ಬೆಂಗಳೂರು (ಫೆ.16):  ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ಸಮೀಪದ ಮೋರಿಯೊಂದರಲ್ಲಿ ಮಾನವ ಅಸ್ಥಿ ಪಂಜರವೊಂದು ಪತ್ತೆಯಾಗಿದೆ.

ಸುಮಾರು ನಾಲ್ಕು ವರ್ಷ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್‌ ಠಾಣೆಯ ಮುಂದಿರುವ ಎಚ್‌ಬಿಆರ್‌ ಕಲ್ಯಾಣ ಮಂಟಪದ ಬಳಿಯ ಕಲ್ಲು ಮುಚ್ಚಿದ ಮೋರಿಯಲ್ಲಿ ಕಸಗಳು ತುಂಬಿ ಚರಂಡಿ ನೀರು ಮುಂದೆ ಸಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಹೀಗಾಗಿ ಸೋಮವಾರ ಮಧ್ಯಾಹ್ನ ಬಿಬಿಎಂಪಿ ಸಿಬ್ಬಂದಿ ಮೋರಿಯ ಕಲ್ಲನ್ನು ತೆಗೆದು ಚರಂಡಿ ಸ್ವಚ್ಛಗೊಳಿಸುತ್ತಿದ್ದರು. ಆ ವೇಳೆ ಶವದ ಅಸ್ಥಿ ಪಂಜರ ಪತ್ತೆಯಾಗಿದೆ. ಕೂಡಲೇ ಬಿಬಿಎಂಪಿ ಸಿಬ್ಬಂದಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು.

ಕುಡಿದು ಜಗ​ಳ: ಯುವ​ಕನನ್ನ ಕೊಂದ ಚಿಕ್ಕಪ್ಪ ..

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಮೃತ ದೇಹದ ಡಿಎನ್‌ಐ ಹಾಗೂ ಸಿಕ್ಕ ಸ್ಥಳದಲ್ಲಿನ ಮಣ್ಣನ್ನು ಕೂಡ ಸಂಗ್ರಹಕ್ಕೆ ಪಡೆಯಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಎಂ.ಪಾಟೀಲ್‌ ತಿಳಿಸಿದರು.

ಬಿಬಿಎಂಪಿ ವತಿಯಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಚರಂಡಿ ಮೇಲೆ ಚಪ್ಪಡಿಗಳನ್ನು ಹಾಕಲಾಗಿತ್ತು. ಹೀಗಾಗಿ 4 ವರ್ಷದಿಂದ ಇತ್ತೀಚಿನವರೆಗೂ ಕಾಣೆಯಾಗಿ ಪತ್ತೆಯಾಗದೇ ಇರುವ ಪ್ರಕರಣಗಳ ಕುರಿತು ತನಿಖೆ ನಡೆಸುತ್ತೇವೆ ಎಂದು ಡಿಸಿಪಿ ತಿಳಿಸಿದ್ದಾರೆ.