ಬೆಂಗಳೂರು [ನ.28]:  ಹುಳಿಮಾವು ಕೆರೆ ಏರಿ ಒಡೆದು ಕೊಚ್ಚಿ ಹೋಗಿದ್ದ ಬದುಕುಗಳ ಕಟ್ಟಿಕೊಳ್ಳುವ ಸಂತ್ರಸ್ತರ ಹೆಣಗಾಟ ನಾಲ್ಕನೇ ದಿನವೂ ಮುಂದುವರೆದಿದ್ದು, ಕೊಳಚೆ ರಾಡಿಯಂತಾಗಿದ್ದ ಮನೆಗಳ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಬುಧವಾರವೂ ನಿರತರಾಗಿದ್ದರು. ಮನೆಯಿಲ್ಲದೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಬಿಬಿಎಂಪಿಯಿಂದ ಊಟ, ಕುಡಿಯುವ ನೀರು ಹಾಗೂ ದಿನಸಿ ಕಿಟ್‌ ವಿತರಿಸಲಾಯಿತು.

ಕಳೆದ ಭಾನುವಾರ ಮಧ್ಯಾಹ್ನ ಏಕಾಏಕಿ ಹುಳಿಮಾವು ಕೆರೆ ಏರಿ ಒಡೆದು ಸುಮಾರು ಆರೇಳು ಬಡಾವಣೆಯ 630 ಮನೆಗಳಿಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳ ಬದುಕನ್ನು ಕ್ಷಣಾರ್ಧದಲ್ಲಿ ಬೀದಿಗೆ ತಂದು ನಿಲ್ಲಿಸಿತ್ತು. ನೀರು ನುಗ್ಗಿದ್ದ ಕೃಷ್ಣಾ ಲೇಔಟ್‌ನ ನಿವಾಸಿಗಳು ಬುಧವಾರವೂ ತಮ್ಮ ಮನೆಯನ್ನು ಸ್ವಚ್ಛಗೊಳಿಸುವುದರಲ್ಲಿ ತೊಡಗಿಸಿಕೊಂಡಿದ್ದರು. ಹಗಲು ವೇಳೆಯಲ್ಲಿ ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರುವ ನಿವಾಸಿಗಳು ರಾತ್ರಿಯಾಗುತ್ತಿದ್ದಂತೆ ಬಿಬಿಎಂಪಿ ನಿರ್ಮಿಸಿದ ನಿರಾಶ್ರಿತ ಕೇಂದ್ರಕ್ಕೆ ತೆರಳಿ ತಂಗುತ್ತಿದ್ದಾರೆ.

ಸುಮಾರು 200 ಮಂದಿ ನಿರಾಶ್ರಿತ ಕೇಂದ್ರದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಇಂದಿರಾ ಕ್ಯಾಂಟೀನ್‌ನಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ಸಂಜೆ ಊಟ ವಿತರಣೆ ಮಾಡಲಾಗಿದೆ. ಗುರುವಾರ ರಾತ್ರಿವರೆಗೆ ಊಟ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಳಿಮಾವು ಕೆರೆ ಲೋಕಾಯುಕ್ತ ಅಂಗಳಕ್ಕೆ, ಯಾರ್ಯಾರಿಗೆ ಗ್ರಹಚಾರ!...

ಪರಿಹಾರ:  156 ಕುಟುಂಬಗಳಿಗೆ ತಲಾ .50 ಸಾವಿರ ಪರಿಹಾರ ನೀಡುವುದಕ್ಕೆ ಬಿಬಿಎಂಪಿ ತೀರ್ಮಾನಿಸಿತ್ತು. ಅದರಲ್ಲಿ ಬುಧವಾರ 153 ಸಂತ್ರಸ್ತರಿಗೆ ಆರ್‌ಟಿಜಿಎಸ್‌ ಮೂಲಕ ಬ್ಯಾಂಕ್‌ ಖಾತೆಗೆ ಪರಿಹಾರ ಮೊತ್ತ ಜಮಾ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ 3 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವರ್ಗಾವಣೆ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ವಸ್ತುಗಳು ಹಾಳಾದ ಸಂತ್ರಸ್ತರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಮಂಗಳವಾರ ಬಿಬಿಎಂಪಿ ಅಧಿಕಾರಿಗಳು ಕೆರೆ ಏರಿ ಒಡೆದು ಒಟ್ಟು ಎಂಟು ಬಡಾವಣೆಯ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಹಾಳಾದ ಮನೆಗಳ ಸಂಖ್ಯೆ 319ರಿಂದ 353ಕ್ಕೆ ಏರಿಕೆಯಾಗಿದೆ. ಈ ನಡುವೆ ಅಪಾರ್ಟ್‌ಮೆಂಟ್‌, ದೊಡ್ಡ ಮನೆಯಲ್ಲಿ ವಾಸಿಸುವ 197 ಆರ್ಥಿಕ ಸ್ಥಿತಿವಂತರು ಬಿಬಿಎಂಪಿಯ .50 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.

 ಮೋಸವಾಗದಂತೆ ಎಚ್ಚರಿಕೆ: ಆಯುಕ್ತರು

ಹುಳಿಮಾವು ಕೆರೆಯ ಏರಿ ಒಡೆದದ್ದರಿಂದ ಸಂತ್ರಸ್ತರಾಗಿರುವ ಬಡವರಿಗೆ ಪರಿಹಾರ ನೀಡುವುದರಲ್ಲಿ ಯಾವುದೇ ಮೋಸವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹೇಳಿದ್ದಾರೆ.

ಈ ಸಂಬಂಧ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಆದ್ಯತೆಯ ಮೇಲೆ ಪರಿಹಾರ ನೀಡಲಾಗಿದೆ. ಉಳಿದ 200 ಕುಟುಂಬಗಳಲ್ಲಿ ಕೆಲವರು ಆರ್ಥಿಕವಾಗಿ ಸದೃಢವಾಗಿದ್ದು, ಅವರಿಗೆ ಪರಿಹಾರ ನೀಡುವ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.

ಬಿಬಿಎಂಪಿಗೆ ವಂಚನೆ: ಈ ಭಾಗದಲ್ಲಿ ಕೆಲವರು ದಾಖಲೆಗಳಲ್ಲಿ ಪಾರ್ಕಿಂಗ್‌ ತಾಣ ಎಂದು ತೋರಿಸಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ನಡೆಸಿರುವುದು ಕಂಡು ಬಂದಿದೆ. ಈ ರೀತಿ ಬಿಬಿಎಂಪಿಗೆ ವಂಚನೆ ಮಾಡಿದವರಿಗೆ ಬಿಬಿಎಂಪಿಯಿಂದ ಯಾವುದೇ ಪರಿಹಾರ ನೀಡುವುದಿಲ್ಲ. ಮೋಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅನಿಲ್‌ಕುಮಾರ್‌ ತಿಳಿಸಿದ್ದಾರೆ.