ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ| ಉತ್ತರ ಕರ್ನಾಟಕದ 4480 ಅಂಚೆ ಕಚೇರಿಗಳಿಗೆ ಬೇಕಾಗುವ ಸಾಮಗ್ರಿ ಇಲ್ಲಿಂದ ಪೂರೈಕೆ| ಯಾವುದೇ ಕಾರಣಕ್ಕೂ ಇಲ್ಲಿಂದ ಎತ್ತಂಗಡಿ ಮಾಡಬೇಡಿ: ಸಾರ್ವಜನಿಕರ ಆಕ್ರೋಶ| ಹೋರಾಟ ಮಾಡಲು ಸಿದ್ಧ ಎಂದು ನಾಗರಿಕರು|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಸೆ.25): ಇತ್ತೀಚಿಗಷ್ಟೇ ಹುಬ್ಬಳ್ಳಿಯಲ್ಲಿನ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿ (ಪಿಸಿಐಟಿ) ಗೋವಾಕ್ಕೆ ಸ್ಥಳಾಂತರಿಸಲು ಆದೇಶಿಸಿ ಮತ್ತೆ ಹಿಂದಕ್ಕೆ ಪಡೆದಿದ್ದ ಕೇಂದ್ರ ಸರ್ಕಾರ ಇದೀಗ ಪೋಸ್ಟಲ್ ಸ್ಟೋರ್ ಡಿಪೋಗೆ ಕೈ ಹಚ್ಚಿದೆ.
ಹುಬ್ಬಳ್ಳಿಯಲ್ಲಿ ಪೋಸ್ಟಲ್ ಸ್ಟೋರ್ ಡಿಪೋವನ್ನು ಬೆಂಗಳೂರಿನ ಕಚೇರಿಯೊಂದಿಗೆ ವಿಲೀನಗೊಳಿಸಲು ಆದೇಶಿಸಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಇಲ್ಲಿನ ಪೋಸ್ಟಲ್ ಸ್ಟೋರ್ ಎತ್ತಂಗಡಿ ಮಾಡಲು ಬಿಡಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಹಾಸನ ಜಿಲ್ಲೆಯ ಅರಸಿಕೆರೆ ಹೀಗೆ ಮೂರು ಕಡೆಗಳಲ್ಲಿ ಪೋಸ್ಟಲ್ ಸ್ಟೋರ್ ಡಿಪೋಗಳಿವೆ. ಇದೀಗ ಹುಬ್ಬಳ್ಳಿ ಹಾಗೂ ಅರಸಿಕೆರೆಯಲ್ಲಿನ ಪೋಸ್ಟಲ್ ಸ್ಟೋರ್ ಡಿಪೋಗಳನ್ನು ಬೆಂಗಳೂರಿನ ಕಚೇರಿಯಲ್ಲಿ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸೆ. 30ರೊಳಗೆ ಬೆಂಗಳೂರಿಗೆ ಈ ಎರಡು ಕಚೇರಿಗಳನ್ನು ಸ್ಥಳಾಂತರ ಮಾಡಬೇಕೆಂದು ಕೇಂದ್ರ ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ ಹುಬ್ಬಳ್ಳಿ ಕಚೇರಿಗೆ ಅಧಿಕೃತವಾಗಿ ಆದೇಶದ ಪ್ರತಿ ಇನ್ನೂ ಬಂದಿಲ್ಲ. ಹೀಗಾಗಿ ಬರೀ ಸುದ್ದಿಯಿದೆ. ನಮಗೆ ಅಧಿಕೃತ ಆದೇಶ ಬಂದಿಲ್ಲ. ಆದೇಶ ಬಂದ ಮೇಲೆ ನಿರ್ದೇಶನ ಪಾಲಿಸುತ್ತೇವೆ ಎಂದು ಅಧಿಕಾರಿ ವರ್ಗ ತಿಳಿಸುತ್ತದೆ.
ಹುಬ್ಬಳ್ಳಿ: 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ವೈದ್ಯರಿಂದ ಮೌನ ಪ್ರತಿಭಟನೆ
ಏನಿದು ಪೋಸ್ಟಲ್ ಸ್ಟೋರ್?:
ಅಂಚೆ ಕಚೇರಿಗಳಲ್ಲಿ ಬಳಕೆಯಾಗುವ ಸಾಮಗ್ರಿಗಳನ್ನು ಪೂರೈಸುವ ಡಿಪೋ ಎಂದು ಕೂಡ ಇದಕ್ಕೆ ಕರೆಯಲಾಗುತ್ತದೆ. ಉದಾಹರಣೆಗೆ ಸ್ಟಾಂಪ್, ಸ್ಪೀಡ್ ಪೋಸ್ಟ್‌ನ ಸ್ಟೀಕರ್, ಉಳಿತಾಯ ಖಾತೆಯ ಪಾಸ್‌ಬುಕ್, ವಿತ್‌ಡ್ರಾ ಅರ್ಜಿ, ಪೋಸ್ಟ್ ಕಾರ್ಡ್, ಹಣ ಜಮೆ ಮಾಡುವ ಅರ್ಜಿ, ಸೀಲ್, ಬ್ಯಾಗ್‌ಗಳು, ಸ್ಟೀಕರ್, ಕಸ್ಟಮರ್ ಸ್ಟೀಕರ್, ಹೀಗೆ ಒಟ್ಟು 200-250ಕ್ಕೂ ಹೆಚ್ಚು ಸಾಮಗ್ರಿಗಳನ್ನು ಇಲ್ಲಿಂದಲೇ ಅಂಚೆ ಕಚೇರಿಗಳಿಗೆ ರವಾನಿಸಲಾಗುತ್ತದೆ. ಹುಬ್ಬಳ್ಳಿಯ ಪೋಸ್ಟಲ್ ಸ್ಟೋರ್ ಡಿಪೋ ವ್ಯಾಪ್ತಿಯಲ್ಲಿ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಬೀದರ, ಕಲಬುರಗಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ, ರಾಯಚೂರು ಸೇರಿದಂತೆ 14 ಜಿಲ್ಲೆಗಳ 4,480 ಅಂಚೆಕಚೇರಿಗಳಿಗೆ ಇಲ್ಲಿಂದ ಎಲ್ಲ ಬಗೆಯ ಸಾಮಗ್ರಿಗಳು ರವಾನೆಯಾಗುತ್ತದೆ. ಇದರಲ್ಲಿ ಹಳ್ಳಿಗಳ ಅಂಚೆ ಕಚೇರಿಗಳು ಸೇರಿವೆ. ಕಳೆದ ಹಲವು ದಶಕಗಳಿಂದ ಹುಬ್ಬಳ್ಳಿಯಲ್ಲಿ ಈ ಡಿಪೋಗಳಿವೆ. ಇಲ್ಲಿಂದ ಬೆಂಗಳೂರಿನ ಡಿಪೋದೊಳಗೆ ವಿಲೀನವಾದ ಬಳಿಕ ರಾಜ್ಯಾದ್ಯಂತ ಅಂಚೆ ಕಚೇರಿಗಳಿಗೆ ಬೆಂಗಳೂರಿನಿಂದಲೇ ಸರಬರಾಜು ಮಾಡಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.
ಆಕ್ರೋಶ
ಹುಬ್ಬಳ್ಳಿಯಿಂದ ಪೋಸ್ಟಲ್ ಸ್ಟೋರ್ ಡಿಪೋ ಎತ್ತಂಗಡಿ ಮಾಡುತ್ತಿರುವುದಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ. ಒಂದೊಂದೇ ಕಚೇರಿಗಳನ್ನು ಇಲ್ಲಿಂದ ಸ್ಥಳಾಂತರಿಸಿದರೆ ಹೇಗೆ? ವಿಲೀನ ಮಾಡುವ ಅಗತ್ಯವಾದರೂ ಏನು? ಇಲ್ಲಿನ ಪೋಸ್ಟಲ್ ಡಿಪೋವನ್ನು ಯಾವುದೇ ಕಾರಣಕ್ಕೂ ಬೆಂಗಳೂರಿನ ಡಿಪೋದಲ್ಲಿ ವಿಲೀನಗೊಳಿಸಬಾರದು ಎಂಬ ಒತ್ತಾಯ ನಾಗರಿಕರದ್ದು. ಇದಕ್ಕಾಗಿ ಹೋರಾಟ ಮಾಡಲು ಸಿದ್ಧ ಎಂದು ನಾಗರಿಕರು ತಿಳಿಸುತ್ತಾರೆ.
ಒಟ್ಟಿನಲ್ಲಿ ಪೋಸ್ಟಲ್ ಸ್ಟೋರ್ ಡಿಪೋ ಬೆಂಗಳೂರು ಡಿಪೋದಲ್ಲಿ ವಿಲೀನಗೊಳಿಸುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿರುವುದಂತೂ ಸತ್ಯ. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.
ನಮ್ಮ ಪೋಸ್ಟಲ್ ಸ್ಟೋರ್ ಬೆಂಗಳೂರಿನ ಡಿಪೋದಲ್ಲಿ ವಿಲೀನವಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ನಮಗೆ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ನಾವೇನೂ ಹೇಳೋಕೆ ಬರಲ್ಲ. ಬಂದ ಮೇಲೆ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಪೋಸ್ಟಲ್ ಸ್ಟೋರ್ ಡಿಪೋದ ವ್ಯವಸ್ಥಾಪಕ ವಿಜಯ್ ತಿಳಿಸಿದ್ದಾರೆ.
ಪೋಸ್ಟಲ್ ಸ್ಟೋರ್ ಕಳೆದ ಹಲವು ದಶಕಗಳಿಂದ ಹುಬ್ಬಳ್ಳಿಯಲ್ಲಿದೆ. ಇದನ್ನು ಎತ್ತಂಗಡಿ ಮಾಡಿ ಬೆಂಗಳೂರಿನ ಡಿಪೋದೊಳಗೆ ವಿಲೀನಗೊಳಿಸುವುದು ಸರಿಯಲ್ಲ. ಇದರಿಂದ ಈ ಭಾಗದ ಅಂಚೆ ಕಚೇರಿಗಳಿಗೆ ಸಾಕಷ್ಟು ಅನುಕೂಲವಿದೆ. ಇದಕ್ಕೆ ನಮ್ಮ ವಿರೋಧವಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಶಾಕೀರ ಸನದಿ ಹೇಳಿದ್ದಾರೆ.
