ಚಿತ್ರದುರ್ಗ (ಡಿ.16):  ಭವಿಷ್ಯದಲ್ಲಿ ಚಿತ್ರದುರ್ಗ ನಗರಸಭೆ ಪಾಲಿಕೆ ಆಗುವಷ್ಟುವೇಗವಾಗಿ ಬೆಳೆಯುತ್ತಿರುವುರಿಂದ 2 ಕೋಟಿ ರುಪಾಯಿ ವೆಚ್ಚದಲ್ಲಿ ಕೌನ್ಸಿಲ್‌ ಮೀಟಿಂಗ್‌ ಸಭಾಂಗಣವನ್ನು ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿದರು.

ನಗರಸಭೆ 2ನೇ ಅಂತಸ್ತಿನಲ್ಲಿ ಮಂಗಳವಾರ ಕೌನ್ಸಿಲ್‌ ಮೀಟಿಂಗ್‌ ಸಭಾಂಗಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿನ ನಗರಸಭೆ ಕೌನ್ಸಿಲ್‌ ಮೀಟಿಂಗ್‌ಗೆ ಗುಣಮಟ್ಟದ ಹಾಲ್‌ ಇರಲಿಲ್ಲ. ಜಾಗವಿದ್ದರೂ ಕಾರಣಾಂತರಗಳಿಂದ ನಿರ್ಮಾಣ ತಡವಾಗಿದೆ. ಹೀಗಾಗಿ ವಿಧಾನಸಭೆ, ವಿಧಾನಪರಿಷತ್‌ ರೀತಿಯಲ್ಲಿ ಸುಸಜ್ಜಿತ ಪೀಠೋಪಕರಣ ಅಳವಡಿಸಿ ಗುಣಮಟ್ಟದ ಮೀಟಿಂಗ್‌ ಹಾಲ್‌ ನಿರ್ಮಿಸಲಾಗುವುದು. ಹಣದ ಕೊರತೆಯಾದರೆ ಶಾಸಕರ ಅನುದಾನದಲ್ಲಿ ನೀಡಲಾಗುವುದು. ಕೌನ್ಸಿಲ್‌ ಸಭೆ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಇದು ಅತ್ಯಂತ ಉಪಯುಕ್ತವಾಗಲಿದೆ ಎಂದರು.

ಮನೆ ನಿರ್ವಹಣೆಗೊಂದು ಜಾಣ ಬಜೆಟ್‌..! ಈ ಟ್ರಿಕ್ಸ್ ಟ್ರೈ ಮಾಡಿ ..

ಪ್ರತಿವರ್ಷವೂ ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಇದಕ್ಕೆ ಹಳ್ಳಿಯಿಂದ ನಗರಕ್ಕೆ ಬಂದು ವಾಸಿಸುವವರು ಜಾಸ್ತಿಯಾಗುತ್ತಿದ್ದಾರೆ. ಹಾಗಾಗಿ, ವಸತಿ ಸಮಸ್ಯೆಯೂ ಉಲ್ಬಣಿಸುತ್ತಿದೆ. ಏಳೆಂಟು ವರ್ಷದ ಕೆಳಗೆ ಎಂಟು ಸಾವಿರ ಮನೆಗಳನ್ನು ಬಡವರಿಗೆ ನೀಡಲಾಗಿದೆ. ಇದೀಗ 14500 ಅರ್ಜಿಗಳು ಆಶ್ರಯ ಸಮಿತಿಗೆ ಬಂದಿದೆ. ಇದರಲ್ಲಿ ಸುಮರು 7-8 ಸಾವಿರ ಅರ್ಜಿಗಳು ನಕಲಿ ಇವೆ ಎನ್ನುವುದು ನಗರಸಭೆ ಸರ್ವೆ ಮಾಡಿದಾಗ ಗೊತ್ತಾಗಿದೆ. ಮನೆಯಿಲ್ಲದ 6 ಸಾವಿರ ಬಡವರನ್ನು ಗುರುತಿಸಲಾಗಿದೆ. ಮೆದೇಹಳ್ಳಿ ಬಳಿ ಜಿಪ್ಲಸ್‌2 ಮನೆ ಕಟ್ಟಲು ಟೆಂಡರ್‌ ಕರೆಯಲಾಗಿದೆ. ಪಾರ್ಕಿಂಗ್‌ ವ್ಯವಸ್ಥೆಯೊಂದಿಗೆ 1 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಲಾಗುವುದು. ರೋಸ್ಟ್‌ರ್‌ ಪ್ರಕಾರ ಎಲ್ಲ ಜಾತಿಯ ಬಡವರಿಗೂ ಮನೆಗಳನ್ನು ಕಟ್ಟಿಕೊಡಲಾಗುವುದು ಎಂದು ಹೇಳಿದರು.

ತಾಲೂಕಿನ ಮದಕರಿಪುರ ಗ್ರಾಪಂನಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು 8 ಎಕರೆ ಭೂಮಿ ಮಂಜೂರು ಮಾಡಿಸಲಾಗಿದೆ. ಇನ್ನು ಐದಾರು ಸಾವಿರ ಬಡವರಿಗೆ ಮನೆಗಳು ಬೇಕಾಗಿದೆ. ನಗರದ ಸುತ್ತಮುತ್ತ ಎಲ್ಲಿಯೂ ಜಮೀನು ಸಿಗುತ್ತಿಲ್ಲ. ನಗರದಲ್ಲಿ 38 ಘೋಷಿತ ಕೊಳಗೇರಿಗಳಿದ್ದು, ಕೇಂದ್ರದಿಂದ 1480 ಮನೆಗಳು ಮಂಜೂರಾಗಿದೆ. ರಾಜ್ಯದಲ್ಲಿ 90 ಸಾವಿರ ಮನೆಗಳಿಗೆ ಟೆಂಡರ್‌ ಕರೆಯಲಾಗಿದೆ. ಇದಕ್ಕೆ ಖಾತೆ ಇರಬೇಕೆಂದೇನೂ ಇಲ್ಲ. ಸ್ಲಂನಲ್ಲಿ ವಾಸಿವಿದ್ದರೆ ಸಾಕು. ಅಂತಹವರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದು ಹೇಳಿದರು.

2030ರ ವೇಳೆಗೆ ಹಳ್ಳಿಗಾಡಿನ ಶೇ.50ರಷ್ಟುಮಂದಿ ನಗರಕ್ಕೆ ಆಗಮಿಸುವುದರಿಂದ ವಸತಿ ಸಮಸ್ಯೆ ಜಾಸ್ತಿಯಾಗಲಿದೆ. ಸದ್ಯಕ್ಕೆ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸುಗಮವಾಗಿದೆ. ಮೀಟರ್‌ ಅಳವಡಿಸಿ ಪೈಪ್‌ಲೈನ್‌ ಹಾಕಲಾಗುವುದು. ಅದರಂತೆ ಮನೆ ಮನೆಗೆ ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ಸಂಪರ್ಕ ಒದಗಿಸಲಾಗುವುದು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌, ಉಪಾಧ್ಯಕ್ಷೆ ಶ್ವೇತಾ ವೀರೇಶ್‌, ಸದಸ್ಯರಾದ ಪಿ.ಕೆ.ಮೀನಾಕ್ಷಿ, ಅನುರಾಧ ರವಿಶಂಕರ್‌, ಹರೀಶ್‌, ಜೆ.ಶಶಿಧರ್‌, ಡಿ.ಮಲ್ಲಿಕಾರ್ಜುನ್‌, ಗರಡಿ ಪ್ರಕಾಶ್‌, ನಗರಸಭೆ ಪೌರಾಯುಕ್ತ ಹನುಮಂತರಾಜು ಉಪಸ್ಥಿತರಿದ್ದರು.