ಹುಬ್ಬಳ್ಳಿ- ಜೋಗ್ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ : ದರವೆಷ್ಟು..?
ಸ್ತುತ ಮುಂಗಾರು ಮಳೆ ವ್ಯಾಪಕವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಆರಂಭಿಸಿದ ಜೋಗ್ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ
ಹುಬ್ಬಳ್ಳಿ : ಪ್ರಸ್ತುತ ಮುಂಗಾರು ಮಳೆ ವ್ಯಾಪಕವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಆರಂಭಿಸಿದ ಜೋಗ್ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.
ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಜೋಗ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದರು.
ಶರಾವತಿ ಕಣಿವೆ ಪ್ರದೇಶದಲ್ಲಿ ಮಳೆ ಬಿರುಸಾಗಿದೆ. ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಮತ್ತ ಜೀವಕಳೆ ಬಂದಿದೆ. ಮೈದುಂಬಿಕೊಂಡಿರುವ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಜಲಪಾತಗಳು ಭೋರ್ಗರೆಯುತ್ತ ಧುಮ್ಮಿಕ್ಕುತ್ತಿರುವ ದೃಶ್ಯವೈಭವವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರ ನಿರ್ದೇಶನದಂತೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಮೋಹರಂ ಕಡೇ ದಿನ ಸಾರ್ವಜನಿಕ ರಜೆ ಪ್ರಯುಕ್ತ ಜು. 17ರಂದು ಬುಧವಾರ, ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿ ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಜೋಗ್ ಫಾಲ್ಸ್ ಗೆ ವಿಶೇಷ ವಿಶೇಷ ಪ್ಯಾಕೇಜ್ ಟೂರ್ ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ರಾಜಹಂಸ ಬಸ್ ಬೆಳಗ್ಗೆ 7.30ಕ್ಕೆ, ವೋಲ್ವೋ ಎಸಿ ಬಸ್ 8 ಗಂಟೆಗೆ ಹಾಗೂ ವೇಗದೂತ ಬಸ್ 8-10ಕ್ಕೆ ಹೊರಡುತ್ತವೆ. ಮಾರ್ಗ ಮಧ್ಯದಲ್ಲಿ ಶಿರಸಿ ಶ್ರೀ ಮಾರಿಕಾಂಬ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋಗಫಾಲ್ಸ್ ನಿಂದ ಸಂಜೆ 5 ಗಂಟೆಗೆ ಹೊರಡುತ್ತವೆ. ರಾತ್ರಿ 9 ಮತ್ತು 9.30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತವೆ. ಹೋಗಿ ಬರಲು ಒಬ್ಬರಿಗೆ ರಾಜಹಂಸ ಬಸ್ಸಿಗೆ ₹430 ಹಾಗೂ ವೋಲ್ವೊ ಬಸ್ಸಿಗೆ ₹600 ಪ್ರಯಾಣ ದರ ನಿಗದಿಪಡಿಲಾಗಿದೆ. ವಿಶೇಷ ಸಾರಿಗೆಗಳಲ್ಲಿ ಶಕ್ತಿ ಯೋಜನೆಯ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದರು.
ಈ ವೇಳೆ ಡಿಪೋ ಮ್ಯಾನೇಜರ್ ಮುನ್ನಾಸಾಬ, ಸಹಾಯಕ ಸಂಚಾರ ವ್ಯವಸ್ಥಾಪಕ ಐ.ಜಿ. ಮಾಗಾಮಿ, ಬಸ್ ನಿಲ್ದಾಣಾಧಿಕಾರಿ ಹಂಚಾಟೆ, ದಾವಲಸಾಬ ಬೂದಿಹಾಳ ಸೇರಿದಂತೆ ಚಾಲಕರು, ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ಇದ್ದರು.