ಎಸ್‌.ಜಿ. ತೆಗ್ಗಿನಮನಿ

ನರಗುಂದ(ಜ.26): ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಾಲೂಕಿನ ಕೊಣ್ಣೂರು ಬಳಿ ನದಿ ಪಕ್ಕದಲ್ಲಿ ಪ್ರವಾಹದ ರಭಸಕ್ಕೆ ಕಿತ್ತು ಹೋಗಿದ್ದು, ಇಂದಿಗೂ ಈ ರಸ್ತೆ ದುರಸ್ತಿ ಕಾಣದೇ ಪ್ರತಿದಿನ ಸವಾರರು ರಸ್ತೆ ದಾಟಲು ಹರಸಾಹಸ ಪಡುವ ಪರಿಸ್ಥಿತಿ ಉಂಟಾಗಿದೆ.

ಕಳೆದ 2019ರ ಆಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಮಲಪ್ರಭಾ ಜಲಾಶಯದ ಮೇಲ್ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನಲೆಯಲ್ಲಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಹೊಂದಿಕೊಂಡಿರುವ ನದಿಗೆ ಪ್ರವಾಹ ಬಂದು ಇಡೀ ಗ್ರಾಮವೇ ಪ್ರವಾಹದಲ್ಲಿ ಮುಳಗಿತ್ತು. ಅದೇ ರೀತಿ ಗ್ರಾಮದ ಬಳಿ ಇರುವ ಬ್ರಿಜ್‌ ಪಕ್ಕದ ರಸ್ತೆ ಸಂಪೂರ್ಣ ಪ್ರವಾಹದ ರಭಸಕ್ಕೆ ಕಿತ್ತು ಹೋಗಿ 8 ದಿನಗಳ ಕಾಲ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ನಿಷೇಧಗೊಳಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ದಿನಗಳಲ್ಲಿ ಹೆದ್ದಾರಿ ಇಲಾಖೆಯವರು ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡಿ ತಾತ್ಕಾಲಿಕವಾಗಿ ರಸ್ತೆಗೆ ಖಡಿ ಮತ್ತು ಮೋರಮ್‌ (ಮಣ್ಣು) ಹಾಕಿ ದುರಸ್ತಿ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಇಂದು ಈ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ವಾಹನಗಳು ಸಂಚಾರ ಮಾಡುವುದು ಕಷ್ಟವಾಗಿದೆ. ಮೇಲಾಗಿ ಈ ರಸ್ತೆಯಲ್ಲಿ ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಹ ಈವರೆಗೆ ಸಂಬಂಧಿಸಿದ ಇಲಾಖೆಯವರು ಈ ರಸ್ತೆ ದುರಸ್ತಿಗೆ ಬೇಕಾದ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಇಲ್ಲಿ ಸಂಚರಿಸುವ ಪ್ರಯಾಣಿಕರ ಅಳಲಾಗಿದೆ.

ರಸ್ತೆ ಧೂಳುಮಯ:

ಕಿತ್ತು ಹೋದ ಹೆದ್ದಾರಿಯ ರಸ್ತೆಯನ್ನು ತಾತ್ಕಾಲಿಕವಾಗಿ ಮಣ್ಣು ಹಾಕಿ ದುರಸ್ತಿ ಮಾಡಲಾಗಿದೆ. ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯಲ್ಲ ಸಂಪೂರ್ಣ ಧೂಳುಮಯವಾಗಿರುತ್ತದೆ. ಅಕ್ಕಪಕ್ಕದಲ್ಲಿ ವಾಹನಗಳು ಸಂಚರಿಸುತ್ತಿರುವ ವೇಳೆಯಲ್ಲಂತೂ ವಾಹನ ಸವಾರರು ಮೂಗು ಮುಚ್ಚಿಕೊಂಡೇ ಈ ರಸ್ತೆಯನ್ನು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿ ನಿರ್ಮಾಣವಾಗಿದ್ದರೂ ಸಹ ರಸ್ತೆ ದುರಸ್ತಿಗೆ ಬೇಕಾದ ಕ್ರಮ ಮಾತ್ರ ಇಂದಿಗೂ ಕೈಗೊಳ್ಳುತ್ತಿಲ್ಲ.

ಯಾವುದೇ ಪ್ರಯೋಜನವಾಗಿಲ್ಲ:

ತಾತ್ಕಾಲಿಕವಾಗಿ ನಿರ್ಮಿಸಿರುವ ಈ ರಸ್ತೆಯ ದುರಸ್ತಿ ಕಾರ್ಯ ಶೀಘ್ರಗತಿಯಲ್ಲಿ ಕೈಗೊಳ್ಳುವಂತೆ ಕೊಣ್ಣೂರು ಗ್ರಾಮಸ್ಥರು ಮತ್ತು ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಸಂಬಂಧಪಟ್ಟಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸಹ ಇಂದಿಗೂ ಈ ರಸ್ತೆಯ ದುರಸ್ತಿಗೊಳಿಸುವ ಭಾಗ್ಯ ಬಂದಿಲ್ಲ.

ಮಲಪ್ರಭಾ ನದಿ ಪ್ರವಾಹಕ್ಕೆ ಕಿತ್ತು ಹೋದ ರಸ್ತೆಯನ್ನು ಹೆದ್ದಾರಿ ಇಲಾಖೆಯವರು ಅದಷ್ಟುಬೇಗ ದುರಸ್ತಿ ಕೈಗೊಳ್ಳದೇ ಇದ್ದಲ್ಲಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಕಚೇರಿ ಎದುರು ಉಗ್ರವಾದ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಅವರು, ಪ್ರವಾಹಕ್ಕೆ ಕಿತ್ತು ಹೋದ ತಾತ್ಕಲಿಕ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಪ್ರಸಾವನೆ ಕಳುಹಿಸಲಾಗಿದೆ. ಸದ್ಯ ರಸ್ತೆ ದುರಸ್ತಿಗೆ 99 ಲಕ್ಷ ಹಣ ಬಿಡುಗಡೆಗೊಂಡಿದೆ. ಶೀಘ್ರದಲ್ಲಿ ಗುತ್ತಿಗೆದಾರರು ಈ ಕಿತ್ತು ಹೋದ ಹೆದ್ದಾರಿಯ ಕಾಮಗಾರಿ ಪ್ರಾರಂಭಿಸುತ್ತಾರೆ ಎಂದು ಹೇಳಿದ್ದಾರೆ.