ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.15): ಕೊರೋನಾ ಭೀತಿ ಹಿನ್ನೆಲೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿರುವುದರಿಂದ ಶನಿವಾರ ಜನರು ಮಾರುಕಟ್ಟೆಯಿಂದ ದೂರವೇ ಉಳಿದರು. ಇನ್ನು ಶಾಲಾ- ಕಾಲೇಜಿಗಳಿಗೂ ರಜೆ ಘೋಷಣೆಯಾಗಿದ್ದು, ಒಂದು ರೀತಿಯಲ್ಲಿ ಅಘೋಷಿತ ಬಂದ್ ವಾತಾವರಣ ಕೊಪ್ಪಳ ನಗರ ಸೇರಿದಂತೆ ಜಿಲ್ಲಾದ್ಯಂತ ಕಂಡುಬಂದಿತು. 

ಶಾಲಾ- ಕಾಲೇಜಿಗಳಿಗೆ ಶುಕ್ರವಾರ ತಡರಾತ್ರಿ ರಜೆ ಘೋಷಣೆ ಮಾಡಿದ್ದರಿಂದ ಅನೇಕ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಎಂದಿನಂತೆ ಆಗಮಿಸಿದ್ದರು. ಇನ್ನು ಕೆಲ ಶಾಲಾ- ಕಾಲೇಜುಗಳ ವಾಹನಗಳು ಎಂದಿನಂತೆ ಸಂಚಾರ ನಡೆಸಿದ್ದವು. ಆದರೆ, ಕೆಲವೇ ಹೊತ್ತಲ್ಲಿ ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳನ್ನು ವಾಪಸ್ ಕಳಿಸಿಕೊಡಲಾಯಿತು. 

ಕೊರೋನಾ ಭೀತಿ, ಚೀನಾ ರೀತಿಯೇ ಮೈಸೂರಲ್ಲೂ ಹೊಸ ಆಸ್ಪತ್ರೆ

ಕೆಲವೊಂದಿಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿ, ಮರಳಿ ವಾಪಸ್ ಹೋದ ಪ್ರಸಂಗಗಳು ನಡೆದವು. ಆದರೆ, ಶೇಕಡಾ 90 ರಷ್ಟು ವಿದ್ಯಾರ್ಥಿಗಳು ಮೊದಲೇ ಮಾಹಿತಿ ಪಡೆದು, ಮನೆಯಲ್ಲಿ ಠಿಕಾಣಿ ಹೂಡಿದ್ದರು. ಕೋಟಿ ಕೋಟಿ ನಷ್ಟ: ಶಾಲೆಯಲ್ಲಿ ಬಿಸಿಯೂಟ ಬಂದ್ ಮಾಡಲಾಗಿದ್ದು, ಪ್ರತಿನಿತ್ಯವೂ ನಡೆಯುತ್ತಿದ್ದ ಲಕ್ಷಾಂತರ ರುಪಾಯಿ ಕಾಯಿಪಲ್ಯೆ ವಹಿವಾಟು ನಡೆಯದಾಗಿದೆ. 

ತರಕಾರಿ ಮಾರುಕಟ್ಟೆಯಲ್ಲಿ ಶೇಕಡಾ 80 ರಷ್ಟು ವಹಿವಾಟು ಕುಸಿತವಾಗಿದ್ದರೆ, ಸಾಮಾನ್ಯ ಮಾರುಕಟ್ಟೆಯಲ್ಲಿ ಶೇಕಡಾ 90 ರಷ್ಟು ವಹಿವಾಟು ಕುಸಿತವಾಗಿದೆ. ಸಂಚಾರದಿಂದಲೂ ಜನರು ದೂರವೇ ಉಳಿದಿದ್ದು, ತೀರಾ ಅನಿವಾರ್ಯ ಎನ್ನುವವರು ಮಾತ್ರ ಪ್ರಯಾಣ ಬೆಳೆಸಿದ್ದಾರೆ. ಜಿಲ್ಲಾದ್ಯಂತ ಮೊದಲ ದಿನವೇ ಕೋಟ್ಯಂತರ ರುಪಾಯಿ ವಹಿವಾಟು ನಷ್ಟವಾಗಿದೆ. ಅದರಲ್ಲೂ ಹಸಿ ತರಕಾರಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಮುಂದುವರಿದ ನಿಗಾ: ಜಿಲ್ಲೆಯಲ್ಲಿ ವಿದೇಶದಿಂದ ಬರುವವರ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಅವರನ್ನು ತಪಾಸಣೆಗೆ ಒಳಪಡಿಸುವುದು ಅಲ್ಲದೆ ಅವರ ಸುತ್ತಲು ಜಾಗೃತಿಯನ್ನು ವಹಿಸಲಾಗಿದೆ. ವಾರಗಳ ಕಾಲ ಮನೆಯವರಿಂದಲೂ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಕೊಪ್ಪಳ ತಾಲೂಕಿನ ಅಗಳಿಕೇರಿ ಗ್ರಾಮಕ್ಕೆ ದುಬೈದಿಂದ ಬಂದಿರುವ ವ್ಯಕ್ತಿಯ ಮೇಲೆ ಹಾಗೂ ಇಟಲಿಯಿಂದ ಕಿನ್ನಾಳ ಗ್ರಾಮಕ್ಕೆ ಬಂದಿರುವ ವ್ಯಕ್ತಿಯ ಮೇಲೆ ಸೇರಿದಂತೆ ನಾನಾ ದೇಶಗಳಿಂದ ಬಂದಿರುವವರ ಮೇಲೆ ನಿಗಾ ಇಡಲಾಗಿದೆ. 

ಮಾರಾಟವಾಗದ ತಂಪು ಪಾನೀಯ: 

ಕೊರೋನಾ ಭೀತಿ ಹಿನ್ನೆಲೆ ಜನರು ತಂಪು ಪಾನೀಯ ಮತ್ತು ಐಸ್ ಕ್ರೀಂನಿಂದ ದೂರವೇ ಉಳಿದರು. ಬೇಸಿಗೆಯಲ್ಲಿ ಖರ್ಚಾಗುತ್ತದೆ ಸ್ಟಾಕ್ ಮಾಡಿದ್ದು, ಚಿಂತೆಯಾಗುತ್ತಿದೆ ಎಂದು ತಂಪು ಪಾನೀಯ ಮಾರಾಟಗಾರರು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು ತೊರೆಯುತ್ತಿದ್ದಾರಾ ಜನ..?

ಕೊರೋನಾ ಪ್ರಕರಣ ಇದುವರೆಗೂ ಜಿಲ್ಲೆಯಲ್ಲಿ ಎಲ್ಲಿಯೂ ಪತ್ತೆಯಾಗಿಲ್ಲ. ಈ ಬಗ್ಗೆ ಆತಂಕ ಬೇಡ. ಆದರೆ, ಮುಂಜಾಗ್ರತೆಯನ್ನು ವಹಿಸಬೇಕು. ಇನ್ನು ವಿದೇಶದಿಂದ ಯಾರಾದರೂ ಬಂದರೆ ತಕ್ಷಣ ಮಾಹಿತಿ ನೀಡಿ ಎಂದು ಕೊಪ್ಪಳ ಡಿಸಿ ಪಿ. ಸುನೀಲ್‌ಕುಮಾರ ಹೇಳಿದ್ದಾರೆ. 

ನಿತ್ಯವೂ ಶಾಲೆಯಲ್ಲಿ ಬಿಸಿಯೂಟಕ್ಕೆ ಶಿಕ್ಷಕರು ನಮ್ಮ ಅಂಗಡಿಯಲ್ಲಿಯೇ ತರಕಾರಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಶಾಲೆಗೆ ರಜೆ ನೀಡಿರುವುದರಿಂದ ಯಾರೂ ಬಂದಿಲ್ಲ. ಜನರು ಸಹ ಅಷ್ಟಾಗಿ ಬಂದಿಲ್ಲ ಎಂದು ತರಕಾರಿ ವ್ಯಾಪಾರಿ ಶಂಕ್ರಪ್ಪ ತಿಳಿಸಿದ್ದಾರೆ.