Koppal: ಹುಲಿಗೆಮ್ಮ ರಥೋತ್ಸವದಲ್ಲಿ 3 ಲಕ್ಷ ಭಕ್ತರು ಭಾಗಿ..!
* ಉಧೋ, ಉಧೋ, ಹುಲಿಗೆಮ್ಮ ತಾಯಿ... ಉದ್ಘೋಷದಲ್ಲಿ ಭಾವ ಪರವಶವಾದ ಭಕ್ತರು
* ಪ್ರಾಣಿಬಲಿ ತಡೆಗೆ ತಂಡ
* 2020 ಹಾಗೂ 2021ರಲ್ಲಿ ಕೊರೋನಾ ಹಿನ್ನೆಲೆ ರಥೋತ್ಸವ ಸ್ಥಗಿತಗೊಳಿಸಿದ್ದ ಜಿಲ್ಲಾಡಳಿತ
ಮುನಿರಾಬಾದ(ಮೇ.25): ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಿಯ ಮಹಾರಥೋತ್ಸವವು ಮಂಗಳವಾರ 3 ಲಕ್ಷಕ್ಕೂ ಹೆಚ್ಚು ಭಕ್ತರ ‘ಉಧೋ, ಉಧೋ, ಹುಲಿಗೆಮ್ಮ ತಾಯಿ’ ಹರ್ಷೋದ್ಗಾರದ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದ ಅರ್ಚಕರು ಅಮ್ಮನವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಸ್ಥಾನದ ಸುತ್ತ ಪ್ರದರ್ಶನ ಹಾಕಿದರು. ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಹುಲಿಗೆಮ್ಮ ದೇವಿ ಉತ್ಸವಮೂರ್ತಿ ಹೊತ್ತ ರಥ ದೇವಸ್ಥಾನದಿಂದ ಮುದ್ದಮ್ಮ ಕಟ್ಟೆಯವರಿಗೆ ಹೋಗಿ, ಬಳಿಕ ದೇವಸ್ಥಾನಕ್ಕೆ ಮರಳಿತು. ರಥೋತ್ಸವದ ಸಂದರ್ಭದಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತಾದಿಗಳು ಬಾಳೆಹಣ್ಣು ಹಾಗೂ ಉತ್ತತ್ತಿಯನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು.
ಪರಿಷತ್ ಟಿಕೆಟ್ ಗಿಟ್ಟಿಸಿಕೊಂಡ ಗಟ್ಟಿಗಿತ್ತಿ ಹೇಮಲತಾ ನಾಯಕ ಯಾರು? ಹೈಕಮಾಂಡ್ ಗುರುತಿಸಿದ್ದೇಗೆ?
ಕಳೆದ ಎರಡು ವರ್ಷ ಅಂದರೆ 2020 ಹಾಗೂ 2021ರಲ್ಲಿ ಕೊರೋನಾ ಮಹಾಮಾರಿ ಹಿನ್ನೆಲೆ ಮಹಾರಥೋತ್ಸವವನ್ನು ಜಿಲ್ಲಾಡಳಿತವು ಸ್ಥಗಿತಗೊಳಿಸಿತ್ತು. ಎರಡು ವರ್ಷದ ನಂತರ ರಥೋತ್ಸವ ನಡೆದಿದ್ದು, ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸಿದ್ದರು.
ಪ್ರಾಣಿಬಲಿ ತಡೆಗೆ ತಂಡ:
ಜಿಲ್ಲಾಡಳಿತ ಪ್ರಾಣಿಬಲಿ ನಿಷೇಧಿಸಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಹೊಸಪೇಟೆ ರಸ್ತೆ, ಶಿವಪುರ ರಸ್ತೆ, ಹಿಟ್ನಾಳ ರಸ್ತೆ ಹಾಗೂ ಮುದ್ಲಾಪುರ ರಸ್ತೆಯಲ್ಲಿ 4 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಬರುವ ಪ್ರತಿ ವಾಹನವನ್ನು ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಗುವುದು. ಯಾರಾದರೂ ಕುರಿ ಅಥವಾ ಕೋಳಿಯನ್ನು ತರುವುದು ಕಂಡುಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಗ್ರಾಮೀಣ ಸಿಪಿಐ ವಿಶ್ವನಾಥ ಹಿರೇಗೌಡರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಜಾತ್ರೆ ಸುಸೂತ್ರವಾಗಿ ನಡೆಯಲು 2 ಸಿಪಿಐ, 7 ಜನ ಪಿಎಸ್‌ಐ, 25 ಜನ ಎಎಸ್‌ಐ, 42 ಜನ ಮುಖ್ಯ ಪೇದೆಗಳು, 80 ಪೇದೆಗಳು, 13 ಮಹಿಳಾ ಪೇದೆಗಳು, 4 ಮೀಸಲು ವಾಹನಗಳು ಹಾಗೂ 100 ಜನ ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಭಕ್ತರಿಗೆ ಸುರಕ್ಷತೆಗಾಗಿ ದೇವಸ್ಥಾನ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ಮತ್ತು ಹೊಳೆದಂಡೆಯಲ್ಲಿ ಸುಮಾರು 87 ಸಿಸಿ ಕ್ಯಾಮೆರಾಗಳನ್ನು ಆಳವಡಿಸಲಾಗಿದೆ ಎಂದರು.