ಹುಬ್ಬಳ್ಳಿ(ಫೆ.13): ಹುಬ್ಬಳ್ಳಿಯ ಪೋಸ್ಟಲ್‌ ಸ್ಟೋರ್‌ ಡಿಪೋವನ್ನು ಬೆಂಗಳೂರಿನ ಕಚೇರಿಯೊಂದಿಗೆ ವಿಲೀನದ ನಿರ್ಧಾರ ಕೈಬಿಡಲಾಗಿದೆ. ಬದಲಾಗಿ ಹಾಸನದ ಅರಸಿಕೆರೆ ಪಿಎಸ್‌ಡಿ, ಬೆಂಗಳೂರಿನ ಸರ್ಕಲ್‌ ಸ್ಟಾಂಪ್‌ ಡಿಪೋಗಳನ್ನು (ಸಿಎಸ್‌ಡಿ) ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಯಲ್ಲೆ ವಿಲೀನಗೊಳಿಸಲು ತೀರ್ಮಾನವಾಗಿದೆ.

ಕಳೆದ ವರ್ಷ ಹುಬ್ಬಳ್ಳಿ ಹಾಗೂ ಅರಸಿಕೆರೆಯಲ್ಲಿನ ಪಿಎಸ್‌ಡಿಗಳನ್ನು ಬೆಂಗಳೂರಿನ ಕಚೇರಿಯಲ್ಲಿ ವಿಲೀನಗೊಳಿಸಲು ನಿರ್ಧಾರ ಮಾಡಲಾಗಿತ್ತು. ಅದರಿಂದ ಹುಬ್ಬಳ್ಳಿ ಮಾತ್ರವಲ್ಲದೆ ಉಕ ಭಾಗದ 14 ಜಿಲ್ಲೆಗಳ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿತ್ತು. ಹುಬ್ಬಳ್ಳಿಯಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಹುಬ್ಬಳ್ಳಿಯಲ್ಲೆ ಮೂರು ಡಿಪೋಗಳು ವಿಲೀನ ಆಗುವುದರಿಂದ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಇಲ್ಲಿಂದಲೆ ಅಂಚೆ ಸಾಮಗ್ರಿ ಪೂರೈಕೆ ಆಗಲಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಯತ್ನವೂ ಇದರ ಹಿಂದಿದೆ. ಟ್ವಿಟ್‌ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ‘ಹುಬ್ಬಳ್ಳಿ ಪೋಸ್ಟಲ್‌ ಸ್ಟೋರ್‌ ಡಿಪೋದಲ್ಲೇ ಅರಸಿಕೆರೆ ಪಿಎಸ್‌ಡಿ ಹಾಗೂ ಬೆಂಗಳೂರು ಸಿಎಎಸ್‌ಡಿ ವಿಲೀನಕ್ಕೆ ಕರ್ನಾಟಕ ವೃತ್ತದ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಒಪ್ಪಿಗೆ ಸೂಚಿಸಿದ್ದಾರೆ. ಈ ಮೊದಲು ಬೆಂಗಳೂರಿನ ಸಿಎಸ್‌ಡಿ ಕಚೇರಿಯಲ್ಲಿ ಹುಬ್ಬಳ್ಳಿ ಹಾಗೂ ಅರಸಿಕೆರೆ ಪಿಎಸ್‌ಡಿಗಳನ್ನು ವಿಲೀನ ಮಾಡಲು ನಿರ್ಧರಿಸಲಾಗಿತ್ತು. ಸಾಕಷ್ಟುಪ್ರಯತ್ನ ಹಾಗೂ ಮನವಿ ಮೇರೆಗೆ ಹುಬ್ಬಳ್ಳಿ ಕಚೇರಿಗೆ ಅರಸಿಕೆರೆ, ಬೆಂಗಳೂರು ಸಿಎಸ್‌ಡಿ ಬರುವಂತಾಗಿದೆ. ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಗೆ ಇವನ್ನು ನಿಭಾಯಿಸುವ ಸಾಮರ್ಥ್ಯವಿದ್ದು, ಉತ್ತರ ಕರ್ನಾಟಕ ಭಾಗಕ್ಕೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ’ ಎಂದು ಅಭಿನಂದಿಸಿದ್ದಾರೆ.

ಹುಬ್ಬಳ್ಳಿ ಪೋಸ್ಟಲ್‌ ಸ್ಟೋರ್‌ ಬೆಂಗಳೂರಲ್ಲಿ ವಿಲೀನ: ಸಾರ್ವಜನಿಕರ ಆಕ್ರೋಶ

ಪೋಸ್ಟಲ್‌ ಸ್ಟೋರ್‌ ಡಿಪೋ

ಅಂಚೆ ಕಚೇರಿಯಲ್ಲಿ ಬಳಸುವ ಸಾಮಗ್ರಿಗಳನ್ನು ಪೂರೈಸುವ ಡಿಪೋ ಇದು. ಸ್ಟಾಂಪ್‌, ಸ್ಪೀಡ್‌ ಪೋಸ್ಟ್‌ನ ಸ್ಟಿಕರ್‌, ಉಳಿತಾಯ ಖಾತೆಯ ಪಾಸ್‌ಬುಕ್‌, ವಿತ್‌ಡ್ರಾ ಅರ್ಜಿ, ಪೋಸ್ವ್‌ ಕಾರ್ಡ್‌, ಹಣ ಜಮೆ ಮಾಡುವ ಅರ್ಜಿ, ಸೀಲ್‌, ಬ್ಯಾಗ್‌ಗಳು, ಸ್ಟಿಕರ್‌, ಕಸ್ಟಮರ್‌ ಸ್ಟಿಕರ್‌, ಹೀಗೆ ಒಟ್ಟು 200-250ಕ್ಕೂ ಹೆಚ್ಚು ಸಾಮಗ್ರಿಗಳನ್ನು ಇಲ್ಲಿಂದಲೇ ಅಂಚೆ ಕಚೇರಿಗಳಿಗೆ ರವಾನಿಸಲಾಗುತ್ತದೆ.

ಹುಬ್ಬಳ್ಳಿಯ ಪೋಸ್ಟಲ್‌ ಸ್ಟೋರ್‌ ಡಿಪೋ ವ್ಯಾಪ್ತಿಯಲ್ಲಿ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಬೀದರ, ಕಲಬುರಗಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ, ರಾಯಚೂರು ಸೇರಿದಂತೆ 14 ಜಿಲ್ಲೆಗಳ 4,480 ಅಂಚೆಕಚೇರಿಗಳಿಗೆ ಇಲ್ಲಿಂದ ಎಲ್ಲ ಬಗೆಯ ಸಾಮಗ್ರಿಗಳು ರವಾನೆಯಾಗುತ್ತವೆ. ಇದರಲ್ಲಿ ಹಳ್ಳಿಗಳ ಅಂಚೆ ಕಚೇರಿಗಳು ಸೇರಿವೆ. ಕಳೆದ ಹಲವು ದಶಕಗಳಿಂದ ಹುಬ್ಬಳ್ಳಿಯಲ್ಲಿ ಈ ಡಿಪೋ ಇದೆ. ಇದೀಗ ಬೆಂಗಳೂರು ಸಿಎಸ್‌ಡಿ ಹಾಗೂ ಅರಸಿಕೆರೆ ಪಿಎಸ್‌ಡಿ ವ್ಯಾಪ್ತಿಯ ಜಿಲ್ಲೆಗಳಿಗೂ ಅಂದರೆ ಇಡಿ ರಾಜ್ಯಕ್ಕೆ ಹುಬ್ಬಳ್ಳಿ ಪಿಎಸ್‌ಡಿ ಕಚೇರಿಯಿಂದಲೆ ಈ ಸಾಮಗ್ರಿಗಳು ಪೂರೈಕೆ ಆಗಲಿದೆ.

‘ಕನ್ನಡಪ್ರಭ’ದಲ್ಲಿ ಸೆ. 25ರಂದು ಈ ಕುರಿತಂತೆ ವರದಿ ಪ್ರಕಟವಾಗಿತ್ತು. ಹುಬ್ಬಳ್ಳಿಯ ಪೋಸ್ಟಲ್‌ ಸ್ಟೋರ್‌ ಡಿಪೋವನ್ನು ಬೆಂಗಳೂರಿನ ಕಚೇರಿಯೊಂದಿಗೆ ವಿಲೀನ ಮಾಡುವ ಬಗ್ಗೆ ಸಾಕಷ್ಟು ವಿರೋಧವನ್ನು ಜನತೆ ವ್ಯಕ್ತಪಡಿಸಿದ್ದರು. ವಿಕೇಂದ್ರೀಕರಣ, ಉತ್ತರ ಕರ್ನಾಟಕ ಭಾಗಕ್ಕೆ ಕಚೇರಿಗಳನ್ನು ಸ್ಥಳಾಂತರಿಸುವ ಬೇಡಿಕೆಗೆ ವಿರುದ್ಧವಾಗಿ ಇಲ್ಲಿಂದಲೇ ಪ್ರಮುಖ ಕಚೇರಿಗಳನ್ನು ಎತ್ತಂಗಡಿ ಮಾಡದೆ ಇಲ್ಲಿಯೆ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ವರದಿಯಿಂದ ಎಚ್ಚೆತ್ತ ಸಚಿವರು, ಅಧಿಕಾರಿಗಳು ಕಚೇರಿ ಉಳಿಸುವ ಕಾರ್ಯ ಮಾಡಿದ್ದಾರೆ.