ಶಿವಾನಂದ ಗೊಂಬಿ

ಹುಬ್ಬಳ್ಳಿ(ಡಿ.03): ನಿರಂತರ ಸೋಲುಗಳಿಂದ ಉತ್ತರ ಕರ್ನಾಟಕದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿರುವ ಜಾತ್ಯತೀತ ಜನತಾದಳ ಈ ಗ್ರಾಮ ಪಂಚಾಯಿತಿ ಚುನಾವಣೆ ಮೂಲಕ ಸಂಘಟನೆಯಾಗಲು ಹೆಣಗಾಟ ಆರಂಭಿಸಿದೆ.

ಉತ್ತರ ಕರ್ನಾಟಕದ ಯಾವ ಜಿಲ್ಲೆಯಲ್ಲೂ ಜೆಡಿಎಸ್‌ ಅಸ್ತಿತ್ವವೇ ಇಲ್ಲ ಎಂಬ ಪರಿಸ್ಥಿತಿಯಿದೆ. ವಿಧಾನಸಭೆ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿತ್ತು. ನಂತರ ನಡೆದ ಧಾರವಾಡ ಜಿಲ್ಲೆಯ ನವಲಗುಂದ ಪುರಸಭೆ ಹಾಗೂ ಅಳ್ನಾವರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮಾತ್ರ ಕೊಂಚ ಕೆಲ ಸ್ಥಾನಗಳನ್ನು ಗೆದ್ದಿತ್ತು. ಇದನ್ನು ಹೊರತುಪಡಿಸಿದರೆ ಎಲ್ಲೆಡೆ ಜೆಡಿಎಸ್‌ ಮನೆ ಖಾಲಿ ಖಾಲಿ. ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಂತೂ ಪಕ್ಷದ ಅಭ್ಯರ್ಥಿಯನ್ನೇ ನಿವೃತ್ತಿಗೊಳಿಸಲಾಯಿತು.

ಇನ್ನೂ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಬೇಕೆಂಬ ಹಂಬಲದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹುಬ್ಬಳ್ಳಿಯಲ್ಲೇ ಮನೆ ಮಾಡಿದ್ದುಂಟು. ಆದರೆ, ಅತ್ತ ಅಧಿಕಾರ ಸಿಗುತ್ತಿದ್ದಂತೆ ಇತ್ತ ಹುಬ್ಬಳ್ಳಿಯಲ್ಲಿನ ಮನೆ ಖಾಲಿ ಮಾಡಿಕೊಂಡು ಹೋಗಿದ್ದು, ಮತ್ತೆ ಇತ್ತ ತಲೆ ಹಾಕದಿರುವುದು ಇತಿಹಾಸ.

ಜೆಡಿಎಸ್‌ಗೆ ಮೇಲ್ಮನೆ ಸಭಾಪತಿ ಸ್ಥಾನದ ಅದೃಷ್ಟ: ಹೊರಟ್ಟಿಗೆ ಸ್ಪೀಕರ್‌ ಪಟ್ಟ?

ಇನ್ನು ಪಕ್ಷದ ಹಿರಿಯ ಮುಖಂಡ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ 7 ಸಲ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾದರೂ ಅವರು ಶಿಕ್ಷಕರ ಸಂಘಟನೆಗಷ್ಟೇ ಸೀಮಿತ. ನವಲಗುಂದದ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಸಮ್ಮಿಶ್ರ ಸರ್ಕಾರವಿದ್ದಾಗ ಸ್ವಲ್ಪ ಓಡಾಡಿಕೊಂಡಿದ್ದರು. ಯಾವಾಗ ಸಮ್ಮಿಶ್ರ ಸರ್ಕಾರ ಪತನವಾಯಿತು ಪಕ್ಷ ಸಂಘಟನೆಯನ್ನೇ ಮರೆತು ಧಾರವಾಡಕ್ಕೆ ಮತ್ತು ಮಾಧ್ಯಮ ಹೇಳಿಕೆಗಷ್ಟೇ ಸೀಮಿತವಾಗಿದ್ದಾರೆ.
ಈ ಎಲ್ಲ ಕಾರಣಗಳಿಂದ ಕಳೆದ ಹಲವು ವರ್ಷಗಳಿಂದ ‘ತೆನೆ ಹೊತ್ತ ಮಹಿಳೆ’ ಈಗ ಸೆರಗು ಹೊದ್ದು ರೋಧಿಸುತ್ತಿದ್ದಾಳೆ. ಇಂತಿಪ್ಪ ಜೆಡಿಎಸ್‌ ಇದೀಗ ಹೇಗಾದರೂ ಮಾಡಿ ಆಕೆಯ ತಲೆಯ ಮೇಲೆ ಮತ್ತೆ ತೆನೆ ಹೊರಿಸಲು ಕೆಲವರು ಹರಸಾಹಸ ನಡೆಸಿದ್ದಾರೆ.

ಪಕ್ಷ ಸಂಘಟನೆ:

ಬೇರು ಮಟ್ಟದಿಂದ ಜೆಡಿಎಸ್‌ ಕಟ್ಟಬೇಕೆಂಬ ಆಸೆ ಸಾಧ್ಯವೇ ಆಗಿಲ್ಲ. ಇದೀಗ ಗ್ರಾಮ ಪಂಚಾಯಿತಿ ಚುನಾವಣೆ ಮೂಲಕ ಪಕ್ಷವನ್ನು ಸಂಘಟಿಸಬೇಕು. ಮುಂದಿನ ಸಲದ ವಿಧಾನಸಭೆ ಚುನಾವಣೆಗೆ ಈ ಮೂಲಕ ಬುನಾದಿ ಹಾಕಬೇಕೆಂಬ ಹಂಬಲ ಮುಖಂಡರದ್ದು. ಕಾರ್ಯಕರ್ತರ ಒಕ್ಕೊರಲಿನ ಆಗ್ರಹವೂ ಇದೆ ಆಗಿದೆ. ಈ ಕಾರಣಕ್ಕಾಗಿ ಇದೀಗ ಪಂಚಾಯಿತಿ ಚುನಾವಣೆ ಸಿದ್ಧತೆಯಲ್ಲಿ ಮುಖಂಡರು ತೊಡಗಿದ್ದಾರೆ.

ಗ್ರಾಪಂ ಚುನಾವಣೆ ಎದುರಿನಲ್ಲಿ HDKಯಿಂದ ಬಿಜೆಪಿ ನಾಯಕರಿಗೆ ಅದ್ಭುತ ಸಲಹೆ

ಏನೇನು ತಯಾರಿ?:

ಜಿಲ್ಲೆಯಲ್ಲಿ 132 ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತದೆ. ಅಂದರೆ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಪಂಚಾಯಿತಿಗಳಿಗೆ ಇದೀಗ ಚುನಾವಣೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಕಾರ್ಯದರ್ಶಿಗಳಂತೆ ನಾಲ್ವರನ್ನು ವೀಕ್ಷಕರನ್ನು ನೇಮಕ ಮಾಡುವುದು. ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಮುಂದಿನ ಸಲದ ಟಿಕೆಟ್‌ ಆಕಾಂಕ್ಷಿಗಳಿಗೆ ಪಂಚಾಯಿತಿ ಚುನಾವಣೆಯ ಜವಾಬ್ದಾರಿ ನೀಡಲಾಗುತ್ತಿದೆ. ಪಕ್ಷದ ಚಿನ್ಹೆ ಇಲ್ಲದೇ ನಡೆಯುವ ಚುನಾವಣೆಯಾದರೂ ಯಾವ ಅಭ್ಯರ್ಥಿಗೆ ಬೆಂಬಲಿಸಬೇಕು ಎಂಬುದನ್ನು ನಿರ್ಧರಿಸಲು ಈ ಮುಖಂಡರಿಗೆ ಜವಾಬ್ದಾರಿ ನೀಡಲಾಗುತ್ತಿದೆ.

ಅಸ್ತಿತ್ವ ಇಲ್ಲದ ಜೆಡಿಎಸ್‌, ಈ ಚುನಾವಣೆ ಮೂಲಕ ಪಕ್ಷ ಸಂಘಟಿಸಿಕೊಂಡು ಅಸ್ತಿತ್ವ ಪಡೆದುಕೊಳ್ಳಬೇಕೆಂಬ ಇಚ್ಛೆಯಿಂದ ಹೋರಾಟ ನಡೆಸಿರುವುದಂತೂ ಸತ್ಯ. ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಪಕ್ಷ ಸಂಘಟನೆಗೆ ಪಂಚಾಯಿತಿ ಚುನಾವಣೆ ಸಹಕಾರಿ. ಆಯಾ ತಾಲೂಕುಗಳಲ್ಲಿನ ಮುಖಂಡರಿಗೆ ಜವಾಬ್ದಾರಿ ನೀಡುತ್ತಿದ್ದೇವೆ. ಈ ಮೂಲಕ ಪಂಚಾಯಿತಿಗಳಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷಕ್ಕೆ ಭದ್ರ ಬುನಾದಿ ಹಾಕಲಾಗುತ್ತಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ತಿಳಿಸಿದ್ದಾರೆ. 

ಪ್ರತಿ ತಾಲೂಕಿಗೆ ವೀಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ತಾಲೂಕು, ಜಿಲ್ಲಾ ಮಟ್ಟಗಳಲ್ಲಿ ಸಭೆಗಳನ್ನು ಕರೆಯಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆ, ಪ್ರಚಾರ ತಂತ್ರಗಳನ್ನು ರೂಪಿಸಲಾಗುತ್ತಿದೆ. ಹೇಗಾದರೂ ಪಂಚಾಯಿತಿ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಹಂಬಲ ನಮ್ಮದು ಎಂದು ಜೆಡಿಎಸ್‌ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ ಹೇಳಿದ್ದಾರೆ.