ಹುಬ್ಬಳ್ಳಿ(ಡಿ.05): ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗವು ನವೆಂಬರ್‌ನಲ್ಲಿ 2.542 ಮಿಲಿಯನ್‌ ಟನ್‌ ಸರಕು ಸಾಗಣೆ (ಸರಾಸರಿ ಪ್ರತಿದಿನ 1267 ವ್ಯಾಗನ್‌) ಮಾಡಿದೆ. ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ ಶೇ. 22ರಷ್ಟುಹೆಚ್ಚು ಸರಕು ಸಾಗಣೆ ಮಾಡಿದಂತಾಗಿದೆ. ಇನ್ನು ಗಡಿಯಾಚೆ ಬಾಂಗ್ಲಾ ದೇಶಕ್ಕೂ ಬಾಗಲಕೋಟೆ, ವಿಜಯಪುರದಿಂದ ಮೆಕ್ಕೆಜೋಳ ರವಾನೆಯಾಗಿದ್ದು ವಿಶೇಷ.

2020ರ ನವೆಂಬರ್‌ನಲ್ಲಿ ಹುಬ್ಬಳ್ಳಿ ವಿಭಾಗವು 31ರೇಕ್‌ಗಳಲ್ಲಿ ಸಿಮೆಂಟ್‌ ಸಾಗಣೆ ಮಾಡಿದೆ. ಒಂದು ತಿಂಗಳ ಅವಧಿಯಲ್ಲಿ ಮಾಡಲಾದ ಗರಿಷ್ಠ ಸಿಮೆಂಟ್‌ ಲೋಡಿಂಗ್‌ ಇದಾಗಿದೆ. ಇನ್ನೂ 36 ರೇಕ್‌ ರಸಗೊಬ್ಬರ್‌, 9.5 ರೇಕ್‌ ಸಕ್ಕರೆ ಮತ್ತು 12.5 ರೇಕ್‌ ಮೆಕ್ಕೆಜೋಳವನ್ನು ಸಾಗಣೆ ಮಾಡಲಾಗಿದೆ. ಇನ್ನೂ ಬಾಗಲಕೋಟೆಯಿಂದ 2477 ಟನ್‌ ಮೆಕ್ಕೆಜೋಳ ಮತ್ತು ವಿಜಯಪುರದಿಂದ 2484 ಟನ್‌ ಮೆಕ್ಕೆಜೋಳವನ್ನು ಬಾಂಗ್ಲಾದೇಶದ ಸಾಗಿಸಿದೆ. ರೈತರು ಮತ್ತು ವರ್ತಕರಿಗೆ ತಮ್ಮ ಉತ್ಪನ್ನಗಳನ್ನು ಗಡಿಯಾಚೆ ರಫ್ತು ಮಾಡಲು ಅನುಕೂಲ ಕಲ್ಪಿಸಿದೆ.

ನವೆಂಬರ್‌ ತಿಂಗಳಲ್ಲಿ ಸರಕು ಸಾಗಾಣಿಕೆಯಿಂದ ಹುಬ್ಬಳ್ಳಿ ರೈಲ್ವೆ ವಿಭಾಗವೂ .250 ಕೋಟಿ ಆದಾಯ ಗಳಿಸಿದೆ. 2019ರ ನವೆಂಬರ್‌ನಲ್ಲಿ ಸರಕು ಸಾಗಾಣಿಕೆಯಿಂದ ಗಳಿಸಿದ ಆದಾಯಕ್ಕಿಂತ ಶೇ. 26ರಷ್ಟುಹೆಚ್ಚಾದಂತಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ ತಿಳಿಸಿದ್ದಾರೆ.

ನಿರಂತರ ಸೋಲುಗಳಿಂದ ಕಂಗೆಟ್ಟ ತೆನೆ ಹೊತ್ತ ಮಹಿಳೆ: ಅಸ್ತಿತ್ವಕ್ಕಾಗಿ ಜೆಡಿಎಸ್‌ ಹೆಣಗಾಟ..!

ಸರಕು ಸಾಗಾಣಿಕೆಯಲ್ಲಿ ವಿಭಾಗವು ಉತ್ತಮ ಸಾಧನೆ ಮಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರಣ. ಸರಕು ಸಾಗಣೆಯಲ್ಲಿ ನಿರಂತರ ಪ್ರಗತಿಯನ್ನು ದಾಖಲಿಸುತ್ತಿರುವುದು. ಆರ್ಥಿಕತೆಯು ಸ್ಥಿರವಾಗಿ ಚೇತರಿಸಿಕೊಳ್ಳುತ್ತಿರುವುದನ್ನು ಸೂಚಿಸುತ್ತದೆ. ವಿಭಾಗದ ವ್ಯವಹಾರ ಅಭಿವೃದ್ಧಿ ಘಟಕವು (ಬಿಡಿಯು) ಕೈಗೊಳ್ಳುತ್ತಿರುವ ಮಾರ್ಕೆಟಿಂಗ್‌ ಪ್ರಯತ್ನ ಮತ್ತು ಉಪಕ್ರಮಗಳು ಫಲ ನೀಡುತ್ತಿವೆ. ಗ್ರಾಹಕರೊಂದಿಗೆ ನಿಯಮಿತವಾಗಿ ಸಂವಾದ ನಡೆಸಿ, ರೈಲ್ವೆಯು ಸರಕು ಸಾಗಣೆಯಲ್ಲಿ ನೀಡುತ್ತಿರುವ ಹಲವಾರು ರಿಯಾಯಿತಿಗಳ ಕುರಿತು ಅವರಿಗೆ ತಿಳಿಸಿ ಮತ್ತು ತಮ್ಮ ಸರಕು ಸಾಗಾಣಿಕೆಗೆ ರೈಲ್ವೆಯನ್ನು ಆಯ್ಕೆ ಮಾಡಿಕೊಳ್ಳಲು ಅವರನ್ನು ಪ್ರೇರೇಪಿಸುವ ಮೂಲಕ ಈ ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಿದೆ ಎಂದರು.

ವಿಭಾಗೀಯ ಪರಿಚಾಲನಾ ವ್ಯವಸ್ಥಾಪಕ ಕೃಷ್ಣ ಚೈತನ್ಯ, ರೈಲ್ವೆಯು ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳಿಗೆ ಉತ್ತಮ ಸರಕು ಸಾಗಣೆ ಸೇವೆಯನ್ನು ನೀಡಲು ಸದಾ ಸಿದ್ಧವಿದೆ. ಇತ್ತೀಚೆಗೆ ಗಂಗಾವತಿ ರೈಲು ನಿಲ್ದಾಣದಲ್ಲಿ ಸರಕು ಸಾಗಣೆಗೆ ಹೊಸ ಗೂಡ್ಸ್‌ ಶೆಡ್‌ ಮಾಡಲಾಗಿದೆ. ರೈಸ್‌ಮಿಲ್‌ಗಳು, ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆಸಕ್ತರು ಮೊ 9731668900/9731668950 ಇಲ್ಲಿ ಸಂಪರ್ಕಿಸಬಹುದು ಎಂದರು.