ವರದಿ - ವೆಂಕಟೇಶ್‌ ಕಲಿಪಿ

 ಬೆಂಗಳೂರು/ಮಂಗಳೂರು (ನ.23):  27 ವರ್ಷಗಳ ಹಿಂದೆ ವಿಚ್ಛೇದಿತ ಪತ್ನಿಯ ಮನೆ ವಿಳಾಸ ಮತ್ತು ಕಚೇರಿಗೆ ತೆರೆದ ಅಂಚೆ ಪತ್ರ ಬರೆದು ‘ಹುಟ್ಟು ವೇಶ್ಯೆ’ ಎಂಬುದಾಗಿ ದೂಷಿಸಿದ ವ್ಯಕ್ತಿ ಇದೀಗ ಜೈಲುಪಾಲಾಗಿದ್ದಾನೆ!

ವಿಚ್ಛೇದಿತ ಪತ್ನಿಗೆ ಮಾನನಷ್ಟಉಂಟು ಮಾಡಿದ ಪ್ರಕರಣದಲ್ಲಿ ಮಂಗಳೂರಿನ ನಿವಾಸಿ ಕೋಚು ಶೆಟ್ಟಿಎಂಬಾತನಿಗೆ ಹೈಕೋರ್ಟ್‌ ಒಂದು ವರ್ಷ ಜೈಲು ಮತ್ತು ಐದು ಸಾವಿರ ರು. ದಂಡ ವಿಧಿಸಿದೆ. ಅಲ್ಲದೆ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಮತ್ತೆ 30 ದಿನ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.

ಪತ್ರದಲ್ಲಿನ ದೋಷಿಯ ಕೈ ಬರಹ ಮತ್ತು ವಿಚ್ಛೇದಿತ ಪತ್ನಿಯ ಹೇಳಿಕೆಯನ್ನೇ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ಹೈಕೋರ್ಟ್‌ ಈ ಆದೇಶ ಮಾಡಿದೆ. ಇದರಿಂದ ಸದ್ಯ 67 ವರ್ಷದ ಕೋಚು ಶೆಟ್ಟಿಜೈಲುವಾಸ ಅನುಭವಿಸಬೇಕಿದೆ.

ಹಾಸನದಿಂದ ತುಮಕೂರಿಗೆ ತೇಲಿಬಂದ ಪ್ರೇಮಿಗಳ ಶವ : ಏನಿದು ಕೇಸ್..?

ಪತ್ರದಲ್ಲಿ ಇರುವ ಕೈ ಬರಹವು ಶೆಟ್ಟಿಅವರದ್ದೇ ಎಂದು ಕೈ ಬರಹದ ತಜ್ಞರು ಪರೀಕ್ಷೆ ನಡೆಸಿ ದೃಢೀಕರಿಸಿದ್ದಾರೆ. ಆತನ ವಿಚ್ಛೇದಿತ ಪತ್ನಿ ಲಕ್ಷ್ಮೇ ವಾಸವಿದ್ದ ಮನೆಗೆ ಮತ್ತು ಕೆಲಸ ಮಾಡುತ್ತಿದ್ದ ಬ್ಯಾಂಕಿನ ವ್ಯವಸ್ಥಾಪಕರಿಗೆ ಪತ್ರ ಬರೆದಿರುವುದೂ ಸಾಕ್ಷ್ಯಧಾರಗಳಿಂದ ದೃಢಪಟ್ಟಿದೆ.

ಪ್ರಕರಣದಲ್ಲಿ ಶೆಟ್ಟಿತಮ್ಮ ಮಾಜಿ ಪತ್ನಿಯ ಹೆಣ್ತನವನ್ನು ಪ್ರಶ್ನಿಸಿದಲ್ಲದೇ ‘ಆಕೆ ಶೀಲವಂತೆಯಲ್ಲ, ಹುಟ್ಟು ವೇಶ್ಯೆ’ ಎಂಬುದಾಗಿ ದೂಷಿಸಿ ತೇಜೋವಧೆ ಮಾಡಿದ್ದಾರೆ. ಆದರೆ, ಪತ್ರಿಕೆಯಲ್ಲಿ ಪ್ರಕಟಣೆ ನೀಡಿಲ್ಲವೆಂದು ತಿಳಿಸಿ ಆತನನ್ನು ಖುಲಾಸೆಗೊಳಿಸಿದ ಸೆಷನ್ಸ್‌ ಕೋರ್ಟ್‌ ಕ್ರಮ ತಪ್ಪು. ವಾಸ್ತವವಾಗಿ ತೆರೆದ ಅಂಚೆ ಕಾರ್ಡ್‌ ಹಾಗೂ ಪತ್ರ ಬರೆದಿರುವುದೇ ಪ್ರಕಟಣೆಯಂತಾಗಿದೆ ಎಂದು ತೀರ್ಮಾನಿಸಿದ ಹೈಕೋರ್ಟ್‌, ಜೆಎಂಎಫ್‌ಸಿ ನ್ಯಾಯಾಲಯವು ಶೆಟ್ಟಿಗೆ ವಿಧಿಸಿದ್ದ ಒಂದು ವರ್ಷ ಜೈಲು ಮತ್ತು 5 ಸಾವಿರ ರು. ದಂಡವನ್ನು ಕಾಯಂಗೊಳಿಸಿತು. ಹಾಗೆಯೇ, ಕೂಡಲೇ ಶೆಟ್ಟಿಯನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.

ವಿಚ್ಛೇದನವಾದ 15 ವರ್ಷ ಬಳಿಕ ಪತ್ರ:

ಮಂಗಳೂರಿನ ಬಜ್ಪೆಯಲ್ಲಿ ವಾಸವಾಗಿರುವ ಲಕ್ಷ್ಮಿ(63) ಮತ್ತು ಎಲಿಂಜೆ ಗ್ರಾಮ ನಿವಾಸಿ ಕೋಚು ಶೆಟ್ಟಿ(67) ಅವರು1974ರ ನ.5ರಲ್ಲಿ ಮದುವೆಯಾಗಿದ್ದರು. ಭಿನ್ನಾಭಿಪ್ರಾಯಗಳಿಂದ ದಾಂಪತ್ಯ ಜೀವನ ಮುಂದುವರಿಸಲು ಬಯಸದೆ 1978ರ ಆ.9ರಂದು ನ್ಯಾಯಾಲಯದಿಂದ ವಿಚ್ಛೇದನ ಪಡೆದುಕೊಂಡು ಪ್ರತ್ಯೇಕ ವಾಸ ಮಾಡುತ್ತಿದ್ದರು. ಆದರೆ, 1993ರಿಂದ ಲಕ್ಷ್ಮೇ ಅವರು ವಾಸವಿದ್ದ ಮನೆಯ ವಿಳಾಸ, ಉದ್ಯೋಗ ಮಾಡುತ್ತಿದ್ದ ಬ್ಯಾಂಕಿನ ವ್ಯವಸ್ಥಾಪಕರು, ಸಹೋದ್ಯೋಗಿಗಳಿಗೆ ತೆರೆದ ಅಂಚೆ ಕಾರ್ಡ್‌ ಹಾಗೂ ಪತ್ರ ಬರೆದಿದ್ದ ಶೆಟ್ಟಿ, ‘ಲಕ್ಷ್ಮೇ ಶೀಲವಂತಳಲ್ಲ. ಆಕೆ ಹುಟ್ಟು ವೇಶ್ಯೆ’ ಎಂದು ನಿಂದಿಸಿದ್ದರು. ಜತೆಗೆ, ಈ ಕುರಿತು ಪತ್ರಿಕಾ ಪ್ರಕಟಣೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದರು. ಆ ಪತ್ರವನ್ನು ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಸಹೋದ್ಯೋಗಿಗಳು ಓದಿದ್ದರು.

ಶೆಟ್ಟಿಯ ಈ ಧೋರಣೆ ನಾಲ್ಕು ವರ್ಷ ಮುಂದುವರಿದಿತ್ತು. ಅಂತಿಮವಾಗಿ 1997ರಲ್ಲಿ ಲಕ್ಷ್ಮೇ ಮಾನನಷ್ಟಮತ್ತು ಅವಮಾನ ಆರೋಪದಡಿ ಮೊಕ್ಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ಎರಡನೇ ಜೆಎಂಎಫ್‌ಸಿ ನ್ಯಾಯಾಲಯವು ಮಾನನಷ್ಟಪ್ರಕರಣದಲ್ಲಿ ಶೆಟ್ಟಿಯನ್ನು ದೋಷಿಯನ್ನಾಗಿ ತೀರ್ಮಾನಿಸಿತು. ಜತೆಗೆ, ಒಂದು ವರ್ಷ ಜೈಲು ಮತ್ತು ಐದು ಸಾವಿರ ರು. ದಂಡ ವಿಧಿಸಿ 2006ರ ನ.29ರಂದು ತೀರ್ಪು ನೀಡಿತ್ತು.

ಪತ್ರ ಬರೆದ 27 ವರ್ಷ ನಂತರ ಶಿಕ್ಷೆ:  ಈ ಆದೇಶವನ್ನು ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ರದ್ದುಪಡಿಸಿತ್ತು. ಲಕ್ಷ್ಮೇ ಅವರಿಗೆ ತೇಜೋವಧೆ ಮಾಡಿರುವುದಕ್ಕೆ ಸೂಕ್ತ ಸಾಕ್ಷ್ಯಧಾರಗಳಿಲ್ಲ ಹಾಗೂ ಪತ್ರಿಕಾ ಪ್ರಕಟಣೆ ನೀಡಿಲ್ಲ ಎಂದು ತಿಳಿಸಿದ್ದ ಸೆಷನ್ಸ್‌ ಕೋರ್ಟ್‌, ಶೆಟ್ಟಿಯನ್ನು ಖುಲಾಸೆಗೊಳಿಸಿ 2010ರ ಸೆ.3ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ 2010ರಲ್ಲಿ ಲಕ್ಷ್ಮೇ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯು 2010ರಿಂದಲೂ ವಿಚಾರಣೆ ನಡೆಯುತ್ತಿತ್ತು. ಮೇಲ್ಮನವಿಯ ವಿಚಾರಣೆಯನ್ನು 2020ರ ನ.4ರಂದು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ ಅವರು ಶೆಟ್ಟಿಗೆ ಜೈಲು ಶಿಕ್ಷೆ ವಿಧಿಸಿ ನ.11ರಂದು ತೀರ್ಪು ಪ್ರಕಟಿಸಿದ್ದಾರೆ.