ಬಾಗಲಕೋಟೆ(ಮೇ.06): ಮದ್ಯ ಕುಡಿಯಲು ಹಣ ಕೊಡದ ಪತ್ನಿಗೆ ಪತಿ ಹಿಂಬದಿಯಿಂದ ಸ್ಕೂಟರ್‌ ಡಿಕ್ಕಿ ಹೊಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ಸೋಮವಾರ ನಡೆದಿದ್ದು, ಸ್ಕೂಟರ್‌ ಡಿಕ್ಕಿಯ ರಭಸಕ್ಕೆ ಗಾಯಗೊಂಡಿದ್ದ ಪತ್ನಿಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ರಾತ್ರಿಯೇ ಸಾವನ್ನಪ್ಪಿದ್ದಾರೆ.

ಇಳಕಲ್ಲ ನಗರದ ಶಾರದಾ ಚೌವ್ಹಾಣ(36) ಎಂಬುವರು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮಗ ರಾಮು ನೀಡಿದ ದೂರಿನ ಮೇರೆಗೆ ಪತಿ ಚಂದಪ್ಪ ಎಂಬುವರನ್ನು ಪೊಲೀಸರು ಸ್ಕೂಟರ್‌ ಸಮೇತ ವಶಕ್ಕೆ ಪಡೆದಿದ್ದಾರೆ.

ಗರ್ಭಿಣಿಗೆ ಕೊರೋನಾ ಸೋಂಕು: ಉಡಿ ತುಂಬಿದವರಿಗೆ ಆತಂಕ 

ಪತ್ನಿ ಶಾರದಾ ಇಳಕಲ್ಲ ನಗರದ ಜೋಶಿ ಗಲ್ಲಿಯಲ್ಲಿ ಬಾಂಡೆ ತಿಕ್ಕುವ ಕೆಲಸಕ್ಕೆ ಹೋಗಿ ಬರುವಾಗ ಕುಡಿಯಲು ಹಣ ಕೇಳಿದ ಪತಿಗೆ ಹಣ ನೀಡದ ಕಾರಣಕ್ಕೆ ಸಿಟ್ಟಾಗಿ ಸ್ಕೂಟರ್‌ನಿಂದ ಡಿಕ್ಕಿ ಹೊಡಿಸಿದ್ದನು. ಇದರಿಂದ ತಲೆ ಹಾಗೂ ಭುಜಕ್ಕೆ ಗಂಭೀರ ಗಾಯವಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಾರದಾ ಸಾವನ್ನಪ್ಪಿದ್ದಾರೆ. ಇಳಕಲ್ಲ ನಗರ ಪಿಎಸ್‌ಐ ರಮೇಶ ಜಲಗಾರ ಪ್ರಕರಣ ದಾಖಲಿಸಿಕೊಂಡು ಆರೋಪಿ ಚಂದಪ್ಪನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.