Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ರೌಡಿಶೀಟರ್‌ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಹುಬ್ಬಳ್ಳಿಯ 77 ರೌಡಿಗಳಿಗೆ ಬಿಸಿ ಮುಟ್ಟಿಸಿದ ಆರಕ್ಷಕರು| ರೌಡಿಶೀಟರ್‌ಗಳು, ಶಂಕಾಸ್ಪದರ ಮನೆ ಮೇಲೆ ದಾಳಿ| ಮುಂದುವರೆದ ರೌಡಿಗಳ ವಿಚಾರಣೆ| ದಾಳಿ ಇಬ್ಬರ ಬಳಿ ಮಾರಕಾಸ್ತ್ರಗಳೂ ಪತ್ತೆಯಾಗಿದ್ದು, ಇವರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ| ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕೂಡ ಪೊಲೀಸ್ ಬಲೆಗೆ ಬಿದ್ದಿದ್ದಾನೆ| 

Hubballi- Dharwad Police Attack on Rowdysheeters
Author
Bengaluru, First Published Sep 25, 2019, 11:01 AM IST

ಹುಬ್ಬಳ್ಳಿ: (ಸೆ.25) ಮಂಗಳವಾರ ಬೆಳ್ಳಂಬೆಳಗ್ಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ರೌಡಿಶೀಟರ್‌ಗಳಿಗೆ ಬಿಸಿ ಮುಟ್ಟಿಸಿದ್ದು, ಅಪರಾಧ ಚಟುವಟಿಕೆಗೆ ಅವಕಾಶವಿಲ್ಲ ಎಂಬ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.

ಹುಬ್ಬಳ್ಳಿ ನಗರದ ಹಳೇ ಹುಬ್ಬಳ್ಳಿ, ಕೇಶ್ವಾಪುರ ಸೇರಿದಂತೆ ವಿವಿಧೆಡೆ 186 ಕ್ಕೂ ಹೆಚ್ಚು ರೌಡಿಶೀಟರ್‌ಗಳು, ಶಂಕಾಸ್ಪದರ ಮನೆ ಮೇಲೆ ದಾಳಿ ಮಾಡಿ 77  ರೌಡಿಗಳ ಮೇಲೆ ಮುಂಜಾಗೃತ ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ 100 ಕ್ಕೂ ಹೆಚ್ಚು ರೌಡಿಗಳನ್ನು ವಿಚಾರಣೆ ಮುಂದುವರಿಸಿದ್ದಾರೆ. ದಾಳಿ ಇಬ್ಬರ ಬಳಿ ಮಾರಕಾಸ್ತ್ರಗಳೂ ಪತ್ತೆಯಾಗಿದ್ದು, ಇವರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕೂಡ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಹದಿನೈದು ದಿನಗಳ ಹಿಂದಿನ ಹತ್ಯೆ, ಮಾರಣಾಂತಿಕ ಹಲ್ಲೆ ಪ್ರಕರಣದಿಂದ ರೌಡಿ ಚಟುವಟಿಕೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾರ್ಗದರ್ಶನದಲ್ಲಿ ಪೊಲೀಸ್ ಪಡೆ ತಮ್ಮ ತಮ್ಮ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದರು. 

ಹಳೆ ಹುಬ್ಬಳ್ಳಿ, ಬೆಂಗೇರಿ, ನೇಕಾರ ನಗರ, ಅರವಿಂದನಗರ, ಕೇಶ್ವಾಪುರ, ಬೆಂಡಿಗೇರಿ ವ್ಯಾಪ್ತಿಯ ಮನೆಗಳ ಮೇಲೆ ಪರಿಶೀಲನೆ ಕೈಗೊಂಡಿದ್ದಾರೆ. ಮನೆ ಮನೆ ಹೊಕ್ಕಿದ ಪೊಲೀಸರು ಅಟ್ಟದ ಮೇಲಿದ್ದ, ಮಂಚದ ಕೆಳಗಿದ್ದ ಮಾರಕಾಸ್ತ್ರಗಳನ್ನು ಹುಡುಕಿ ಹೊರತೆಗೆದಿದ್ದಾರೆ. ಹಲವೆಡೆ ಚಿಕ್ಕಪುಟ್ಟ ವಾಗ್ವಾದಗಳೂ ನಡೆದಿವೆ.

ನಾಗಶೆಟ್ಟಿಕೊಪ್ಪದಲ್ಲಿ ಶೋಧ ಕೈಗೊಂಡ ವೇಳೆ ರೌಡಿಶೀಟರ್ ಅಲ್ತಾಫ್ ಮಹಮ್ಮದ ಅಲಿ ಬೇಪಾರಿ ಹಾಗೂ ಶಾಂತಿನಗರದ ಶಿವಕುಮಾರ ಬಾಲಸುಬ್ರಮಣ್ಯಂ ಮನೆಯಲ್ಲಿ ತಲ್ವಾರ, ಲಾಂಗ್, ಡ್ರ್ಯಾಗರ್ ಮತ್ತು ಚಾಕುಗಳನ್ನು ಜಪ್ತಿ  ಮಾಡಲಾಗಿದೆ. ಆರೋಪಿತರನ್ನು ಬಂಧಿಸಿ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಉಪ ಪೊಲೀಸ್ ಆಯುಕ್ತರಾದ ಡಿ. ಎಲ್. ನಾಗೇಶ ಮತ್ತು ಡಾ. ಶಿವಕುಮಾರ ಗುಣಾರೆ, ಸಹಾಯಕ ಪೊಲೀಸ್ ಆಯುಕ್ತ ಎಚ್.ಕೆ. ಪಠಾಣ, ಎಸ್.ಎಂ. ಸಂದಿಗವಾಡ ಅವರು ಕಾರ್ಯಾಚರಣೆಯಲ್ಲಿದ್ದು. ಇನ್ನು ಕಮರಿಪೇಟೆ, ಕಸಬಾಪೇಟೆ, ಹಳೆ ಹುಬ್ಬಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಮಹಿಳಾ ಪೊಲೀಸರು ಪಾಲ್ಗೊಂಡಿದ್ದರು.

ಆರೋಪಿ ಅಂದರ್ 
ಇನ್ನು, ಕೊಲೆಯತ್ನ ಮಾಡಿ ತಲೆಮರೆಸಿಕೊಂಡಿದ್ದ ಹಳೆಹುಬ್ಬಳ್ಳಿಯ ಇಂದ್ರ ಪ್ರಸ್ತನಗರದ ಮಹ್ಮದ್ ಹನೀಫ್ ಬಿಜಾಪುರ ಎಂಬಾತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಇವನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಖಡಕ್ ಎಚ್ಚರಿಕೆ: 
ಗಣೇಶ ವಿಸರ್ಜನೆ ವೇಳೆ ನಡೆದ ಬಸವರಾಜ ಶಿವೂರ ಹತ್ಯೆ ಹಾಗೂ 8 ಕ್ಕೂ ಹೆಚ್ಚು ಕಡೆಯಲ್ಲಿ ಚೂರಿ ಇರಿತ, ಪಂಚ್ ಮೂಲಕ ಹಲ್ಲೆ ಪ್ರಕಣಗಳಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದಾದ ಬಳಿಕ ಹಳೆ ಹುಬ್ಬಳ್ಳಿ ಯಲ್ಲಿ ಕರಣ ಹಾಗೂ ಗೋಕುಲ ರಸ್ತೆಯಲ್ಲಿ ನಡೆದ ಬಿಹಾರಿ ಮೂಲದ ಪರ್ವೇಶ ಕೊಲೆಯಿಂದಾಗಿ ಹುಬ್ಬಳ್ಳಿ ಅಕ್ಷರಶಃ ಬೆಚ್ಚಿ ಬಿದ್ದಿತ್ತು. ಇವೆಲ್ಲವು ಪೊಲೀಸ್ ಇಲಾಖೆಯ ಮೇಲೆ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದರು. 

ಮಂಗಳವಾರ ಕಾರ್ಯಾಚರಣೆ ವೇಳೆ ಹಳೆ ರೌಡಿಶೀಟರ್‌ಗಳಿಗೆ ಹಾಗೂ ಈಚೆಗಿನ ಗಲಾಟೆಗಳಲ್ಲಿ ಭಾಗಿಯಾಗಿದ್ದವರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದು, ಯಾವುದೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

500 ಪ್ರಕರಣಗಳ ಪರಿಶೀಲನೆ: 
ಕಮೀಷನರ್ ಆರ್.ದಿಲೀಪ್, 2018-2019 ನಲ್ಲಿ ಈವರೆಗೆ ದೊಂಬಿ, ಕೊಲೆ, ಕೊಲೆ ಯತ್ನ, ಬಡ್ಡಿ ವ್ಯವಹಾರ ಸೇರಿ ನಡೆದ 500 ಕ್ಕೂ ಹೆಚ್ಚು ಪ್ರಕರಣಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿದ್ದೇವೆ. 100 ಪ್ರಕರಣಗಳಲ್ಲಿ ಚಾಕು ಚೂರಿ ಬಳಸಿದ್ದು ಕಂಡುಬಂದಿದೆ. ಇದರಲ್ಲಿ ಸಾಕಷ್ಟು ಕ್ಷುಲ್ಲಕ ಕಾರಣ ಸೇರಿದೆ. ಜನರ ರೌಡಿಶೀಟರ್‌ಗಳ ಪಟ್ಟಿ ಮಾಡಿ ಕೊಂಡಿದ್ದೇವೆ. ಹಳೆ ದ್ವೇಶ, ಹಿಂದೆ ಪ್ರಕರಣದಲ್ಲಿ ಪಾಲ್ಗೊಂಡ ಹಳೆ ರೌಡಿಗಳಿಗಿಂತ ಹೆಚ್ಚಾಗಿ ಸಾಕಷ್ಟು ಪ್ರಕರಣದಲ್ಲಿ ಯುವಕರೆ ಕಂಡುಬರುತ್ತಿದ್ದಾರೆ. ಇವರ ಚಲನವಲನದ ಮೇಲೆ ನಿಗಾ ಇಡಲು ಸೂಚಿಸಿದ್ದೇವೆ ಎಂದು ತಿಳಿಸಿದರು. 

ಬೈಕ್, ಕಾರು ಪರಿಶೀಲನೆ
ಕೇವಲ ಮನೆ ಮೇಲೆ ಮಾತ್ರವಲ್ಲದೆ ಬೈಕ್, ಕಾರುಗಳನ್ನು ಕೂಡ ಪರಿಶೀಲಿಸಿರುವ ಪೊಲೀಸರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದರು. ನಗರದ ಆಯಕಟ್ಟಿನ ಜಾಗದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೈಕ್‌ಗಳನ್ನು ಅಡ್ಡಗಟ್ಟಿ ಸೀಟ್ ಕೂಡ ತೆಗೆಸಿ ತಪಾಸಣೆ ನಡೆಸಿದ್ದಾರೆ. 

ಬಿಹಾರಕ್ಕಿಂದು ಪೊಲೀಸ್ ತಂಡ 
ಗೋಕುಲ ರಸ್ತೆಯ ಮಂಜುನಾಥ ನಗರದಲ್ಲಿ ಸೆ. 21 ರಂದು ನಡೆದಿದ್ದ ಬಿಹಾರಿ ಮೂಲದ ಪರ್ವೇಶ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರಕ್ಕೆ ಬುಧವಾರ ಮಹಾನಗರ ಪೊಲೀಸರು ತೆರಳಲಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತ ಎಚ್.ಕೆ. ಪಠಾಣ ನೇತೃತ್ವದ ತಂಡ ಬಿಹಾರಕ್ಕೆ ತೆರಳಲಿದ್ದು, ಅಲ್ಲಿನ ಸ್ಥಳೀಯ ಪೊಲೀಸರ ಸಹಕಾರದಲ್ಲಿ ತನಿಖೆ ಕೈಗೊಳ್ಳಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು, ಕಾರ್ಯಾಚರಣೆ ನಡೆಸಿ 100  ಆರೋಪಿ, ಶಂಕಾಸ್ಪದರನ್ನು ವಿಚಾರಣೆಗೆ ಒಳಪಡಿಸಿ ಎಚ್ಚರಿಕೆ ನೀಡಿದ್ದೇವೆ. ಕೆಲವೆಡೆ ಮಾರಕಾಸ್ತ್ರ ಸಿಕ್ಕಿದೆ. ಇವರ ಮೇಲೆ ನಿಗಾ ಇಡಲಾಗುವುದು. ನಿರಂತರವಾಗಿ ಈ ಕಾರ್ಯಾಚರಣೆಗಳು ನಡೆಯಲಿವೆ ಎಂದು ತಿಳಿಸಿದರು. 

Follow Us:
Download App:
  • android
  • ios