ಮಳೆಯಾರ್ಭಟಕ್ಕೆ ಮಹಾನಗರ ಅಕ್ಷರಶಃ ತತ್ತರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮನೆ, ಅಪಾರ್ಚ್‌ಮೆಂಟ್‌ಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದ್ದರೆ, ಹತ್ತಾರು ಬೈಕ್‌ಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ನಡುವೆ ಮಂಗಳವಾರವೂ ಕೆಲಕಾಲ ಮಳೆ ಮುಂದುವರಿದಿತ್ತು.

ಹುಬ್ಬಳ್ಳಿ (ಅ.12) : ಮಳೆಯಾರ್ಭಟಕ್ಕೆ ಮಹಾನಗರ ಅಕ್ಷರಶಃ ತತ್ತರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮನೆ, ಅಪಾರ್ಚ್‌ಮೆಂಟ್‌ಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದ್ದರೆ, ಹತ್ತಾರು ಬೈಕ್‌ಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ನಡುವೆ ಮಂಗಳವಾರವೂ ಕೆಲಕಾಲ ಮಳೆ ಮುಂದುವರಿದಿತ್ತು.

ಹುಬ್ಬಳ್ಳಿಯಲ್ಲಿ ನಿಲ್ಲದ ಮಳೆ: ಕೆರೆ ಕಟ್ಟೆ ಒಡೆದು ಜಮೀನುಗಳಿಗೆ ನುಗ್ಗಿದ ನೀರು

ಸೋಮವಾರ ಸಂಜೆಯಿಂದ ಶುರುವಾಗಿದ್ದ ಮಳೆ ನಂತರ ರಭಸತೆ ಪಡೆಯಿತು. ಹಳೇಹುಬ್ಬಳ್ಳಿಯ ನಾರಾಯಣ ಸೋಫಾ, ಮ್ಯಾದಾರ ಓಣಿ, ಕುಂಬಾರ ಓಣಿ, ಬ್ಯಾಹಟ್ಟಿಪ್ಲಾಟ್‌, ಇಬ್ರಾಹೀಂಪುರ, ಎಸ್‌.ಎಂ. ಕೃಷ್ಣ ನಗರ, ಬುಲ್ಡೋಜರ್‌ ನಗರ, ಗೌಸಿಯಾನಗರ, ವಿದ್ಯಾನಗರ, ದೇಶಪಾಂಡೆ ನಗರ, ಮಂಟೂರ ರಸ್ತೆ ಸೇರಿ ಹಲವು ಪ್ರದೇಶಗಳ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಈ ಪ್ರದೇಶಗಳ ಮನೆಗಳಲ್ಲಿ ಮೊಳಕಾಲ ವರೆಗೂ ನುಗ್ಗಿದ್ದ ನೀರನ್ನು ಹೊರಹಾಕುವುದರಲ್ಲಿ ಬೆಳಕು ಹರಿದಿತ್ತು. ಮನೆಯಲ್ಲಿದ್ದ ತರಕಾರಿ, ಕಿರಾಣಿ ಸಾಮಗ್ರಿ, ಕಾಳು ಕಡಿಗಳೆಲ್ಲ ನೀರು ಪಾಲಾಗಿ ಜನರನ್ನು ಹೈರಾಣು ಮಾಡಿವೆ.

ನಗರದ ದಾಜೀಬಾನಪೇಟೆ, ಕೊಪ್ಪಿಕರ ರಸ್ತೆ, ಹಳೇಹುಬ್ಬಳ್ಳಿ, ದೇಶಪಾಂಡೆನಗರ, ಅಶೋಕನಗರ, ಲೋಕಪ್ಪನ ಹಕ್ಕಲ, ಹೊಸೂರು ಸೇರಿದಂತೆ ಹಲವು ರಸ್ತೆಗಳು ಮಳೆಯಿಂದಾಗಿ ಕೆರೆಯಂತಾಗಿದ್ದವು.

ದೇವಸ್ಥಾನಕ್ಕೆ ಜಲದಿಗ್ಬಂಧನ:

ದಾಜಿಬಾನಪೇಟೆಯ ತುಳಜಾಭವಾನಿ ದೇವಸ್ಥಾನ ವೃತ್ತ ಸಂಪೂರ್ಣ ಜಲಾವೃತವಾಗಿತ್ತು. ಇದರಿಂದ ಬೈಕ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ವಿವಿಧ ಪ್ರದೇಶದ ಕಾಂಪ್ಲೆಕ್ಸ್‌ಗಳ ನೆಲಮಹಡಿಯಲ್ಲಿ ನೀರು ನುಗ್ಗಿ ಅಪಾರ ಹಾನಿಯುಂಟಾಗಿದೆ. ಬಹುತೇಕ ಅಪಾರ್ಚ್‌ಮೆಂಟ್‌ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಮೋಟಾರ್‌ ಹಚ್ಚಿ ನೀರನ್ನು ಹೊರಹಾಕಲಾಗಿದೆ. ಕಂಪ್ಯೂಟರ್‌, ಕಾಗದ ಪತ್ರ ಸೇರಿದಂತೆ ನೀರಿನಲ್ಲಿ ತೇಲುತ್ತಿದ್ದ ವಸ್ತು ಆರಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಕೊಟ್ಟಿಗೆ ಕುಸಿತ, ಎಮ್ಮೆ ಸಾವು:

ಅಂಚಟಗೇರಿಯ ಬಸಪ್ಪ ಮೊರಬದ ಎಂಬವರ ದನದ ಕೊಟ್ಟಿಗೆ ಕುಸಿದ ಪರಿಣಾಮ ಎಮ್ಮೆ ಸಾವನ್ನಪ್ಪಿದ್ದು 2 ಆಕಳಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನಲ್ಲಿ ಮಳೆ ಹಾನಿ ಕುರಿತು ಈಗಾಗಲೇ ಸರ್ವೇ ಆರಂಭಿಸಲಾಗಿದೆ ಎಂದು ತಹಸೀಲ್ದಾರ್‌ ಪ್ರಕಾಶ ನಾಶಿ ಮಾಹಿತಿ ನೀಡಿದ್ದಾರೆ.

ಮತ್ತೆ ಬಾಯ್ತೆರದ ಗುಂಡಿ

ಒಂದೇ ದಿನ ಸುರಿದ ಮಳೆಗೆ ನಗರದ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಬಾಯ್ತೆರೆದಿವೆ. ತಾತ್ಕಾಲಿಕ ತೇಪೆ ಹಾಕಿದ್ದ ಹಾಗೂ ನೂತನವಾಗಿ ನಿರ್ಮಿಸಿದ ರಸ್ತೆಗಳಲ್ಲೂ ಗುಂಡಿ ಪ್ರತ್ಯಕ್ಷವಾಗಿವೆ. ಇನ್ನು ದಾಜಿಬಾನಪೇಟೆ ಸೇರಿ ಹಲವೆಡೆ ಹೊಸದಾಗಿ ರಸ್ತೆ ನಿರ್ಮಿಸಿದ ಡಾಂಬರ್‌ ರಸ್ತೆಯಲ್ಲಿ ವಾಹನ ಸವಾರರಿಗೆ ಗುಂಡಿ ದರ್ಶನವಾಗುತ್ತಿದೆ.

ಹುಬ್ಬಳ್ಳಿಯಲ್ಲಿ 150 ಕ್ಕೂ ಹೆಚ್ಚು ಮನೆ ಜಲಾವೃತ

ಔಷಧ ಮಳಿಗೆಗೆ ನುಗ್ಗಿದ ನೀರು

ಕೇಶ್ವಾಪುರದಲ್ಲಿನ ಮಠದ ಕಾಂಪ್ಲೆಕ್ಸ್‌ನ ನೆಲಮಹಡಿಯ ನಾಲ್ಕು ಔಷಧ ಮಳಿಗೆಗೆ ನೀರು ನುಗ್ಗಿ ಲಕ್ಷಾಂತರ ಹಾನಿ ಸಂಭವಿಸಿದೆ. ಮೆಡಿ ಪಾಯಿಂಟ್‌, ಶ್ರೀ ಗಜಾನನ ಫಾರ್ಮಾ, ಹುಬ್ಬಳ್ಳಿ ಸರ್ಜಿಕಲ್‌, ಮಂಜುನಾಥ ಮೆಡಿಟೆಕ್‌ ಔಷಧ ವಿತರಕರ ಮಳಿಗೆಗಳಲ್ಲಿದ್ದ . 80 ಲಕ್ಷಕ್ಕೂ ಹೆಚ್ಚಿನ ಔಷಧ ಸಾಮಗ್ರಿಗೆ ಮಳೆ ನೀರು ಹಾನಿಯುಂಟು ಮಾಡಿದೆ. ಔಷಧ ಸಾಮಗ್ರಿ, ಫ್ರೀಜ್‌, ಪಿಠೋಪಕರಣ, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಲೆಕ್ಕಪತ್ರ ಕಾಗದ ಸಂಪೂರ್ಣ ನೀರು ಪಾಲಾಗಿವೆ ಎನ್ನುತ್ತಾರೆ ಔಷಧ ವ್ಯಾಪಾರಸ್ಥ ಗೋವಿಂದ ಕೊಣ್ಣೂರ.

ಮನೆಗೆ ನುಗ್ಗಿದ ತುಪ್ಪರಿಹಳ್ಳದ ನೀರು

ತಾಲೂಕಿನಲ್ಲಿ ಸೋಮವಾರದಿಂದ ಮಂಗಳವಾರ ಬೆಳಗ್ಗೆ ವರೆಗೆ ಸುರಿದ ಭಾರಿ ಮಳೆಗೆ ತುಪ್ಪರಿಹಳ್ಳ ಉಕ್ಕಿ ಹರಿದ ಪರಿಣಾಮ ಐದಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಶಿರಕೋಳ ಗ್ರಾಮದ ಭೀಮರಾಯಪ್ಪ ಬಡಿಗೇರ ಮತ್ತು ಅಣ್ಣವ್ವ ಚಿಕ್ಕನಾಳರ ಮನೆಗೆ ಸೋಮವಾರ ತಡರಾತ್ರಿ 2 ಗಂಟೆ ಸುಮಾರಿಗೆ ತುಪ್ಪರಿಹಳ್ಳದ ನೀರು ನುಗ್ಗಿರುವ ಪರಿಣಾಮ ಮನೆ ಸಂಪೂರ್ಣ ಜಲಾವೃತಗೊಂಡಿದ್ದು ಸ್ಥಳಾಂತರಿಸಲಾಗಿದೆ. ಮೊರಬದಲ್ಲಿ ಅಂಬೇಡ್ಕರ್‌ ನಗರ, ತಳವಾರ ಓಣಿ ಸೇರಿದಂತೆ ಅರ್ಧ ಗ್ರಾಮವೇ ಜಲಾವೃತಗೊಂಡಿತ್ತು. ತುಪ್ಪರಿಹಳ್ಳದ ಪ್ರವಾಹಕ್ಕೆ ಬಳ್ಳೂರ ಹನಸಿ, ಜಾವೂರ, ಶಿರಕೋಳ, ಬ್ಯಾಲ್ಯಾಳ ಹಾಗೂ ಮೊರಬ ತತ್ತರಿಸಿವೆ.

ಸಂಪರ್ಕ ಕಡಿತ:

ಶಿರಕೋಳ, ಹನಸಿ, ಮೊರಬ, ಇನಾಮಹೊಂಗಲ, ಬಳ್ಳೂರ, ಅಳಗವಾಡಿ, ತಿರ್ಲಾಪುರ, ಬ್ಯಾಲ್ಯಾಳÜ, ಗುಮ್ಮಗೋಳ ಗ್ರಾಮಗಳು ತುಪ್ಪರಿಹಳ್ಳದ ಪ್ರವಾಹದಿಂದ ರಸ್ತೆ ಸಂಪರ್ಕ ಕಳೆದುಕೊಂಡಿವೆ. ಅಣ್ಣಿಗೇರಿ ತಾಲೂಕಿನ ನಲವಡಿ ಮತ್ತು ಮನಕವಾಡ ಗ್ರಾಮಕ್ಕೆ ಕಳೆದ 15 ದಿನಗಳಿಂದ ಸಂಪರ್ಕವು ಕಡಿತಗೊಂಡಿದೆ. ಶಿಶುನಹಳ್ಳಿ ಮತ್ತು ಮನಕವಾಡ ಮಧ್ಯದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು ಮಳೆ ಬಂದಾಗ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ.

ಹಳ್ಳದಲ್ಲಿ ಸಿಲುಕಿದ್ದ ಕೃಷಿ ಕಾರ್ಮಿಕ ರಕ್ಷಣೆ

ಅಳಗವಾಡಿಯ ಗ್ರಾಮಕ್ಕೆ ಹೊಂದಿಕೊಂಡಿರುವ ತುಪ್ಪರಿಹಳ್ಳದಲ್ಲಿ ಸಿಲುಕಿದ್ದ ಕೃಷಿ ಕಾರ್ಮಿಕನನ್ನು ಮಂಗಳವಾರ ಬೆಳಗ್ಗೆ ರಕ್ಷಿಸಲಾಗಿದೆ. ಜಮೀನು ಕಾಯಲು ತೆರಳಿದ್ದ ಸೋಮಪ್ಪ ಫಕೀರಪ್ಪ ರಂಗಣ್ಣವರ್‌ (64) ರಕ್ಷಣೆಯಾದವರು. ಎಂದಿನಂತೆ ಸೋಮವಾರ ಜಮೀನಿಗೆ ತೆರಳಿದ್ದಾರೆ. ಹಳ್ಳದ ನೀರಿನ ರಭಸದಿಂದ ತಪ್ಪಿಸಿಕೊಳ್ಳಲು ಸಮೀಪದಲ್ಲಿದ್ದ ಛಾವಣಿ ಏರಿ ಕೂತಿದ್ದಾರೆ. ಮಂಗಳವಾರ ಬೆಳಗ್ಗೆ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ತಂಡದಿಂದ ಸಹಾಯದೊಂದಿಗೆ ಸೋಮಪ್ಪನನ್ನು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ಒದಗಿಸಲಾಯಿತು ಎಂದು ತಹಸೀಲ್ದಾರ್‌ ಅನಿಲ ಬಡಿಗೇರ ತಿಳಿಸಿದ್ದಾರೆ. ಈ ವೇಳೆ ಎಎಸ್‌ಐ ಯಲ್ಲಪ್ಪ ಮೇಟಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಇದ್ದರು.