ಬೆಳಗಾವಿ:(ಸೆ.26) ನನಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಯಿದೆ. 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅದೃಷ್ಟ ಖುಲಾಯಿಸಿದರೆ ನಾನು ಸಿಎಂ ಆಗಲಿದ್ದೇನೆ ಎಂದು ಮಾಜಿ ಸಚಿವ, ಹುಕ್ಕೇರಿ ಶಾಸಕ ಉಮೇಶ ಕತ್ತಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆದರೆ ಸಮಗ್ರ ಕರ್ನಾಟಕದ ಅಭಿವೃದ್ಧಿ ಮಾಡುತ್ತೇನೆ. ಕೃಷ್ಣಾ ನೀರಿನ ಉಪಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ. ಈ ಬಾರಿ ಸಚಿವ ಸ್ಥಾನ ಕೈತಪ್ಪಿದೆ ನಿಜ. ನಾನು ರಾಜಕೀಯದಲ್ಲಿ 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಬದಲಾವಣೆ ಮಾಡಿ ನೋಡಲು ಹೈಕಮಾಂಡ್ ತೀರ್ಮಾನಿಸಿದೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನನಗೆ ಯಾವುದೇ ಅಸಮಾಧಾನ ಇಲ್ಲ. ಶಾಸಕನಾಗಿ ಕ್ಷೇತ್ರದ ಕೆಲಸ ಮಾಡುತ್ತೇನೆ. ಸಿಎಂ ಆಗುವ ಸಂದರ್ಭ ಬಂದರೆ ರಾಜ್ಯ ಕಟ್ಟುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದರಿಂದ ಸದ್ಯ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಪ್ರಶ್ನೆಯೇ ಇಲ್ಲ. ಪ್ರತ್ಯೇಕ ರಾಜ್ಯದ ಹೋರಾಟ ಹುಟ್ಟು ಹಾಕಿದ್ದು ನಾನೇ. ಅನ್ಯಾಯವಾದ ಸಂದರ್ಭದಲ್ಲಿ ಧ್ವನಿ ಎತ್ತುತ್ತೇನೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಅಭಿವೃದ್ಧಿ ಕೆಲಸ ಇವೆ. ಪ್ರತ್ಯೇಕ ಕೂಗು ಎಬ್ಬಿಸುವ ಸಂದರ್ಭ ಬಂದರೆ ಹೋರಾಟಕ್ಕೆ ಸಿದ್ಧ. ಅನ್ಯಾಯವಾದಾಗ ಪ್ರತಿಭಟನೆ ಮಾಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು. 

ರಾಜ್ಯದಲ್ಲಿ ನೆರೆ ಹಾವಳಿಯಿಂದ ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದಿಲ್ಲ. ಬೆಂಗಳೂರಿನಲ್ಲೇ ಅಧಿವೇಶನ ನಡೆಯುತ್ತದೆ. ಸುವರ್ಣವಿಧಾನಸೌಧ ಕಟ್ಟಿದ್ದು ಯಡಿಯೂರಪ್ಪ. ಮುಂದಿನ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲೇ ನಡೆಸುತ್ತೇವೆ ಎಂದರು.

15  ಕ್ಷೇತ್ರದಲ್ಲಿ ಬಿಜೆಪಿ ಗೆಲವು: 

ರಾಜ್ಯದ 15  ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ಗೋಕಾಕದಿಂದ ಅಶೋಕ ಪೂಜಾರಿ, ಕಾಗವಾಡ ಕ್ಷೇತ್ರದಿಂದ ರಾಜು ಕಾಗೆ ಮತ್ತು ಅಥಣಿ ಕ್ಷೇತ್ರದಿಂದ ಲಕ್ಷ್ಮಣ ಸವದಿ ಪಕ್ಷದ ಪ್ರಮುಖ ಆಕಾಂಕ್ಷಿಗಳಿದ್ದಾರೆ. ಆದರೆ, ಅನರ್ಹ ಶಾಸಕರ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಸುಪ್ರೀಂ ತೀರ್ಪು ಪ್ರಕಟಿಸಿದ ಬಳಿಕ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆಗಳಿವೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಕೆಲಸ ಇಲ್ಲದ್ದಕ್ಕೆ ಕೈ ರ‍್ಯಾಲಿ: 

ರಾಜ್ಯದ ನೆರೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಕಾಂಗ್ರೆಸ್‌ನವರಿಗೆ ಮಾಡಲು ಏನೂ ಕೆಲಸ ಇಲ್ಲ. ಹಾಗಾಗಿ, ಬೆಳಗಾವಿಯಲ್ಲಿ ರ‍್ಯಾಲಿ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿಲ್ಲ. ಈಗ ಪ್ರತಿಭಟನಾ ರ‍್ಯಾಲಿ ಮಾಡುತ್ತಿದ್ದಾರೆ ಎಂದರು. ಯಡಿಯೂರಪ್ಪ ಗುಡುಗಿದರೆ ಇಂದಿಗೂ ವಿಧಾನಸಭೆ ನಡಗುತ್ತದೆ ಎಂಬುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದರು.

ಮತ್ತೊಮ್ಮೆ ಅವಕಾಶ ಸಿಕ್ಕರೆ ಬೆಳಗಾವಿ ಅಭಿವೃದ್ಧಿಗೆ ಬದ್ಧ. ನನ್ನ ವಿರುದ್ಧ ಷಡ್ಯಂತ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಚಿವ ಸ್ಥಾನ ಯಾರಿಂದಲೂ ತಪ್ಪಲ್ಲ. ಅದು ಹಣೆ ಬರಹದಲ್ಲಿ ಬರೆದಿರಬೇಕು. ಹಣೆಬರಹದಲ್ಲಿ ಇದ್ದರೆ ಸಚಿವ ಸ್ಥಾನ ಮನೆಗೆ ಬರುತ್ತದೆ ಎಂದು ಹೇಳಿದ್ದಾರೆ.