ಹೊಸಕೋಟೆ (ಸೆ.28):  ಕಳೆದ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಬಡವರ ಹಸಿವು ನೀಗಿಸಲು ಅನ್ನಭಾಗ್ಯದ ಯೋಜನೆ ಜಾರಿಗೆ ತಂದಿದ್ದು, ನ್ಯಾಯಬೆಲೆ ಅಂಗಡಿಯವರು ವಿತರಣೆಗೆ ಕನ್ನ ಹಾಕುತ್ತಿದ್ದಾರೆ ಎಂದು ಚೀಂಮಂಡಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಚೀಮಂಡಹಳ್ಳಿ ಗ್ರಾಮದ ಪಡಿತರ ವಿತರಣೆ ಕೇಂದ್ರದಲ್ಲಿ ವಿತರಕರು ಪಡಿತರ ಚೀಟಿದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸರ್ಕಾರ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಸರ್ಕಾರ ವಿತರಣೆ ಮಾಡುತ್ತಿದೆ. ಆದರೆ ವಿತರಣೆದಾರರು ಕೇವಲ 8 ಕೆ.ಜಿ. ನೀಡುವ ಮೂಲಕ 2 ಕೆ.ಜಿ. ಅಕ್ಕಿಗೆ ಕನ್ನ ಹಾಕುತ್ತಿದ್ದಾರೆ. ಅಲ್ಲದೆ ಪ್ರತಿ ಪಡಿತರ ಚೀಟಿಗೆ 10 ರು. ಅಕ್ರಮವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತಾಪಂ ಸದಸ್ಯ ಚೀಮಂಡಹಳ್ಳಿ ರಾಜೇಂದ್ರ ಮಾತನಾಡಿ, ಪಡಿತರ ಅಂಗಡಿ ಪ್ರಭಾವಿ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕದೆ, ಸರ್ಕಾರದಿಂದ ಬರುವಷ್ಟುಅಕ್ಕಿಯನ್ನು ಕಡಿತಗೊಳಿಸದೆ ಸಮರ್ಪಕವಾಗಿ ವಿತರಣೆ ಮಾಡುವಂತೆ ಎಚ್ಚರಿಕೆ ನೀಡಿದ್ದರೂ ಕೂಡ ಯಾವುದೇ ಕಿಮ್ಮತ್ತು ನೀಡದೆ ತಮ್ಮ ಅವ್ಯವಹಾರ ಮುಂದುವರೆಸಿದ್ದಾರೆ. ಆದ್ದರಿಂದ ಕುಪಿತಗೊಂಡ ಪಡಿತರ ಚೀಟಿದಾರರು ಪ್ರತಿಭಟನೆಗೆ ಮುಂದಾಗಲು ಕಾರಣವಾಗಿದೆ ಎಂದರು.

ಹಾವೇರಿ: APMC ಗೋದಾಮಿನ ಮೇಲೆ ದಾಳಿ, 254 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿ ವಶ ...

ಗ್ರಾಪಂ ಸದಸ್ಯ ವೆಂಕಟೇಶ್‌, ಗೋಪಾಲ್‌, ಸಿಮೆಂಟ್‌ ರಾಜ್‌ಗೋಪಾಲ್‌, ಕೃಷ್ಣಮೂರ್ತಿ, ಸಲ್ಲಪ್ಪ, ಶ್ರೀನಿವಾಸ್‌ ಇದ್ದರು.

ಪಡಿತರ ವಿತರಣೆ ಅಂಗಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಸೇರಿದ್ದಾಗಿದೆ. ಆದರೆ ಅವರು ಜವಾಬ್ದಾರಿ ಸ್ಥಾನದಲ್ಲಿದ್ದು, ಈ ರೀತಿ ಬಡವರ ಹೊಟ್ಟೆಯ ಮೇಲೆ ಹೊಡೆಯುವುದು ಸಮಂಜಸವಲ್ಲ. ಒಂದು ವೇಳೆ ವಿತರಣೆ ಕೇಂದ್ರ ನಡೆಸಲಾಗದೆ ಹೋದರೆ, ಬೇರೊಬ್ಬರಿಗೆ ಬಿಟ್ಟುಕೊಡಲಿ, ಅವರಾದರೂ ಸಮರ್ಪಕವಾಗಿ ನಡೆಸಿಕೊಂಡು ಹೋಗುತ್ತಾರೆ. ಇನ್ನಾದರೂ ಸರ್ಕಾರದಿಂದ ಬರುವಷ್ಟುಪಡಿತರವನ್ನು ವಿತರಣೆ ಮಾಡಲಿ.

ರಾಜಶೇಖರ್‌, ಚೀಮಂಡಹಳ್ಳಿ

ಚೀಮಂಡಹಳ್ಳಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಅಕ್ರಮಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಬಗ್ಗೆ ಮಾಹಿತಿ ಬಂದಿದೆ. ನಾಳೆ ಗ್ರಾಮಕ್ಕೆ ತೆರಳಿ, ಪಡಿತರ ಚೀಟಿದಾರರೊಂದಿಗೆ ಚರ್ಚಿಸಿ, ಆಗಿರುವ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಸರ್ಕಾರದ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕುವವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.

ಶ್ರೀಧರ್‌, ಶಿರಸ್ಥೇದಾರ್‌

ಹೊಸಕೋಟೆ ತಾಲೂಕಿನ ಚೀಮಂಡಹಳ್ಳಿ ಗ್ರಾಮದಲ್ಲಿ ಪಡಿತರ ಅಂಗಡಿಯಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಕಡಿತಗೊಳಿಸಿ ಕನ್ನ ಹಾಕುತ್ತಿರುವುದರ ವಿರುದ್ಧ ಮಹಿಳೆಯರು ನ್ಯಾಯಬೆಲೆ ಅಂಗಡಿ ಎದುರು ಪ್ರತಿಭಟನೆ ನಡೆಸಿದರು.