ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್, ಗಣೇಶ ವಿಸರ್ಜನಾ ಮೆರವಣಿಗೆಗೆ ಅಡ್ಡಿಯಾಗುವುದಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸ್ಪಷ್ಟಪಡಿಸಿದ್ದಾರೆ. 18 ಅಡಿ ಎತ್ತರದವರೆಗಿನ ಗಣಪತಿಗಳು ಹಳೆಯ ಮಾರ್ಗದಲ್ಲೇ ಸಾಗಲಿದ್ದು, ಅದಕ್ಕಿಂತ ಎತ್ತರದ ನಾಲ್ಕು ಬೃಹತ್ ಗಣಪತಿಗಳಿಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ.
ಹುಬ್ಬಳ್ಳಿ: ಗಣೇಶ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮುಂಭಾಗ ನಿರ್ಮಿಸುತ್ತಿರುವ ಫ್ಲೈಓವರ್ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ನಾಲ್ಕು ಬೃಹತ್ ಗಣಪತಿಗಳಿಗೆ ಮಾತ್ರ ಪರ‍್ಯಾಯ ಮಾರ್ಗ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಲೈಓವರ್‌ನಿಂದ 16ರಿಂದ 18 ಅಡಿ ಎತ್ತರದ ಗಣಪತಿಗಳ ವಿಸರ್ಜನಾ ಮೆರವಣಿಗೆಗೆ ಯಾವುದೇ ತೊಂದರೆಯಾಗುವುದಿಲ್ಲ. 18 ಅಡಿಗೂ ಎತ್ತರದ ನಾಲ್ಕು ಬೃಹತ್ ಗಣಪತಿಗಳಿಗೆ ಮಾತ್ರ ಪರ‍್ಯಾಯ ಮಾರ್ಗ ಕಲ್ಪಿಸಲಾಗುವುದು ಎಂದರು.
ಹುಬ್ಬಳ್ಳಿಯ ಗಣೇಶೋತ್ಸವ ರಾಜ್ಯದಲ್ಲೇ ವಿಜೃಂಭಣೆಯಿಂದ ನಡೆಯುತ್ತಿದ್ದು, ಈ ಬಾರಿ 25 ಅಡಿಗೂ ಎತ್ತರದ 3-4 ಬೃಹತ್ ಗಣಪತಿಗಳ ವಿಸರ್ಜನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ಪೊಲೀಸ್, ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿಗೆ ಮಾರ್ಗಗಳ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.
ಗಣಪತಿಗಳ ವಿಸರ್ಜನೆ
ಸೆ. 14ರಂದು ಪ್ರತಿಷ್ಠಾಪನೆಯಾಗುವ 5 ದಿನಗಳ ಗಣಪತಿಗಳ ವಿಸರ್ಜನೆ ಸೆ. 18ರಿಂದ ಆರಂಭವಾಗಲಿದೆ. 7 ದಿನಗಳ ಗಣಪತಿಗಳ ವಿಸರ್ಜನೆ ಸೆ. 20ರಂದು, 9 ದಿನಗಳ ಗಣಪತಿಗಳ ವಿಸರ್ಜನೆ ಸೆ. 22ರಂದು ಹಾಗೂ 12 ದಿನಗಳ ಗಣಪತಿಗಳ ವಿಸರ್ಜನೆ ಸೆ. 25ರಂದು ನಡೆಯಲಿದೆ. ಈ ವೇಳೆ ಬೃಹತ್ ಗಣಪತಿಗಳಿಗೆ ವಿಶೇಷ ಮಾರ್ಗ ಕಲ್ಪಿಸಲಾಗುವುದು ಎಂದರು.
ಪ್ರತಿ ವರ್ಷದಂತೆ 16ರಿಂದ 18 ಅಡಿ ಎತ್ತರದ ಗಣಪತಿಗಳು ಚೆನ್ನಮ್ಮ ವೃತ್ತದ ಮೂಲಕವೇ ಸಾಗಲಿವೆ. 18 ಅಡಿಗೂ ಎತ್ತರದ ನಾಲ್ಕು ಗಣಪತಿಗಳನ್ನು ದೇಶಪಾಂಡೆ ನಗರದ ಮೇಲ್ಭಾಗದ ಮೂಲಕ ಪರ‍್ಯಾಯ ಮಾರ್ಗ ಕಲ್ಪಿಸಲಾಗಿದ್ದು, ಅಗತ್ಯವಿದ್ದಲ್ಲಿ ತಾತ್ಕಾಲಿಕ ಡಿವೈಡರ್‌ಗಳನ್ನು ಒಂದು ದಿನ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಡಿಸಿಪಿಗಳಾದ ರವೀಶ್ ಸಿ.ಆರ್., ಶ್ರುತಿ ಎನ್.ಎಸ್., ಆರ್‌ಎಫ್‌ಒ ಆರ್.ಎಸ್. ಉಪ್ಪಾರ ಸೇರಿದಂತೆ ಮಹಾಮಂಡಳದ ಪದಾಧಿಕಾರಿಗಳಾದ ಎಸ್.ಎಸ್. ಕಮಡೊಳ್ಳಿಶೆಟ್ಡರ್, ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಚನ್ನಬಸಪ್ಪ ಧಾರವಾಡಶೆಟ್ಟರ, ಮುಖಂಡರಾದ ರವಿ ನಾಯ್ಕ, ಪರಶುರಾಮ ಪೂಜಾರ ಸೇರಿದಂತೆ ಹಲವರಿದ್ದರು.
ಅಧಿಕಾರಿಗಳೊಂದಿಗೆ ಪರಿಶೀಲನೆ
ಚೆನ್ನಮ್ಮ ವೃತ್ತದ ಬಳಿ ಫ್ಲೈಓವರ್‌ನಿಂದ ಗಣೇಶ ಮೆರವಣಿಗೆಗೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಶಾಸಕ ಟೆಂಗಿನಕಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಸ್ಕಾಂನ ಲ್ಯಾಡರ್ ಬಳಸಿ ಫ್ಲೈಓವರ್‌ನ ಎತ್ತರ ಅಳೆಯಲಾಯಿತು. ಯಾವ ಮಾರ್ಗದಲ್ಲಿ ಮೆರವಣಿಗೆ ನಡೆಸಿದರೆ ಸುಗಮವಾಗಲಿದೆ ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.


