ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಗೃಹಿಣಿಯೊಬ್ಬರು, ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ. ₹50,000 ವೆಚ್ಚದಲ್ಲಿ ಕೊರೆದ ಬೋರ್‌ವೆಲ್‌ನಲ್ಲಿ 5 ಇಂಚು ನೀರು ಬಂದಿದ್ದು, ನೀರಾವರಿ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಶಿವಾನಂದ ಗೊಂಬಿ

ಹುಬ್ಬಳ್ಳಿ: ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಅಪಸ್ವರದ ಮಧ್ಯೆಯೇ ಇಲ್ಲೊಬ್ಬ ಗೃಹಿಣಿ, ಗೃಹಲಕ್ಷ್ಮೀಯಿಂದ ಬಂದ ಹಣದಲ್ಲಿ ಬೋರ್‌ವೆಲ್ ಕೊರೆಸಿದ್ದು 5 ಇಂಚು ನೀರು ಬಂದಿದ್ದು ನೀರಾವರಿ ಮಾಡಲು ಮುಂದಾಗಿದ್ದಾರೆ.
ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಈರವ್ವ ಭರಮಪ್ಪ ಅಂಗಡಿ (52) ಬೋರ್‌ವೆಲ್ ಕೊರೆಯಿಸಿದ ಗೃಹಲಕ್ಷ್ಮಿ.
ಮೂಲತಃ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಈರವ್ವ. ಕುಂದಗೋಳದ ಅಜ್ಜಿ ಮನೆಯಲ್ಲಿ ಬೆಳೆದು ಮದುವೆಯಾಗಿ ಹೋಗಿದ್ದು ಸೂರಶೆಟ್ಟಿಕೊಪ್ಪಕ್ಕೆ. ಈರವ್ವ ಹಾಗೂ ಪತಿ ಭರಮ್ಮಣ್ಣ ಅಂಗಡಿಗೆ 2.5 ಎಕರೆ ಜಮೀನಿದ್ದು, ಇಬ್ಬರು ಮಕ್ಕಳಿದ್ದಾರೆ. ಕೃಷಿಯೇ ಇವರ ಕುಟುಂಬಕ್ಕೆ ಜೀವನಾಧಾರವಾಗಿದೆ. ಈರವ್ವ ಅನಕ್ಷರಸ್ಥೆಯಾಗಿದ್ದರೂ ಕೃಷಿಯಲ್ಲಿ ಮಾತ್ರ ಪತಿಯ ಹೆಗಲಿಗೆ ಹೆಗಲು ಕೊಟ್ಟು ದುಡಿದು ಕುಟುಂಬ ಸಲಹುತ್ತಿದ್ದಾರೆ. ಇವರದು ಖುಷ್ಕಿ ಜಮೀನಾಗಿದ್ದು ಮಳೆಯನ್ನೇ ಆಶ್ರಯಿಸಿದೆ. ಹೀಗಾಗಿ ಈ ಹಿಂದೇ ಬೋರ್‌ವೆಲ್ ಕೊರೆಸಲು ಯತ್ನಿಸಿದ್ದರೂ ಆರ್ಥಿಕ ಮುಗ್ಗಟ್ಟಿನಿಂದ ಹಿನ್ನಡೆಯಾಗಿತ್ತು.
ಗೃಹಲಕ್ಷ್ಮೀಯಿಂದ ಬರುತ್ತಿದ್ದ ಹಣವನ್ನು ಮೊದಲ ಒಂದೆರಡು ಕಂತು (29 ಕಂತು ಬಂದಿದೆ) ಬಳಸಿಕೊಂಡಿದ್ದುಂಟು. ಆ ಬಳಿಕ ಹಣ ಬಳಸದೆ ಕೂಡಿಟ್ಟಿದ್ದು ₹ 54000 ಜಮೆ ಆಗಿದೆ. ಈ ಹಣದಲ್ಲಿಯೇ ಬೋರ್‌ವೆಲ್ ಕೊರೆಸಲು ಪತಿ ಭರಮಣ್ಣ ಹಾಗೂ ಪುತ್ರ ರಮೇಶ ಅವರನ್ನು ಕೇಳಿ ಒಪ್ಪಿಗೆ ಪಡೆದು ₹ 50000 ವ್ಯಯಿಸಿ 220 ಅಡಿ ಬೋರ್‌ವೆಲ್ ಕೊರೆಸಿದ್ದಾರೆ. 90 ಅಡಿಗೆ 5 ಇಂಚು ನೀರು ಸಹ ಬಂದಿದ್ದು ಸಂಭ್ರಮಿಸಿದ್ದಾರೆ.
ಮೋಟಾರ್ ಅಳವಡಿಸಲು ಸಾಲ
ಗೃಹಲಕ್ಷ್ಮೀಯಿಂದ ಬಂದ ಹಣದಲ್ಲಿ ₹ 4000 ಉಳಿದಿದ್ದು ಮೋಟಾರ್ ಅಳವಡಿಸಲು ₹ 80000 ವೆಚ್ಚ ತಗುಲಿದ್ದು ವಿವಿಧೆಡೆ ಸಾಲ ಮಾಡಿದ್ದಾರೆ. ನೀರಾವರಿ ಮಾಡಿ ಉತ್ತಮ ಬೆಳೆ ಬೆಳೆದು ಈ ಸಾಲ ತೀರಿಸುತ್ತೇವೆಂದು ಎನ್ನುತ್ತಾರೆ ಈರವ್ವ ಹಾಗೂ ಆಕೆಯ ಪತಿ.
ಬೋರ್‌ವೆಲ್ ಕೊರೆಸಿ ಮಾದರಿಯಾದ ಮಹಿಳೆ
ಗೃಹಲಕ್ಷ್ಮೀ ಹಣದಲ್ಲಿ ಯಾವುದೇ ದುಂದು ವೆಚ್ಚ ಮಾಡದೇ ಹಣ ಉಳಿಸಿಕೊಂಡು ಜಮೀನಿನಲ್ಲಿ ಬೋರ್‌ವೆಲ್ ಕೊರೆಯಿಸಿರುವುದು ಇತರರಿಗೆ ಮಾದರಿಯಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಅಪಸ್ವರಗಳ ಮಧ್ಯೆಯೇ ಬೋರ್‌ವೆಲ್ ಕೊರೆಯಿಸಿ ಹಣ ಸದುಪಯೋಗಪಡಿಸಿಕೊಂಡಿರುವುದು ಇದೀಗ ಗ್ರಾಮದಲ್ಲಿ ಚರ್ಚೆಯ ವಿಷಯವಾಗಿರುವುದಂತೂ ಸತ್ಯ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ: ಎಚ್.ಎಂ.ರೇವಣ್ಣ
ಈರವ್ವ ಹೇಳಿದ್ದೇನು?
ನಾನು ಸಾಲಿ ಕಲಿತ್ತಿಲ್ಲರ್ರಿ.. ಆದರೆ ಎರಡ್ಮೂರು ವರ್ಷದ ಹಿಂದೆನೇ ಬೋರ್‌ವೆಲ್ ಕೊರೆಯಿಸಿದರೆ ನಮ್ಮ ಜಮೀನು ನೀರಾವರಿ ಆಗತೈತಿ. ಆಗ ಬೇಕಾದ್ದ ಬೆಳಿಬಹುದು ಅಂತ ಪ್ರಯತ್ನ ಪಟ್ಟಿದ್ವಿ.. ಆದ್ರ ರೊಕ್ಕ ಹೊಂದಸಾಕ್ ಆಗಲಿಲ್ಲ. ಆಮೇಲಿ ಗೃಹಲಕ್ಷ್ಮೀ ದುಡ್ಡು ಬರಾಕ ಚಾಲೂ ಆತ್. ಮೊದಲಿಗಿ ನಾನು ರೊಕ್ಕ ತೆಗದ ಖರ್ಚ ಮಾಡಿದ್ದೆ. ದುಡ್ಡು ಉಳಿಸಿಕೊಂಡ್ರ ಬೋರ್ ಆದ್ರೂ ಕೊರೆಸಾಕ್ ಬರತೈತಿ ಅಂತ ಕೂಡಿಟ್ಟೆ. ಈಗ ಅದೇ ರೊಕ್ಕ ಹಾಕಿ ಬೋರ್‌ವೆಲ್ ಕೊರೆಸೇವಿ. ಖುಷಿ ಆಗತೈತಿ. ₹ 80 ಸಾವಿರ ಸಾಲನೂ ಆಗೈತಿ. ಅದನ್ನು ದುಡಿದ ಮುಟಸ್ತೇವ್ರಿ ಎಂದು ಗೃಹಲಕ್ಷ್ಮೀ ಫಲಾನುಭವಿ ಈರವ್ವ ಭರಮಪ್ಪ ಅಂಗಡಿ ಹೇಳುತ್ತಾರೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಮಾದರಿಯಲ್ಲಿ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಚಂದ್ರಬಾಬು ನಾಯ್ಡು ಘೋಷಣೆ; ಯಾವಾಗ ಜಾರಿ?


