ಕಾವೇರಿ 5ನೇ ಹಂತದ ನೀರು ಸರಬರಾಜಿನ ನಂತರ, 58,000 ಜನರು ಬೆಂಗಳೂರು ಜಲಮಂಡಳಿಗೆ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಬರಗಾಲದ ನಂತರ, ಮೇ ತಿಂಗಳಿನಿಂದ ಶೇ.86ರಷ್ಟು ಅರ್ಜಿಗಳು ಬಂದಿವೆ.

ಬೆಂಗಳೂರು (ಫೆ.03): ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ 5ನೇ ಹಂತದ ಕುಡಿಯುವ ನೀರು ಸರಬರಾಜು ಮಾಡಿದ ಬೆನ್ನಲ್ಲಿಯೇ ನಮ್ಮ ಮನೆಗೂ ಕಾವೇರಿ ಕುಡಿಯುವ ನೀರಿನ ಸಂಪರ್ಕ ಮಾಡಿಕೊಡಿ ಎಂದು 58 ಸಾವಿರ ಜನರು ಬೆಂಗಳೂರು ಜಲಮಂಡಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಕಳೆದ ವರ್ಷ ಭೀಕರ ಬರಗಾಲ ಆವರಿಸಿದ್ದ ಹಿನ್ನೆಲೆಯಲ್ಲಿ ಕೊಳೆವೆ ಬಾವಿಗಳೆಲ್ಲವೂ ಬತ್ತಿ ಹೋಗಿದ್ದವು. ಕುಡಿಯುವ ನೀಡು ಸೇರಿದಂತೆ ದಿನಬಳಕೆ ನೀರು ಕೂಡ ಲಭ್ಯವಾಗದೇ ಇಡೀ ಬೆಂಗಳೂರಿನ ಜನತೆ ತತ್ತರಿಸಿ ಹೋಗಿತ್ತು. ಈ ವೇಳೆ ಕೇವಲ ಬೋರ್‌ವೆಲ್‌ಗಳ ನೀರನ್ನು ನೆಚ್ಚಿಕೊಂಡಿದ್ದವರು ನೀರಿಲ್ಲದೇ ಪರಿತಪಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಿಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನಮ್ಮ ಮನೆಗೆ, ನಮ್ಮ ಅಪಾರ್ಟ್‌ಮೆಂಟ್‌ಗೆ, ನಮ್ಮ ಬಡಾವಣೆಗೆ ಕಾವೇರಿ ನೀರು ಸರಬರಾಜು ಮಾಡುವಂತೆ ಜಲಮಂಡಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

2024ರಲ್ಲಿ ಒಂದೇ ವರ್ಷ ಬರೋಬ್ಬರಿ 58 ಸಾವಿರ ಅರ್ಜಿಗಳು ಕಾವೇರಿ ಕುಡಿಯುವ ಸರಬರಾಜು ಮಾಡುವಂತೆ ಸಲ್ಲಿಕೆ ಮಾಡಲಾಗಿದೆ. ಅದರಲ್ಲಿಯೂ ಬರಗಾಲದ ನಂತರ ಎಚ್ಚೆತ್ತ ಬೆಂಗಳೂರಿನ ಜನತೆ ಮೇ ತಿಂಗಳ ನಂತರ ಶೇ.86ರಷ್ಟು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನು ಬರಗಾಲದ ವೇಳೆ ಟ್ಯಾಂಕರ್ ಮಾಫಿಯಾ, ಬತ್ತಿದ ಬೋರ್ ವೆಲ್ ಜನರು ನೀರಿಲ್ಲದೇ ತತ್ತರಿಸಿ ಕಾವೇರಿ ನೀರಿನತ್ತ ವಾಲಿದ್ದಾರೆ. ಕಳೆದ ವರ್ಷ ಕೇವಲ 38 ಸಾವಿರಕ್ಕೂ ಹೆಚ್ಚು ನೀರಿನ ಸಂಪರ್ಕ ಮಂಜೂರು ಮಾಡಲಾಗಿತ್ತು. ಇದರಿಂದ 887.82 ಕೋಟಿ ರೂ. ಆದಾಯವನ್ನು ಜಲಮಂಡಳಿ ಗಳಿಸಿತ್ತು. ಕಾವೇರಿ 5 ನೇ ಹಂತದ ಯೋಜನೆಯಿಂದ 775 ಎಂಎಲ್ಡಿ ನೀರು ಲಭ್ಯವಿದ್ದು, 2025ರಲ್ಲಿ 1.5 ಲಕ್ಷಕ್ಕೂ ಅಧಿಕ ನೀರಿನ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡನ ಅಟ್ಟಹಾಸ: ಸಿಗರೇಟ್ ಫ್ರೀಯಾಗಿ ಕೊಟ್ಟಿಲ್ಲವೆಂದು ಕಾಂಡಿಮೆಂಟ್ಸ್ ಮಾಲೀಕನಿಗೆ ಥಳಿತ!

ಯಾವ್ಯಾವ ಭಾಗದಿಂದ ಎಷ್ಟು ಅರ್ಜಿ?
ಬೆಂಗಳೂರು ಪೂರ್ವ : 

ಅರ್ಜಿ ಸಲ್ಲಿಕೆ : 12,421
ಒದಗಿಸಲಾದ ಸಂಪರ್ಕ : 8,267

ಬೆಂಗಳೂರು ಪಶ್ಚಿಮ : 
ಅರ್ಜಿ ಸಲ್ಲಿಕೆ : 18,512
ಒದಗಿಸಲಾದ ಸಂಪರ್ಕ : 12,130

ಬೆಂಗಳೂರು ಉತ್ತರ : 
ಅರ್ಜಿ ಸಲ್ಲಿಕೆ : 8,197
ಒದಗಿಸಲಾದ ಸಂಪರ್ಕ : 5,341

ಬೆಂಗಳೂರು ದಕ್ಷಿಣ : 
ಅರ್ಜಿ ಸಲ್ಲಿಕೆ : 19,413
ಒದಗಿಸಲಾದ ಸಂಪರ್ಕ : 12,275