ಸಂಜೆ ಐದು ಗಂಟೆವರೆಗೆ ಎಗ್ಗಿಲ್ಲದೆ ಸಾಗಿದ ಸಂಚಾರ| ಚೆಕ್‌ಪೋಸ್ಟ್‌ನಲ್ಲೂ ಕಡಿಮೆಯಾದ ಬಿಗು| ನಗರದ ಸೀಲ್‌ಡೌನ್‌ ಪ್ರದೇಶಗಳಾದ ಕೇಶ್ವಾಪುರ, ಗಣೇಶಪೇಟೆ ಹಾಗೂ ಶಾಂತಿನಗರದಲ್ಲಿ ಜನಸಂಚಾರ| ಕಂಟೈನ್ಮೆಂಟ್‌ ಪ್ರದೇಶವಾದ 3 ಕಿಮೀ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ 15 ಚೆಕ್‌ಪೋಸ್ಟ್‌ಗಳಲ್ಲಿ ಬಹುತೇಕ ಚೆಕ್‌ಪೋಸ್ಟ್‌ ಸಡಿಲ|

ಹುಬ್ಬಳ್ಳಿ(ಮೇ.06): ಲಾಕ್‌ಡೌನ್‌ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಕೂಡ ನಗರಾದ್ಯಂತ ಮಿತಿಮೀರಿದ ಜನಸಂದಣಿಯಲ್ಲಿ ವ್ಯವಹಾರ ಮುಂದುವರಿದಿದೆ. ಕೆಲ ಕ್ಷೇತ್ರಗಳು ತೆರೆದುಕೊಂಡಿಲ್ಲ ಎಂಬುದನ್ನು ಹೊರತುಪಡಿಸಿದರೆ ಉಳಿದೆಲ್ಲ ವಹಿವಾಟುಗಳು ದೈನಂದಿನ ಸ್ವರೂಪ ಪಡೆದಿವೆ.

ಕೊರೋನಾ ಲಾಕ್‌ಡೌನ್‌ ಕಾರಣದಿಂದ ಸ್ಥಗಿತಗೊಂಡು ಸೋಮವಾರದಿಂದ ತೆರೆದುಕೊಂಡಿದ್ದರೂ ಸ್ವಚ್ಛತೆ, ಸಿದ್ಧತೆಯಲ್ಲಿ ತೊಡಗಿದ್ದರು. ಹೀಗಾಗಿ ಮಂಗಳವಾರದಿಂದಲೇ ಎಲ್ಲ ದೈನದಿಂದ ಕಾರ್ಯಗಳು ಪ್ರಾರಂಭಗೊಂಡಿವೆ. ಈ ನಡುವೆ ಆಟೋರಿಕ್ಷಾ, ಜಿಮ್‌, ಟ್ಯಾಕ್ಸಿಗಳು ಕೂಡ ತಮಗೆ ಷರತ್ತು ಬದ್ಧವಾಗಿಯಾದರೂ ವಹಿವಾಟು ಆರಂಭಕ್ಕೆ ಪರವಾನಗಿ ನೀಡಲು ಮನವಿ ಮಾಡಿಕೊಳ್ಳುತ್ತಿವೆ. ಈ ಕುರಿತು ಜಿಲ್ಲಾಡಳಿತ ಯಾವುದೇ ತೀರ್ಮಾನವನ್ನು ಈ ವರೆಗೆ ಪ್ರಕಟಿಸಿಲ್ಲ.

ಲಾಕ್‌ಡೌನ್‌ ಎಫೆಕ್ಟ್‌: ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ 23 ಕೋಟಿ ನಷ್ಟ!

ಹಾಗೆ ನೋಡಿದರೆ ಮಂಗಳವಾರದ ವಾಹನ ಸಂಚಾರ ಸೋಮವಾರಕ್ಕಿಂತ ಕಡಿಮೆಯಾಗಿತ್ತು. ವಿವಿಧೆಡೆ ಕೊರೋನಾ ಪ್ರಕರಣ ಹೆಚ್ಚಿನ ಹಿನ್ನೆಲೆಯಲ್ಲಿ ಜನ ಮನೆಯಿಂದ ಬರಲು ಹಿಂದೇಟು ಹಾಕಿದರು. ಸಂಜೆ ಏಳು ಗಂಟೆವರೆಗೂ ದ್ವಿಚಕ್ರ ವಾಹನ, ಕಾರು, ಸರಕು ಸಾಗಣೆ ವಾಹನಗಳು ನಿರಂತರವಾಗಿ ಸಂಚರಿಸಿದವು. 7 ಗಂಟೆ ಬಳಿಕ ಇವುಗಳಿಗೆ ಕಡಿವಾಣ ಬಿತ್ತು. ಇದಕ್ಕೂ ಮುನ್ನ ಸಂಜೆ 5 ಗಂಟೆಗೆ ನವಲೂರು ಮೂಲದ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ಘೋಷಣೆ ಆದ ಬಳಿಕ ಮತ್ತಷ್ಟು ಜನಸಂಚಾರ ಕಡಿಮೆಯಾಯಿತು. ಮಹಾನಗರ ಪೊಲೀಸರು ವಿವಿಧೆಡೆ ವಿಶೇಷ ಗಸ್ತು ನಡೆಸುವ ಮೂಲಕ ಜನತೆ ಗುಂಪುಗೂಡದಂತೆ ಎಚ್ಚರಿಕೆ ನೀಡುತ್ತ ಸಾಗಿದರು.

ಆದರೆ, ನಗರದ ಸೀಲ್‌ಡೌನ್‌ ಪ್ರದೇಶಗಳಾದ ಕೇಶ್ವಾಪುರ, ಗಣೇಶಪೇಟೆ ಹಾಗೂ ಶಾಂತಿನಗರದಲ್ಲಿ ಜನಸಂಚಾರ ಕಂಡುಬಂತು. ಕಂಟೈನ್ಮೆಂಟ್‌ ಪ್ರದೇಶವಾದ 3 ಕಿಮೀ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ 15 ಚೆಕ್‌ಪೋಸ್ಟ್‌ಗಳಲ್ಲಿ ಬಹುತೇಕ ಚೆಕ್‌ಪೋಸ್ಟ್‌ಗಳನ್ನು ಸಡಿಲಿಸಲಾಗಿದೆ. ಹೀಗಾಗಿ ಇಲ್ಲಿ ಸಂಚಾರಕ್ಕೆ ಯಾವುದೆ ತಡೆಯಿಲ್ಲದೆ ಸಾಗಿದೆ. ಈ ಕುರಿತಂತೆ ತೀವ್ರ ಆಕ್ಷೇಪಗಳು, ಆರೋಗ್ಯ ಭೀತಿಯೂ ಹೆಚ್ಚಿದೆ.