ಸಿದ್ದಯ್ಯ ಹಿರೇಮಠ 

ಕಾಗವಾಡ(ಏ.17): ಕೊರೋನಾ ವೈರಸ್‌ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಜಾರಿಗೆ ತಂದ ಪರಿಣಾಮ, ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಯಿತು. ಪರಿಣಾಮ ನಿತ್ಯ ಮದ್ಯ ಸೇವನೆ ಮಾಡುತ್ತಿದ್ದ ಹಲವಾರು ಜನರು ಮದ್ಯ ಸಿಗದೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಆದರೆ, ಇದಕ್ಕೆ ಅಪವಾದ ಎಂಬಂತೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದ, ಹೌದೋ ಹುಲಿಯಾ ಖ್ಯಾತಿಯ ಪೀರಪ್ಪ ಕಟ್ಟಿಮನಿ ಮಾತ್ರ ಕುಡಿತ ಬಿಟ್ಟು ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಮಾತ್ರವಲ್ಲ, ಈಗ ತನ್ನ ಪತ್ನಿಯೊಂದಿಗೆ ನಿತ್ಯ ಹೊಲಕ್ಕೆ ದುಡಿಯಲು ಹೋಗುತ್ತಿದ್ದಾನೆ. ಬಂದ ಹಣದಲ್ಲಿ ಕುಟುಂಬವನ್ನು ಸಲಹುತ್ತಿದ್ದಾನೆ. ಈ ಮೂಲಕ ದೃಢ ನಿಶ್ಚಯವೊಂದಿದ್ದರೆ ಎಂತಹ ಮನುಷ್ಯ ಕೂಡ ಪರಿವರ್ತನೆ ಆಗಬಲ್ಲ ಎಂಬುವುದಕ್ಕೆ ಪೀರಪ್ಪ ಈಗ ಸಾಕ್ಷಿಯಾಗಿ ನಿಲ್ಲುತ್ತಾನೆ.

ಇವರೇ ಕಣ್ರೋ 'ಹೌದೋ ಹುಲಿಯಾ' ದ ಅಸಲಿ ಮಾಲೀಕ!

ಹೌದೋ ಹುಲಿಯಾ ಎಂದಿದ್ದೆ ಟ್ರೋಲ್‌ ಆಯ್ತು:

2019ರಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಗವಾಡ ಕ್ಷೇತ್ರವೂ ಒಂದಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಉಗಾರದಲ್ಲಿ ಬಹಿರಂಗ ಪ್ರಚಾರದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸಿದ್ದರಾಮಯ್ಯನವರ ಮಾತಿಗೆ ವೇದಿಗೆ ಮುಂಭಾಗದಲ್ಲಿಯೇ ಕುಳಿತಿದ್ದ ಪೀರಪ್ಪ ಕಟ್ಟಿಮನಿ ಹೌದೋ ಹುಲಿಯಾ ಎಂದು ಕೂಗಿದ. ಇದಕ್ಕೆ ಸಿದ್ದರಾಮಯ್ಯ ಕೂಡ ಸಿಟ್ಟಿಗೆದ್ದಿದ್ದರು. ನಂತರ ಅಲ್ಲಿಂದ ಹೌದೋ ಹುಲಿಯಾ ಎಂಬುದು ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಟ್ರೋಲ್‌ ಆಗಿತ್ತು. ಅಂದಿನಿಂದ ಪೀರಪ್ಪ ಹೌದೋ ಹುಲಿಯಾ ಖ್ಯಾತಿಗೆ ಒಳಗಾಗಿದ್ದ.

ಪೀರಪ್ಪ (ಬಾವನಕೋಟಿ) ಕಟ್ಟಿಮನಿ ಪ್ರತಿನಿತ್ಯ ಮದ್ಯ ಸೇವಿಸುತ್ತಿದ್ದ. ದುಡಿದು ಬಂದ ಹಣ ಅಲ್ಲದೆ ತನ್ನ ಹೆಂಡತಿ ಕಡೆಯಿಂದಲೂ ಹಣ ಪಡೆಯುತ್ತಿದ್ದ. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಸರ್ಕಾರ ಬಂದ್‌ ಮಾಡಿತು. ಇದರಿಂದ ಪೀರಪ್ಪ ಹಾಗೂ ಆತನ ಹೆಂಡತಿ ತೆಂಗವ್ವ ಪ್ರತಿನಿತ್ಯ ರೈತರ ಹೊಲದಲ್ಲಿ ಕೂಲಿ ಕೆಲಸ ಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಬಿಡಿಗಾಸೂ ಮನೆಗೆ ಕೊಡ್ತಿರಲಿಲ್ಲ:

ಪ್ರತಿದಿನ ನನ್ನ ಗಂಡ ಮದ್ಯ ಸೇವನೆ ಮಾಡುತ್ತಿದ್ದ. ಇದರಿಂದ ನನ್ನ ಬದುಕು ದುಸ್ತರವಾಗಿತ್ತು. ನಮಗೆ ಸ್ವಂತ ಮನೆಯಿಲ್ಲ. ದುಡಿದರೆ ಮಾತ್ರ ಜೀವನ ನಡೆಯುತ್ತದೆ. ಆದರೆ ನನ್ನ ಗಂಡ ಎಂದೂ ಬಿಡಿಗಾಸು ಮನೆಗೆ ಕೊಡುತ್ತಿರಲಿಲ್ಲ. ಅಷ್ಟೇ ಅಲ್ಲ ನಾನು ದುಡಿದು ತಂದ ಹಣವನ್ನೂ ಕಸಿದುಕೊಂಡು ಕುಡಿದು ಜಗಳವಾಡುತ್ತಿದ್ದ. ಈಗ ಮದ್ಯ ಬಂದ್‌ ಆದಾಗಿನಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ಎಂದು ಪೀರಪ್ಪನ ಪತ್ನಿ ತಂಗೆವ್ವ ಕಟ್ಟಿಮನಿ ಕನ್ನಡಪ್ರಭದೊಂದಿಗೆ ತನ್ನ ಮನದಾಳನ್ನು ಹಂಚಿಕೊಂಡಿದ್ದಾಳೆ.

ಚುನಾವಣೆಯ ಸಂದರ್ಭದಲ್ಲಿ ಟಿವಿ ಹಾಗೂ ಪೇಪರ್‌ನವರು ಹೌದು ಹುಲಿಯಾ ಎಂದು ಹೇಳಿ ಭಾರಿ ಫೇಮಸ್‌ ಮಾಡಿದರು. ಗ್ರಾಮದ ಸಿಕಂದರ ನದಾಫ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಮನೆಗೆ ಕರೆದುಕೊಂಡು ಹೋಗಿ ಬಂದರು. ಅದರಿಂದ ನನ್ನ ಗಂಡನಿಗೆ ಹೋದ ಬಂದಲ್ಲೆಲ್ಲ ಹೌದು ಹುಲಿಯಾ ಅಂತಾ ಜನ .50, .100 ಕೊಡುತ್ತಿದ್ದರು. ಆಗ ಗಂಡನ ಮದ್ಯ ಸೇವನೆ ಮತ್ತಷ್ಟುಹೆಚ್ಚಾಯ್ತು. ಇದರಿಂದ ಆರೋಗ್ಯ ಹಾಳು ಮಾಡಿಕೊಂಡಿದ್ದ. ನಾನು ಸಾಲ ಮಾಡಿ ಚಿಕಿತ್ಸೆ ಕೊಡಿಸಿದೆ.

ಭಾರೀ ವೈರಲ್ ಆಯ್ತು 'ಹೌದು ಹುಲಿಯಾ' ಡೈಲಾಗ್

ಈಗ ಮದ್ಯ ಮಾರಾಟ ಬಂದ್‌ ಆದಾಗಿನಿಂದ ನನ್ನ ಗಂಡನ ಪ್ರಕೃತಿ ಚೆನ್ನಾಗಿದೆ. ಇಬ್ಬರೂ ನಿತ್ಯ ಕೂಲಿ ಕೆಲಸಕ್ಕೆ ಹೋಗಿ, ಅದರಿಂದ ಬಂದ ಹಣದಿಂದ ನೆಮ್ಮದಿ ಜೀವನ ಸಾಗಿಸುತ್ತಿದ್ದೇವೆ. ಲಾಕ್‌ಡೌನ್‌ದಿಂದ ನಮ್ಮಂತಹ ಅದೆಷ್ಟೋ ಕುಟುಂಬಗಳು ಸಂತೋಷದಿಂದ ಹೆಂಡತಿ, ಮಕ್ಕಳ ಜೊತೆ ಖುಷಿಖುಷಿಯಾಗಿವೆ ಎನ್ನುವುದಕ್ಕೆ ನನ್ನದೆ ಉದಾಹರಣೆ ಸಾಕು. ಅದಕ್ಕಾಗಿ ಸರ್ಕಾರ ಈ ರಾಜ್ಯವನ್ನು ಮದ್ಯವ್ಯಸನಮುಕ್ತ ಮಾಡಲಿ ಎನ್ನುತ್ತಾಳೆ ಹೌದೋ ಹುಲಿಯಾನ ಹೆಂಡತಿ ತಂಗೆವ್ವ.

ಹಲವಾರು ವರ್ಷಗಳಿಂದ ನನ್ನ ಹೆಂಡತಿ, ಮಕ್ಕಳು, ಓಣಿಯವರು, ಸಂಬಂಧಿಕರು ಬುದ್ಧಿವಾದ ಹೇಳಿದ್ದರೂ ನಾನು ಮದ್ಯ ಸೇವಿಸುವುದನ್ನು ಬಿಟ್ಟಿರಲಿಲ್ಲ. ನನಗೆ ಮದ್ಯ ಬಿಡುವ ಮದ್ದು ಕೊಟ್ಟರೂ ಬಿಟ್ಟಿರಲಿಲ್ಲ. ಯಾವಾಗಲು ಮದ್ಯಕ್ಕಾಗಿ ಹಪಹಪಿಸುತ್ತಿದ್ದೆ. ನಾನು ನಶೆಯ ಗುಂಗಿನಲ್ಲಿಯೇ ಇರುತ್ತಿದ್ದೆ. ಈಗ ಕೊರೋನಾದಿಂದ ಮದ್ಯದಂಗಡಿಗಳು ಬಂದ್‌ ಆಗಿವೆ. ಆವಾಗಿನಿಂದ ನನ್ನ ಆರೋಗ್ಯ ಸುಧಾರಣೆಯಾಗಿದೆ. ಈಗ ನಾನು, ನನ್ನ ಹೆಂಡತಿ ಇಬ್ಬರೂ ದುಡಿಯುತ್ತಿದ್ದೇವೆ. ಹೊಟ್ಟೆ ತುಂಬ ಊಟ ಮಾಡಿ ಕಣ್ತುಂಬಾ ನಿದ್ದೆ ಮಾಡುತ್ತಿದ್ದೇವೆ. ಇನ್ನಷ್ಟುದಿನ ಮದ್ಯ ಬಂದ್‌ ಆದರೆ ನನ್ನ ಹಾಗೆ ಸಾವಿರಾರು ಜನ ಸಾರಾಯಿ ಬಿಡಬಹುದು ಎಂದು ಐನಾಪುರ ಗ್ರಾಮದ ಪೀರಪ್ಪ ಕಟ್ಟಿಮನಿ ಹೇಳಿದ್ದಾರೆ.