಲಿಸುವ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತೀರಾ?
ಸಾಮಾಜಿಕ ಜಾಲತಾಣಗಳು ನಾಗರಿಕರ ಜತೆ ನೇರವಾಗಿ ಸಂಪರ್ಕ ಸಾಧಿಸಲು ಬಹುಮುಖ್ಯ ಸಂವಹನ ಮಾಧ್ಯಮವಾಗಿವೆ. ಎಷ್ಟೋ ಸಮಸ್ಯೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿವೆ. ಇವುಗಳನ್ನು ನಿರ್ಲಕ್ಷ್ಯವಹಿಸುವ ಪ್ರಶ್ನೆಯೇ ಇಲ್ಲ. ಸೋಶಿಯಲ್‌ ಮೀಡಿಯಾವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಜನರ ನೋವಿಗೆ ಸ್ಪಂದಿಸುತ್ತೇವೆ.

*ಸಂಚಾರ ವ್ಯವಸ್ಥೆ ಸುಧಾರಣೆಗೆ ಏನಾದರೂ ನೀಲ ನಕ್ಷೆ ರೂಪಿಸಿದ್ದೀರಾ?
ಎರಡು ವರ್ಷಗಳು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ನಗರದ ಸಂಚಾರ ದಟ್ಟಣೆಗೆ ಮೂಲ ಕಾರಣಗಳೇನು ಎಂಬುದರ ಮಾಹಿತಿ ಇದೆ. ನಗರ ಸಂಚಾರ ಸಮಸ್ಯೆ ಸುಧಾರಣೆ ಪೊಲೀಸರಿಂದ ಸಂಪೂರ್ಣವಾಗಿ ಸಾಧ್ಯವಿಲ್ಲ. ಇತರೆ ಇಲಾಖೆಗಳ ಸಹಕಾರದಲ್ಲಿ ಸುಧಾರಣೆ ತರಲಾಗುತ್ತದೆ. ಟೋಯಿಂಗ್‌ ವ್ಯವಸ್ಥೆ ಮರು ಜಾರಿಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ.