ಕಲ್ಲಿನಿಂದ ಹೊಡೆದು ಕತ್ತೆ ಕಿರುಬ ಹತ್ಯೆ: ಪ್ರಾಣಿಪ್ರಿಯರ ಆಕ್ರೋಶ
* ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಬಳಿ ನಡೆದ ಘಟನೆ
* ಕೊಡಲಿಯಿಂದ ದಾಳಿ ನಡೆಸಿ ಕೊಂದು ವಿಕೃತಿ ಮೆರೆದ ಜನ
* ಮನುಷ್ಯನನ್ನು ಕಂಡರೆ ಭಯಪಡುವ ಪ್ರಾಣಿ
ಲಿಂಗಸಗೂರು(ಜೂ.12): ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ ಹೋಬಳಿಯಲ್ಲಿ ಕತ್ತೆ ಕಿರುಬವನ್ನು ಕೆಲವರು ಹೊಡೆದು ಸಾಯಿಸಿದ್ದು, ಇದಕ್ಕೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡೆಗಳ ನಡುವೆ ಇದ್ದ ಕತ್ತೆ ಕಿರುಬದ ಮೇಲೆ ಕಲ್ಲು, ಬಡಿಗೆ, ಕೊಡಲಿಯಿಂದ ದಾಳಿ ನಡೆಸಿ ಕೊಂದು ವಿಕೃತಿ ಮೆರೆದಿದ್ದು, ಹಲ್ಲೆ ನಡೆಸುವ ದೃಶ್ಯಗಳು ವೈರಲ್ ಆಗಿವೆ. ಹಲ್ಲೆಕೋರರಿಂದ ತಪ್ಪಿಸಿಕೊಂಡು ಕತ್ತೆಕಿರುಬ ಬಂಡೆಗಳ ಗವಿಯೊಳಗೆ ಹೋದರೂ ಬಿಡದೆ, ಕಲ್ಲಿನಿಂದ ಹೊಡೆದು ಅದರ ಕಾಲು ಮುರಿದು, ಹೊರಗೆಳೆದು ಕೊಡಲಿ, ಬಡಿಗೆಯಿಂದ ಬಡಿದು ಸಾಯಿಸಲಾಗಿದೆ. ದಾಳಿಯ ದೃಶ್ಯ ವೈರಲ್ ಆಗಿದ್ದರೂ ರಾಯಚೂರು ಜಿಲ್ಲಾ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ರಾಯಚೂರು: ಸರ್ಕಾರದ ಯೋಜನೆ ಕೊನೆಯ ವ್ಯಕ್ತಿಗೂ ಮುಟ್ಟಬೇಕು: ಶಾಸಕ ದದ್ದಲ್
ಕತ್ತೆ ಕಿರುಬವನ್ನು ಅಟ್ಟಾಡಿಸಿ ಹತ್ಯೆಗೈದಿರುವುದು ಹೇಯಕೃತ್ಯವಾಗಿದೆ. ಈ ಬಗ್ಗೆ ಕ್ರಮ ಜರುಗಿಸಬೇಕೆಂದು ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.
ಕತ್ತೆ ಕಿರುಬ ಒಂದು ನಿಶಾಚರಿ ಪ್ರಾಣಿಯಾಗಿದ್ದು, ಸತ್ತ ಪ್ರಾಣಿಗಳನ್ನು ತಿನ್ನುತ್ತದೆ. ಬೇಟೆಯಾಡುವ ಇತರ ಪ್ರಾಣಿಗಳು ತಿಂದು ಮಿಗಿಸಿದುದು ಇದರ ಪಾಲಿಗೆ ಆಹಾರ. ನಿಶಾಚರಿಯಾದ್ದರಿಂದ ಸಾಮಾನ್ಯವಾಗಿ ಒಂಟಿಯಾಗಿಯೇ ಜೀವಿಸುತ್ತದೆ. ಆಹಾರವನ್ನು ವಾಸನೆಯಿಂದ ಪತ್ತೆ ಹಚ್ಚುತ್ತದೆ. ಮನುಷ್ಯನನ್ನು ಕಂಡರೆ ಭಯಪಡುವ ಈ ಪ್ರಾಣಿ ಅವನು ವಾಸಿಸುವ ಸ್ಥಳಗಳಿಂದ ದೂರವೇ ಇರುತ್ತದೆ.