Tumakuru Rain : ಮಳೆಗೆ ಕುಸಿದ ಮನೆ ಗೋಡೆ, ಮುರಿದ ವಿದ್ಯುತ್ ಕಂಬ
ತುಮಕೂರು ಜಿಲ್ಲೆಯಾದ್ಯಂತ ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೂ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದು, ವಿದ್ಯುತ್ ಕಂಬಗಳು ಮುರಿದು, ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ತುರುವೇಕೆರೆ (ಸೆ.6) : ತಾಲೂಕಿನಾದ್ಯಂತ ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೂ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದು, ವಿದ್ಯುತ್ ಕಂಬಗಳು ಮುರಿದು, ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆಗೆ ಕಸಬಾ ಹೋಬಳಿಯ ಬೊಮ್ಮೇನಹಳ್ಳಿ, ಬಿಗಿನೇಹಳ್ಳಿ, ಅರೇಮಲ್ಲೇನಹಳ್ಳಿ ಗ್ರಾಮದ ಕೆಲ ತಗ್ಗಿನ ಮನೆಗಳಿಗೆ ಮಳೆ ನೀರು ನುಗ್ಗಿ ಮಲಗಲೂ ಜಾಗವಿಲ್ಲದಂತಾಗಿ ಮನೆಯ ವಸ್ತುಗಳೆಲ್ಲಾ ಹಾಳಾಗಿವೆಂದು ಜನರು ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು. ತಾಲೂಕಿನ ದಬ್ಬೇಘಟ್ಟ, ಮಾಯಸಂದ್ರ, ಕಸಬಾ, ಮಾಯಸಂದ್ರಗಳಲ್ಲಿ ಒಟ್ಟು 25 ವಾಸದ ಮನೆಗಳ ಗೋಡೆ ಕುಸಿದು ನಿವಾಸಿಗಳು ಪರದಾಡುವಂತಾಗಿದೆ.
Tumkakuru Rain: ಹುಚ್ಚಾಟ ಮಾಡಿ ಬೈಕ್ ಸಮೇತ ಕೊಚ್ಚಿ ಹೋದ ಸವಾರ
ತುರುವೇಕೆರೆ ಅಮಾನಿಕೆರೆ ಅಮೃತ್ ಕಾವಲ್‌ನ ಗದ್ದೆ ಬಯಲಿನಲ್ಲಿ ಶ್ರೀರಾಂಪುರದ ರೈತರಾದ ನಂಜಪ್ಪ ಮತ್ತು ಗಿರಿಯಪ್ಪಗೆ ಸೇರಿದ ತಲಾ ಅರ್ಧ ಎಕರೆ ಕಟಾವಿಗೆ ಬಂದಿದ್ದ ಭತ್ತ ನೀರಿನಿಂದ ಆವೃತವಾಗಿರುವ ಹಿನ್ನೆಲೆಯಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ಹಾಳಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ತಿಳಿಸಿದ್ದಾರೆ. ಕಡೆಹಳ್ಳಿ ಮತ್ತು ದಂಡಿನಶಿವರ ಹೋಬಳಿಯಲ್ಲಿ ಮಳೆಗೆ ಮೂರು ವಿದ್ಯುತ್ ಕಂಬಗಳು ನೆಲಕಚ್ಚಿವೆ.
ವಿಶ್ವನಾಥ ಪುರ ಮಾಳೆಗೇಟ್ ಮತ್ತು ಬೆಳ್ಳಿ ಪೆಟ್ರೋಲ್ ಬಂಕ್ ಮಧ್ಯೆಯ ಶ್ರೀರಂಗಪಟ್ಟಣ-ಬೀದರ್ 150ಎ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಅದೇ ರೀತಿ ಕೊಂಡಜ್ಜಿ ಕ್ರಾಸ್- ಸೊಪ್ಪನಹಳ್ಳಿ ಮಧ್ಯೆ ಹಳ್ಳ, ಸಾರಿಗೇಹಳ್ಳಿ ರಸ್ತೆ, ಮಲ್ಲಾಘಟ್ಟ, ಅರಳೀಕೆರೆ-ಮಾದಿಹಳ್ಳಿ ಮಧ್ಯದ ಹಳ್ಳ ರಸ್ತೆ ಮೇಲೆ ಹರಿದು ವಾಹನ ಸವಾರರು ಪರದಾಡುವಂತೆ ಮಾಡಿದೆ. ತುರುವೇಕೆರೆ ಕೆರೆ ಮೈದುಂಬಿ ಹರಿಯುತ್ತಿದೆ. ಹಾನಿಯಾದ ಸ್ಥಳಕ್ಕೆ ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಇಒ ಸತೀಶ್, ಗ್ರಾಮಲೆಕ್ಕಾಧಿಕಾರಿ ರಮೇಶ್, ಬೆಸ್ಕಾಂ ಶಾಖಾಧಿಕಾರಿ ಎಂ.ಎಲ್.ಉಮೇಶ್ವರಯ್ಯ, ಸೋಮಶೇಖರ್, ಕೃಷಿ ಅಧಿಕಾರಿ ನರಸಿಂಹರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಡಿನಶಿವರ 120.2, ದಬ್ಬೇಘಟ್ಟ30.9, ತುರುವೇಕೆರೆ 76, ಸಂಪಿಗೆ 34, ಮಾಯಸಂದ್ರ 108, ಮಿ.ಮೀಟರ್ ಮಳೆ ದಾಖಲಾಗಿದೆ.
ಮಳೆ ಹಾನಿ ಕಾಮಗಾರಿಗೆ ತುರ್ತು ಅನುದಾನ: ಸಚಿವ ಗೋವಿಂದ ಕಾರಜೋಳ
ಜಲಾವೃತವಾದ ಬೆಳೆ: ಶಿಂಷಾ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಅಕ್ಕಪಕ್ಕದ ಜಮೀನು, ತೋಟ ಸಾಲುಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಆವರಿಸಿಕೊಂಡು ತೋಟಗಳಲ್ಲಿನ ತೆಂಗಿನ ಕಾಯಿ ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ ಮತ್ತು ತೋಟದ ಸಾಲುಗಳಲ್ಲಿ ಹಾಕಿದ್ದ ಮೇವು ಸಹ ಹಾಳಾಗಿದೆ. ಹೊಸದಾಗಿ ಕಟ್ಟಿದ್ದ ತೆಂಗು, ಅಡಕೆ, ಬಾಳೆಗಿಡಗಳು ನೀರು ನಿಂತು ಕೊಳೆಯುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಗೊಟ್ಟಿಕೆರೆ ಕೆರೆ ಮೂವತ್ತು ವರ್ಷಗಳ ನಂತರ ತುಂಬಿ ಹರಿಯುತ್ತಿದ್ದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.