ಬೆಂಗಳೂರು(ಫೆ.27): ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ನೆಪದಲ್ಲಿ ಮಹದೇವಪುರ ವಲಯದ ಮಾರತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಡುಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ, ಬೆಳ್ಳಂದೂರು, ತೂಬರಹಳ್ಳಿ ಹಾಗೂ ಕುಂದಲಹಳ್ಳಿಯಲ್ಲಿ ಒಕ್ಕಲೆಬ್ಬಿಸಿರುವ ನೂರಾರು ನಿರಾಶ್ರಿತ ವಲಸೆ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಈ ಕುರಿತು ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟಿಸ್‌ (ಪಿಯುಸಿಎಲ್‌) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಬುಧವಾರ ಈ ಮಾಹಿತಿ ನೀಡಿತು.

ಮದರಂಗಿ ಶಾಸ್ತ್ರ ಮುಗಿಸಿ ಮಲಗಿದ್ದ ವಧು ಮದುವೆ ದಿನ ನಾಪತ್ತೆ

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ನಿರಾಶ್ರಿತರ ಪುನರ್ವಸತಿಗೆ ಯೋಜನೆಯನ್ನು ರೂಪಿಸಲಾಗುತ್ತಿದೆ. ಯೋಜನೆ ಅಂತಿಮಗೊಳಿಸಲು ಒಂದು ವಾರ ಕಾಲಾವಕಾಶಬೇಕು ಎಂದು ಕೋರಿದರು.

ಅದನ್ನು ಮಾನ್ಯ ಮಾಡಿದ ನ್ಯಾಯಪೀಠ, ಇದೇ ಕಡೆಯ ಅವಕಾಶವಾಗಿದ್ದು ಮತ್ತೆ ಕಾಲಾವಕಾಶ ನೀಡುವುದಿಲ್ಲ. ಮುಂದಿನ ವಿಚಾರಣೆ ವೇಳೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ನೀಡುವ ಯೋಜನೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿತು.