ಹುಬ್ಬಳ್ಳಿ(ಜು.20): ಈತನ ಹೆಸರು ರಾಮಚಂದ್ರ ರವಿದಾಸ (60). ಪಶ್ಚಿಮ ಬಂಗಾಳದ ಡಾಲಕೊಲ್ಹಾ ಜಿಲ್ಲೆಯ ಬಜಾರ್‌ಗಾಂವ್ ಎಂಬ ಗ್ರಾಮದವ. ಮಾನಸಿಕ ಅಸ್ವಸ್ಥ. ಹೆಸರು ಹಾಗೂ ತನ್ನ ಊರಿನ ಹೆಸರು ಬಿಟ್ಟರೆ ಬೇರೆ ಏನೊಂದೂ ಗೊತ್ತಿರಲಿಲ್ಲ. ಯಾವುದೋ ರೈಲನ್ನು ಹತ್ತಿ ಅದ್ಹೇಗೋ ಹುಬ್ಬಳ್ಳಿಗೆ ಬಂದಿದ್ದ. ಅತ್ತ ಈತನ ಮಕ್ಕಳು, ಪತ್ನಿ ಎಲ್ಲರೂ ಈತನ ಹುಡುಕಾಟದಲ್ಲಿ ತೊಡಗಿದ್ದಾರೆ.

ಒಂದು ದಿನ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾಮಚಂದ್ರ ರೈಲ್ವೆ ಸಿಬ್ಬಂದಿಗೆ ಕಂಡಿದ್ದಾನೆ. ಅವರು ತಕ್ಷಣ ಆತನನ್ನು ಕಟಿಂಗ್ ಸಲೂನಿಗೆ ಕರೆದುಕೊಂಡು ಶೇವಿಂಗ್ ಮಾಡಿಸಿ, ಹೊಸ ಬಟ್ಟೆ ಹಾಕಿಸಿ, ಉಪಾಹಾರ ಕೊಡಿಸಿದ್ದಾರೆ. ಬಳಿಕ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆತನ ವಿಳಾಸ ಕೇಳಿದಾಗ ತನ್ನ ಹಾಗೂ ಊರಿನ ಹೆಸರನ್ನು ಮಾತ್ರ ಹೇಳಿದ್ದಾನೆ. ಆತ ಹೇಳಿದ ಊರಿನ ಹೆಸರಿನ ಮೇಲೆ ಪಶ್ಚಿಮ ಬಂಗಾಳದಿಂದ ಬಂದಿದ್ದಾನೆ ಎಂಬುದು ಗೊತ್ತಾಗಿದೆ. ಪಶ್ಚಿಮ ಬಂಗಾಳದ ರೈಲ್ವೆ ಸಿಬ್ಬಂದಿ ನೆರವು ಪಡೆದು ಮನೆ ಹಾಗೂ ಕುಟುಂಬಸ್ಥರನ್ನು ಪತ್ತೆಹಚ್ಚಿ ಈತನನ್ನು ಕರೆದುಕೊಂಡು ಹೋಗಿ ಕುಟುಂಬಸ್ಥರಿಗೆ ಒಪ್ಪಿಸಿ ಬಂದಿದ್ದಾರೆ.

ಹೀಗೆ ಈ ಮಾನವೀಯ ಕಾರ್ಯ ಮಾಡಿದ್ದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರಾರಂಭವಾಗಿರುವ ‘ಉಡಾನ್ ಅಂತ್ಯೋದಯ ಕ್ಷೇಮ ಕೇಂದ್ರ’ದ ಸಿಬ್ಬಂದಿ. ಈ ಕೇಂದ್ರ ಭಿಕ್ಷುಕರಿಗೆ ಅಕ್ಷರಶಃ ಆಶಾಕಿರಣವಾಗಿ ಹೊರಹೊಮ್ಮಿದೆ.

ಉಡಾನ್ ಕ್ಷೇಮ ಕೇಂದ್ರ: ಉಡಾನ್ ಎಂಬುದು ಹಿಂದಿ ಪದ. ಕನ್ನಡದಲ್ಲಿ ‘ಹಾರುವ ಒಂದು ಪ್ರಕ್ರಿಯೆ’ ಅಥವಾ ವಿಮಾನ ಎಂಬರ್ಥ ಬರುತ್ತದೆ. ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಎಲ್ಲಿಂದಲೋ ಗೊತ್ತು ಗುರಿಯಿಲ್ಲದೇ ಹಾರಿಕೊಂಡು ಬಂದವರಿಗೆ ತಕ್ಷಣಕ್ಕೆ ಉಪಚಾರ ಮಾಡಿ, ಮರಳಿ ಅವರ ಗೂಡಿಗೆ ಮುಟ್ಟಿಸುವ ಉದ್ದೇಶವನ್ನು ಇಟ್ಟುಕೊಂಡು ‘ಉಡಾನ್ ಅಂತ್ಯೋದಯ ಕ್ಷೇಮ ಕೇಂದ್ರ’ ೨೦೧೮ರ ಡಿಸೆಂಬರ್‌ನಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆಯಾಗಿದೆ.

ರೈಲ್ವೆ ನಿಲ್ದಾಣದಲ್ಲಿ ಬರುವ ಅನಾಥರು, ಅಶಕ್ತರು, ಭಿಕ್ಷುಕರು, ಹೊಟ್ಟೆಗೆ ಹಿಟ್ಟಿಲ್ಲದಂತೆ ಇರುವವರು, ಮನೆಯಿಂದ ಪರಿತ್ಯಕ್ತರಾಗಿ ಬಂದವರಿಗೆ ತಮ್ಮ ಕೈಲಾದ ಮಟ್ಟಿನ ನೆರವು ನೀಡುವ ಉದ್ದೇಶವನ್ನು ಈ ಕೇಂದ್ರ ಹೊಂದಿದೆ.

ಕೇಂದ್ರದ ದೇಣಿಗೆಯಿಂದಲ್ಲ, ಜನರ ಮಾನವೀಯತೆಯಿಂದ ನಡೆಯುತ್ತಿದೆ ಕೇಂದ್ರ:

ರೈಲ್ವೆ ಇಲಾಖೆಯ ಅನುದಾನದಲ್ಲೇನೂ ಈ ಕೇಂದ್ರ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನವೂ ಇದಕ್ಕೆ ಬರುತ್ತಿಲ್ಲ. ಬದಲಾಗಿ ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರ ದೇಣಿಗೆಯಿಂದ ಈ ಮಾನವೀಯ ಸೇವೆ ನಡೆಯುತ್ತಿದೆ. ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಎ.ಕೆ. ಸಿಂಗ್ ಅವರ ಮುತುವರ್ಜಿಯಿಂದ ಪ್ರಾರಂಭಿಸಲಾದ ಈ ಕೇಂದ್ರಕ್ಕೆ ಮೊದಲಿಗೆ ಅವರೇ ₹ 1 ಲಕ್ಷ ದೇಣಿಗೆ ನೀಡಿದ್ದಾರೆ. ಬಳಿಕ ರೈಲ್ವೆ ಇಲಾಖೆಯ ಕೆಲ ಸಿಬ್ಬಂದಿ ತಮ್ಮ ಕೈಲಾದಷ್ಟು ಹಣ, ತಮ್ಮ ಹಳೆ ಬಟ್ಟೆ ನೀಡಿದ್ದಾರೆ. ಅದರ ಮೇಲೆಯೇ ಈ ಕೇಂದ್ರ ನಿರ್ವಹಿಸಲಾಗುತ್ತಿದೆ. ರೈಲ್ವೆ ಇಲಾಖೆಯ ಕಲ್ಯಾಣ ವಿಭಾಗದ ಸಿಬ್ಬಂದಿ ಈ ಕೇಂದ್ರ ನಿಭಾಯಿಸುತ್ತಾರೆ. ಒಟ್ಟು 16 ಸಿಬ್ಬಂದಿ ತಮ್ಮ ದೈನಂದಿನ ಕರ್ತವ್ಯದೊಂದಿಗೆ ಇದರ ಕೆಲಸ ನಿರ್ವಹಿಸುತ್ತಾರೆ.

ಹೀಗಿದೆ ಮಾನವೀಯ ಸೇವೆ:

ಪ್ರತಿದಿನ ಬೆಳಗ್ಗೆ 5 ರಿಂದ 8 ಗಂಟೆವರೆಗೆ ಕೇಂದ್ರದ ಇಬ್ಬರು ಸಿಬ್ಬಂದಿ ರೈಲ್ವೆ ನಿಲ್ದಾಣ, ಅದರ ಸುತ್ತಮುತ್ತ ಇರುವ ಭಿಕ್ಷುಕರನ್ನು ಕರೆದುಕೊಂಡು ಬಂದು ಸೋಪು ಕೊಟ್ಟು, ಸ್ನಾನ ಮಾಡಿಸುತ್ತಾರೆ. ಅವರಿಗೆ ಉಡಲು ಚೆನ್ನಾಗಿರುವ ಬಟ್ಟೆ ನೀಡುತ್ತಾರೆ. ಉಪಾಹಾರದ ವ್ಯವಸ್ಥೆ ಮಾಡುತ್ತಾರೆ. ಅಗತ್ಯವಿದ್ದರೆ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. ಅವರೊಂದಿಗೆ ಸಮಾಲೋಚನೆ ನಡೆಸಿ ಮುಂದೆ ಯಾವುದೇ ಕಾರಣಕ್ಕೂ ಭಿಕ್ಷೆ ಬೇಡದಂತೆ ತಿಳಿ ಹೇಳಿ ಕಳುಹಿಸುತ್ತಾರೆ.

ಅನಾಥ ಮಕ್ಕಳ ಪಾಲಿನ ಅನ್ನದಾತ ಈ Zomato ಡೆಲಿವರಿ ಬಾಯ್!

ಒಂದು ವೇಳೆ ಹೀಗೆ ಬಂದ ನಿರಾಶ್ರಿತರ ಕುಟುಂಬಸ್ಥರು ಯಾರಾದರೂ ಪರ ಊರಲ್ಲಿದ್ದರೆ ಅವರನ್ನು ಸಂಪರ್ಕಿಸಿ ಅವರನ್ನು ಇಲ್ಲಿಗೆ ಕರೆಯಿಸಿಕೊಂಡು ಅವರ ಜತೆ ಇವರನ್ನು ಕಳುಹಿಸುತ್ತಾರೆ. ಇಲ್ಲವೇ ಆ ವ್ಯಕ್ತಿ ಆರೋಗ್ಯವಂತನಿದ್ದರೆ ಆತನಿಗೆ ರೈಲ್ವೆ ಟಿಕೆಟ್ ತೆಗೆಸಿ ವಾಪಸ್ ಊರಿಗೆ ಕಳುಹಿಸುತ್ತಾರೆ. ಒಂದು ವೇಳೆ ಅವರ ಕುಟುಂಬದವರಿಗೆ ಬರಲು ಸಾಧ್ಯವಾಗದಿದ್ದರೆ ಇವರೇ ಆತನನ್ನು ಕರೆದುಕೊಂಡು ಹೋಗಿ ಕುಟುಂಬಸ್ಥರ ಬಳಿ ಬಿಟ್ಟು ಬರುತ್ತಾರೆ.

ಬೆಳಗ್ಗಿನಿಂದ ರಾತ್ರಿ ತನಕ ಸೇವೆ:

ಬೆಳಗ್ಗೆ 5 ರಿಂದ 8ರ ವರೆಗೆ ಇಬ್ಬರು ಕಾರ್ಯನಿರ್ವಹಿಸಿದರೆ, 8ರ ನಂತರ ಒಬ್ಬರು ಕೇಂದ್ರದಲ್ಲಿರುತ್ತಾರೆ. ಯಾರಾದರೂ ಬಡವರು, ಶೋಷಿತರು ಬಂದರೆ ಅವರಿಗೆ ಸ್ನಾನ, ಉಪಾಹಾರದ ವ್ಯವಸ್ಥೆ ಮಾಡಿಸುತ್ತಾರೆ. ಸೂರ್ಯೋದಯದಿಂದ ಸೂರ್ಯಸ್ತದವರೆಗೆ ಈ ಕೇಂದ್ರ ಕೆಲಸ ನಿರ್ವಹಿಸುತ್ತದೆ.

7 ತಿಂಗಳಲ್ಲಿ 600 ಲಾನುಭವಿಗಳು:

ಪ್ರತಿದಿನ ಕನಿಷ್ಠ ಐವರಾದರೂ ಭಿಕ್ಷುಕರು, ಅನಾತರು ಈ ಕೇಂದ್ರದ ಉಪಯೋಗ ಪಡೆಯುತ್ತಿದ್ದು, 2018ರ ಡಿಸೆಂಬರ್ 5ರಿಂದ ಈ ವರೆಗೆ ಬರೋಬ್ಬರಿ 600ಕ್ಕೂ ಹೆಚ್ಚು ಭಿಕ್ಷುಕರು ಕೇಂದ್ರದ ಉಪಯೋಗ ಪಡೆದಿದ್ದಾರೆ. ಒಟ್ಟಿನಲ್ಲಿ ಉಡಾನ್ ಅಂತ್ಯೋದಯ ಕ್ಷೇಮ ಕೇಂದ್ರ ರೈಲ್ವೆ ನಿಲ್ದಾಣದಲ್ಲಿನ ಭಿಕ್ಷುಕರ ಪಾಲಿಗೆ ಆಶಾಕಿರಣವಾಗಿ ಪರಿಣಮಿಸಿದೆ.

ಬಡ ಮಕ್ಕಳಿಗಾಗಿ ಶಾಲೆ:

ಉಡಾನ್ ಕೇಂದ್ರದಲ್ಲಿ ಬೆಳಗ್ಗೆ 6.30ರಿಂದ ಮಧ್ಯಾಹ್ನ 12.30ರ ವರೆಗೆ ಬಡ ಮಕ್ಕಳಿಗಾಗಿ ಉಚಿತ ಶಾಲೆಯೊಂದನ್ನು ನಡೆಸಲಾಗುತ್ತಿದೆ. ರೈಲ್ವೆ ನಿಲ್ದಾಣದ ಸುತ್ತಮುತ್ತವಿರುವ ಕೊಳಚೆ ಪ್ರದೇಶದಲ್ಲಿನ ಮಕ್ಕಳನ್ನು ಕರೆದುತಂದು ಪಾಠ ಪ್ರವಚನ ಮಾಡಿಸಲಾಗುತ್ತಿದೆ. ಆಟದೊಂದಿಗೆ ಪಾಠ ಇಲ್ಲಿನ ವಿಶೇಷ. ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ರೈಲ್ವೆ ಸ್ಕೂಲ್‌ನಿಂದ ಪ್ರತಿದಿನ ಒಬ್ಬ ಶಿಕ್ಷಕರು ಬಂದು ಇಲ್ಲಿ ಪಾಠ ಮಾಡುತ್ತಾರೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯೂ ಇದೆ.

ಕೇಂದ್ರದಲ್ಲಿ ಸ್ವಲ್ಪ ಕಾಲ ಅವರು ತಂಗಲು ವ್ಯವಸ್ಥೆ ಮಾಡುತ್ತೇವೆ. ಸರ್ಕಾರದಿಂದ ಇದಕ್ಕೆ ಯಾವುದೇ ಅನುದಾನ ಸಿಕ್ಕಿಲ್ಲ. ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳೇ ತಮ್ಮ ಕೈಯಲ್ಲಾದಷ್ಟು ಚಂದಾ ನೀಡುತ್ತಾರೆ. ಅದರಿಂದ ಕೇಂದ್ರ ನಿರ್ವಹಿಸಲಾಗುತ್ತಿದೆ. ಇಲ್ಲಿ ಬಡಮಕ್ಕಳಿಗೆ ಶಿಕ್ಷಣ ಹಾಗೂ ಊಟದ ವ್ಯವಸ್ಥೆಯನ್ನೂ ಮಾಡಿದ್ದೇವೆ ಎನ್ನುತ್ತಾರೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ.

ಶಿವಾನಂದ ಗೊಂಬಿ