ನೇರವಾಗಿ ಹೋಟೆಲ್‌ಗಳಿಗೆ ತೆರಳುವ ಬದಲಾಗಿ ಆನ್‌ಲೈನ್‌ ಫುಡ್‌ಗೆ ಗ್ರಾಹಕರು ಮೊರೆ ಹೋಗಿದ್ದರು. ಸ್ವಿಗ್ಗಿ, ಝೊಮ್ಯಾಟೋ, ಡುನ್ಝೋ, ಈಟ್‌ಶ್ಯೂರ್‌ ಸೇರಿ ಇತರ ಆನ್‌ಲೈನ್‌ ಫುಡ್‌ ಸರ್ವೀಸ್‌ಗಳ ಮೂಲಕ ಮನೆಗೆ ಆಹಾರ ತರಿಸಿಕೊಂಡು ಸೇವಿಸಿದರು. 

ಬೆಂಗಳೂರು(ಡಿ.14):  ಮಳೆ, ಚಳಿ, ಸಾಂಕ್ರಾಮಿಕ ರೋಗಭೀತಿ ಕಾರಣದಿಂದ ಹೋಟೆಲ್‌ಗಳಿಗೆ ಗ್ರಾಹಕರ ಆಗಮನ ಕಡಿಮೆಯಾಗಿ ಶೇಕಡ 30ರಷ್ಟು ವ್ಯಾಪಾರ ಕುಸಿತವಾಗಿದೆ. ಇದೇ ವೇಳೆ ಆನ್‌ಲೈನ್‌ ಫುಡ್‌ ಆರ್ಡರ್‌ಗಳ ಪ್ರಮಾಣ ಶೇ.10 ಹೆಚ್ಚಾಗಿದೆ. ಕಳೆದೆರಡು ದಿನಕ್ಕೆ ಹೋಲಿಸಿದರೆ ಮಂಗಳವಾರ ಮಳೆ ಇಳಿಮುಖವಾದರೂ ಚಳಿ ವಾತಾವರಣ, ಸಾಂಕ್ರಾಮಿಕ ರೋಗ ಉಲ್ಬಣ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರು ಕಡಿಮೆಯಾಗೆ ಕಂಡುಬಂದರು. ಮಧ್ಯಾಹ್ನ ಕೆಲ ಹೊತ್ತು ಬಿಸಿಲಿದ್ದ ವೇಳೆ ನಗರದಲ್ಲಿ ಜನರ ಓಡಾಟವಿತ್ತು.

ಹೋಟೆಲ್‌, ಕ್ಯಾಂಡಿಮೆಂಟ್ಸ್‌, ಕ್ಯಾಂಟಿನ್‌, ಜ್ಯೂಸ್‌ ಸೆಂಟರ್‌ಗಳಲ್ಲಿ ಜನತೆ ಎಂದಿನಂತೆ ಇರಲಿಲ್ಲ. ಜ್ಯೂಸ್‌, ತಂಪು, ಪಾನೀಯ, ಕರ್ಡ್‌ ರೈಸ್‌ನಂತ ತಿನಿಸುಗಳಿಗೆ ಬೇಡಿಕೆ ಇರಲಿಲ್ಲ. ನೇರವಾಗಿ ಹೋಟೆಲ್‌ಗಳಿಗೆ ತೆರಳುವ ಬದಲಾಗಿ ಆನ್‌ಲೈನ್‌ ಫುಡ್‌ಗೆ ಗ್ರಾಹಕರು ಮೊರೆ ಹೋಗಿದ್ದರು. ಸ್ವಿಗ್ಗಿ, ಝೊಮ್ಯಾಟೋ, ಡುನ್ಝೋ, ಈಟ್‌ಶ್ಯೂರ್‌ ಸೇರಿ ಇತರ ಆನ್‌ಲೈನ್‌ ಫುಡ್‌ ಸರ್ವೀಸ್‌ಗಳ ಮೂಲಕ ಮನೆಗೆ ಆಹಾರ ತರಿಸಿಕೊಂಡು ಸೇವಿಸಿದರು. ರಾತ್ರಿ ಸುರಿದ ಮಳೆಯ ವೇಳೆ ಡೆಲಿವರಿ ಶುಲ್ಕವೂ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು ಎಂದು ಗ್ರಾಹಕರು ತಿಳಿಸಿದರು.

ಜಿಟಿಪಿಟಿ ಮ್ಯಾಂಡಮ್‌ ಮಳೆಗೆ ಜನಜೀವನ ಅಸ್ತವ್ಯಸ್ತ

ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಮಾತನಾಡಿ, ಹೊಟೆಲ್‌ಗಳಲ್ಲಿ ಗ್ರಾಹಕರು ಕಡಿಮೆಯಾಗಿದ್ದಾರೆ. ಆದರೆ, ಆನ್‌ಲೈನ್‌ ಫುಡ್‌ಗಳ ಆರ್ಡರ್‌ ಎಂದಿಗಿಂತ ಶೇ.10ರಷ್ಟು ಹೆಚ್ಚಿತ್ತು. ಮಳೆ ಕಾರಣದಿಂದ ಡೆಲಿವರಿ ಚಾರ್ಜನ್ನು ಹೋಟೆಲ್‌ ಹಾಗೂ ಡೆಲಿವರಿ ಪಾಯಿಂಟ್‌ ಅಂತರ ಆಧರಿಸಿ ಶೇ.5ರಿಂದ 10ರವರೆಗೆ ಹೆಚ್ಚಿಸಿದ್ದಾರೆ. ಆದರೂ ಆನ್‌ಲೈನ್‌ ಬುಕ್ಕಿಂಗ್‌ ಹೆಚ್ಚಾಗಿತ್ತು ಎಂದರು.

ಬೆಲೆ ಹೆಚ್ಚಳ:

ಇನ್ನು, ವಾಣಿಜ್ಯ ಬಳಕೆ ಸಿಲಿಂಡರ್‌ಗೆ ರಿಯಾಯಿತಿ ರದ್ದು, ಹಾಲು, ಮೊಸರು, ಬೆಣ್ಣೆ, ತುಪ್ಪ, ಪನ್ನೀರು, ಬೆಲೆ ಹೆಚ್ಚಳ, ಅಡುಗೆ ಸಾಮಗ್ರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನಗರದ ಹೋಟೆಲ್‌ಗಳು ನಿಧಾನವಾಗಿ ಕಾಫಿ-ಟೀ ಮಾತ್ರವಲ್ಲದೆ, ಊಟ, ಖಾದ್ಯಗಳ ಬೆಲೆಯನ್ನೂ ಹೆಚ್ಚಿಸುತ್ತಿವೆ. ಹಲವು ಹೋಟೆಲ್‌ಗಳಲ್ಲಿ ಹೊಸ ದರಪಟ್ಟಿಅಳವಡಿಸುತ್ತಿವೆ. ಸಹಜವಾಗಿ ಆನ್‌ಲೈನ್‌ ಆರ್ಡರ್‌ಗಳ ಬೆಲೆ ಹೆಚ್ಚಲು ಇದು ಕೂಡ ಕಾರಣವಾಗಿದೆ ಎನ್ನುತ್ತಾರೆ ಹೋಟೆಲ್‌ ಮಾಲಿಕರು.

ಮ್ಯಾಂಡಸ್‌ ಅಬ್ಬರ: ರಾಜ್ಯಾದ್ಯಂತ ಮಳೆ, ಶೀತಗಾಳಿ, 2 ಬಲಿ

ಮಾರುಕಟ್ಟೆ ಡಲ್‌

ಇಲ್ಲಿನ ಕೆ.ಆರ್‌.ಮಾರುಕಟ್ಟೆ, ಯಶವಂತಪುರದಲ್ಲಿ ಮಳೆಯಿಂದಾಗಿ ಕೆಸರು ಆವರಿಸಿರುವ ಕಾರಣ ಓಡಾಟವೂ ದುಸ್ತರವಾಗಿತ್ತು. ಯಶವಂತಪುರ, ದಾಸನಪುರ ಎಪಿಎಂಸಿಯಲ್ಲಿ ಈರುಳ್ಳಿ, ಆಲುಗಡ್ಡೆ ಪೂರೈಕೆ ಮಂಗಳವಾರವೂ ಕಡಿಮೆಯಾಗಿದೆ. ಸಾಮಾನ್ಯ ದಿನದಲ್ಲಿ ಸರಾಸರಿ 50 ಸಾವಿರ ಚೀಲ ಬರುವ ಈರುಳ್ಳಿ ಸೋಮವಾರ 26 ಸಾವಿರ, ಮಂಗಳವಾರ 30 ಸಾವಿರ ಚೀಲ ಮಾತ್ರ ಬಂದಿದೆ. ಅದರಂತೆ ಕಲಾಸಿಪಾಳ್ಯ ಮಾರುಕಟ್ಟೆಯಲ್ಲೂ ತರಕಾರಿಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ. ಅದರಂತೆ ವ್ಯಾಪಾರವೂ ಕಡಿಮೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.

ಮೂರು ದಿನಗಳಿಂದ ಆನ್‌ಲೈನ್‌ ಫುಡ್‌ ಆರ್ಡರ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೂ ಒಟ್ಟಾರೆ ಹೊಟೆಲ್‌ಗಳಲ್ಲಿ ಶೇ.30ರಷ್ಟು ವಹಿವಾಟು ಕುಸಿತವಾಗಿದೆ ಅಂತ ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ತಿಳಿಸಿದ್ದಾರೆ.