ಬಾಗಲಕೋಟೆ (ಮೇ. 05): ಬಾದಾಮಿ ತಾಲೂಕಿನ ಡಾಣಕ ಶಿರೂರು ಗ್ರಾಮದ ಐದು ತಿಂಗಳ ಗರ್ಭಿಣಿಯೊಬ್ಬಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದೀಗ ಆಕೆಗೆ ಸೀಮಂತ ಕಾರ್ಯಕ್ರಮ ವೇಳೆ ಉಡಿ ತುಂಬಿದ್ದ ಮಹಿಳೆಯರಿಗೆ ಆತಂಕ ಶುರುವಾಗಿದೆ.

ಇದೀಗ ಸೋಂಕಿತ ಗರ್ಭಿಣಿ ಜೊತೆ ಸಂಪರ್ಕ ಹೊಂದಿದ್ದ ಮಹಿಳೆಯರನ್ನು ಪತ್ತೆ ಹಚ್ಚುವ ಕಾರ್ಯ ಜಿಲ್ಲಾಡಳಿತದ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಸದ್ಯ 115 ಪ್ರಥಮ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರೆಂದು ಗುರುತಿಸಲಾಗಿದ್ದು, ಭಾನುವಾರ ತಡರಾತ್ರಿಯೇ ಗರ್ಭಿಣಿಯ ಪತಿ, ಅತ್ತೆ, ಮಾವ ಸೇರಿ ಒಂಬತ್ತು ಜನರ ಗಂಟಲ ದ್ರವದ ಮಾದರಿಗಳನ್ನು ಲ್ಯಾಬ್‌ಗೆ ಕಳಿಸಿಕೊಡಲಾಗಿದೆ.

ಕೊರೋನಾ ಎಚ್ಚರ ತಪ್ಪಿದರೆ ಅಪಾಯ: ದೇಶದ ಜನತೆಗೆ ಕೇಂದ್ರದ ಎಚ್ಚರಿಕೆ!

ಜೊತೆಗೆ ಡಾಣಕ ಶಿರೂರು ಗ್ರಾಮವನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ತಂಡ ತಂಡವಾಗಿ ಇಡೀ ಗ್ರಾಮವನ್ನು ಸರ್ವೆ ಮಾಡಲು ಆರಂಭಿಸಿದೆ ಎಂದು ಡಿಎಚ್‌ಒ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ.