ಒಕ್ಕಲಿಗ ಸಮುದಾಯಕ್ಕೆ ಎಷ್ಟುಮೀಸಲಾತಿ ಕೊಡುತ್ತೀರಿ?

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ನಾಯಕರು ನೀವು ಅಧಿಕಾರಕ್ಕೆ ಬಂದರೆ ಒಕ್ಕಲಿಗ ಸಮುದಾಯಕ್ಕೆ ಎಷ್ಟುಮೀಸಲಾತಿ ಕೊಡುತ್ತೀರಿ ಎಂಬುದನ್ನು ಘೋಷಿಸಬೇಕು ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಸ್ವಾಮೀಜಿ ಆಗ್ರಹಿಸಿದರು.

How much reservation do you give to Okkaliga community  snr

 ಮೈಸೂರು :  ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ನಾಯಕರು ನೀವು ಅಧಿಕಾರಕ್ಕೆ ಬಂದರೆ ಒಕ್ಕಲಿಗ ಸಮುದಾಯಕ್ಕೆ ಎಷ್ಟುಮೀಸಲಾತಿ ಕೊಡುತ್ತೀರಿ ಎಂಬುದನ್ನು ಘೋಷಿಸಬೇಕು ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಸ್ವಾಮೀಜಿ ಆಗ್ರಹಿಸಿದರು.

ನಗರದ ನೇಗಿಲಯೋಗಿ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮೈಸೂರು ಜಿಲ್ಲಾ ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ, ನೇಮಕಾತಿ ಪತ್ರ ವಿತರಣೆ, ವಿವಿಧ ಕ್ಷೇತ್ರದ ಸಾಧಕರಿಗೆ ಡಾ. ಶ್ರೀ ಬಾಲಗಂಗಾಧರನಾಥಸ್ವಾಮಿ ಸೇವಾ ರತ್ನ ಪ್ರಶಸ್ತಿ ಪ್ರಧಾನ ಹಾಗೂ ಸಮುದಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮುದಾಯಕ್ಕೆ ಶೇ.17 ರಷ್ಟುಮೀಸಲಾತಿ ಬೇಕೆಂಬ ನಮ್ಮ ಆಪೇಕ್ಷೆಯಿತ್ತು. ಇಂತಹ ವೇಳೆ ಬಿಜೆಪಿ ಸರ್ಕಾರ ಹೊಸ ಮೀಸಲಾತಿಯನ್ನು ಮೌಖಿಕವಾಗಿ ಘೋಷಿಸಿ ಹೆಚ್ಚಿನ ಮೀಸಲಾತಿ ಕಲ್ಪಿಸುವ ಪ್ರಯತ್ನ ನಡೆಸಿತು. ಇಂದು ಮೀಸಲಾತಿ ಹೆಚ್ಚು ಪ್ರಾತಿನಿದ್ಯ ಪಡೆದುಕೊಂಡಿದ್ದು, ಸದ್ಯ ಇರುವ ಮೀಸಲಾತಿಯಲ್ಲಿ ಇತರೆ ಸಮುದಾಯವೂ ಇರುವುದರಿಂದ ಸಮುದಾಯ ಸಾಕಷ್ಟುಅವಕಾಶಗಳಿಂದ ವಂಚಿತರಾಗಿ ವೇದನೆ ಪಡುತ್ತಿದ್ದಾರೆ ಎಂದು ಅವರು ಬೇಸರಿಸಿದರು.

ಜಾತಿ ರಹಿತ ಹಾಗೂ ಧರ್ಮ ರಹಿತವಾಗಿರುವ ಸಮುದಾಯ ಒಕ್ಕಲಿಗ ಸಮುದಾಯವಾಗಿದೆ. ಅಂತಹ ಸಮುದಾಯ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಎಷ್ಟುಸಹಿಸಿಕೊಳ್ಳೂವುದು. ಸದ್ಯ ಸರ್ಕಾರ ಅರೆ ಕಾಲಿಕ ವರದಿಯಲ್ಲಿ ಶೇ.7.5 ಕೊಡುವುದಾಗಿ ಹೇಳಿದ್ದಾರೆ. ಇಂತಹ ವೇಳೆ ಚುನಾವಣೆ ಎದುರಾಗಿದ್ದು, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ನೀವು ಅಧಿಕಾರಕ್ಕೆ ಬಂದರೆ ಸಮುದಾಯಕ್ಕೆ ಎಷ್ಟುಮೀಸಲಾತಿ ಕೊಡುತ್ತೀರಿ ಎಂಬುದನ್ನು ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.

ಚುನಾವಣೆ ವೇಳೆ ಸಮುದಾಯವನ್ನು ಟ್ರಮ್‌ ಕಾರ್ಡ್‌ ರೀತಿ ಬಳಸಿಕೊಳ್ಳಲು ಆಗುವುದಿಲ್ಲ. ಏಕೆಂದರೆ ಸಮುದಾಯ ಈಗ ಜಾಗೃತವಾಗಿದೆ. ಹೀಗಾಗಿ ಶೀಘ್ರ ಸಮುದಾಯ ಮೀಸಲಾತಿ ಘೋಷಣೆ ಮಾಡಿ.

ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ವೈದ್ಯ ಡಾ. ಅಂಜನಪ್ಪ, ಎಸಿಪಿ ಶಾಂತಮಲ್ಲಪ್ಪ, ಪ್ರಾಧ್ಯಾಪಕ ಡಾ.ಬಿ.ಎನ್‌. ರವೀಶ್‌, ವೈದ್ಯ ಸಾಹಿತಿ ಡಾ.ಸಿ.ಪಿ. ಯೋಗಣ್ಣ, ಲಯನ್‌ ಕ್ಲಬ್‌ ಅಧ್ಯಕ್ಷೆ ಪ್ರತಿಮಾ ಕೃಷ್ಣ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್‌, ಎಂಜಿನಿಯರ್‌ ಎಂ.ಸಿ. ನಾಗೇಶ್‌ಮೂರ್ತಿ, ಬಿಲ್ಡರ್‌ ರವಿಕುಮಾರ್‌, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಅವರಿಗೆ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

55 ಮಂದಿ ಪದಾಧಿಕಾರಿಗಳಿಗೆ ವಿಧಾನಪರಿಷತ್ತು ಸದಸ್ಯ ಸಿ.ಎನ್‌. ಮಂಜೇಗೌಡ ನೇಮಕಾತಿ ಪತ್ರ ವಿತರಿಸಿದರು. ಕಾಂಗ್ರೆಸ್‌ ಮುಖಂಡ ಕೆ. ಹರೀಶ್‌ಗೌಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು. ಶಾಸಕ ಎಲ್‌. ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಸಿ.ಜಿ. ಗಂಗಾಧರ್‌, ಉಪಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಕಾರ್ಯಾಧ್ಯಕ್ಷ ಭರತ್‌ ಎಂ. ಮಂಜೇಗೌಡ, ಜಿಲ್ಲಾಧ್ಯಕ್ಷ ತೇಜೇಶ್‌ ಲೋಕೇಶ್‌ ಗೌಡ, ಪದಾಧಿಕಾರಿಗಳಾದ ವಿಜಯನಗರ ಮಂಜು, ಸುಮಿತ್ರಾ ರಮೇಶ್‌, ಗಣೇಶ್‌ ಗೌಡ, ಗಿರೀಶ್‌ ಗೌಡ, ಹನುಮಂತಯ್ಯ, ಸುಬ್ಬೇಗೌಡ, ಕೋಟೆ ವೆಂಕಟೇಶ್‌, ಭುಜಂಗ, ನಳಿನಿ ಮೊದಲಾದವರು ಇದ್ದರು.

-- ಪೆನ್‌ ಹಿಡಿಯುವುದು ನಾವೇ!--

ಪೆನ್‌ ಹಿಡಿಯಲು ಮೂರು ಪಕ್ಷದಲ್ಲೂ ನಮ್ಮ ಸಮುದಾಯದ ರಾಜಕಾರಣಿಗಳು ಉತ್ಸುಕರಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪೆನ್‌ ಹಿಡಿಯುವುದು ನಮ್ಮ ಸಮುದಾಯವರೇ ಆಗಿರುತ್ತಾರೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಸ್ವಾಮೀಜಿ ಅವರು ಪರೋಕ್ಷವಾಗಿ ಸಿಎಂ ಸ್ಥಾನ ತಮ್ಮ ಸಮುದಾಯಕ್ಕೆ ಎಂಬುದನ್ನು ಸೂಚ್ಯವಾಗಿ ಹೇಳಿದರು.

-- ಸಮುದಾಯಕ್ಕೆ ಶ್ರೇಯಸ್ಸು ತರಬೇಕು--

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ರಾಜ್ಯದ ಒಟ್ಟು ಆದಾಯವನ್ನು ಲೆಕ್ಕ ಹಾಕಿದರೆ ಶೇ.57 ರಷ್ಟುಆದಾಯ ಬೆಂಗಳೂರು ಒಂದರಿಂದಲೇ ಬರುತ್ತಿದೆ. 400 ವರ್ಷದ ಹಿಂದೆ ಇಂತಹದೊಂದು ನಗರದ ನಿರ್ಮಿಸಿ ಪ್ರತಿಯೊಬ್ಬರಿಗೂ ಜಾಗ ಮಾಡಿಕೊಟ್ಟಕೆಂಪೇಗೌಡರು ನಮ್ಮ ಸಮುದಾಯದವರು ಎಂಬುದೇ ಹೆಮ್ಮೆ. ವಿಧಾನಸೌಧ ನಿರ್ಮಿಸಿ ಕೆಂಗಲ್‌ ಹನುಮಂತಯ್ಯ, ವಿಕಾಸಸೌಧ ಹಾಗೂ ಮೈಸೂರು- ಬೆಂಗಳೂರು ನಾಲ್ಕು ಪಥದ ರಸ್ತೆ ನಿರ್ಮಿಸಿದ ಶ್ರೇಯಸ್ಸು ಎಸ್‌.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.

ಹಾಗೆಯೇ, ರಾಜ್ಯದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಯಾರಾದರೂ ಆಲೋಚನೆ ಮಾಡಿ ಅದನ್ನು ಜಾರಿ ಮಾಡಿದ್ದಾರೆ ಅದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮಾತ್ರ. ಹೀಗೆ ಎಲ್ಲಾ ಸಮಾಜದ ಸೇವೆ ಮಾಡುವ ಮೂಲಕ ಸಮುದಾಯಕ್ಕೆ ಶ್ರೇಯಸ್ಸು ತರಬೇಕು. ದೇವೇಗೌಡರು ಎಲ್ಲಾ ಸಮುದಾಯದವರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ನಮ್ಮ ಸಮುದಾಯದ ನಾಯಕರು ಉಳಿದ ಸಮಾಜವೂ ಗೌರವ ಕೊಡುವ ರೀತಿಯಲ್ಲಿ ಬೆಳೆಯಬೇಕೆಂಬ ಕಲ್ಪನೆ ಹಾಕಿಕೊಟ್ಟಿದ್ದು, ಅದರಂತೆ ನಾವೆಲ್ಲರೂ ಸಾಗೋಣ ಎಂದು ಅವರು ತಿಳಿಸಿದರು.

Latest Videos
Follow Us:
Download App:
  • android
  • ios