ರಾಘವೇಂದ್ರ ನಾಯ್ಕ

ಅಂಕೋಲಾ(ಆ.23): ಬಾನಾಡಿಗಳಲ್ಲೇ ವಿಶಿಷ್ಟವಾದ, ಪಶ್ಚಿಮಘಟ್ಟದ ದಟ್ಟ ಅರಣ್ಯದಲ್ಲಿ ಕಂಡುಬರುವ, ಎಂದೂ ಮನುಷ್ಯರ ಒಡನಾಟಕ್ಕೆ ಬರದ ಹಾರ್ನ್‌ಬಿಲ್‌ ಹಕ್ಕಿಯೊಂದು ಪಟ್ಟಣದ ಹೊನ್ನೆಕೇರಿಯಲ್ಲಿ ಮನುಷ್ಯರ ಸಂಪರ್ಕ ಬೆಳೆಸಿದ ಪರಿ ಸೋಜಿಗಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಹಾರ್ನ್‌ಬಿಲ್‌ಗಳ ಜೀವನಶೈಲಿಗೆ ಈ ಹಕ್ಕಿ ವ್ಯತಿರಿಕ್ತವಾಗಿದ್ದು ಪಕ್ಷಿ ತಜ್ಞರಿಗೂ ಸವಾಲಾಗಿದೆ. ಉತ್ತರ ಕನ್ನಡದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಹಾರ್ನ್‌ಬಿಲ್‌ಗಳು ತೀರಾ ನಾಚಿಕೆ ಸ್ವಭಾವದ ಪಕ್ಷಿಗಳು. ಅಲ್ಲದೇ ವಯಸ್ಸಾದ ಹಾರ್ನ್‌ಬಿಲ್‌ಗಳು ಸದಾ ಜೋಡಿಯಾಗಿಯೇ ವಾಸಿಸುತ್ತವೆ.

ಆರು ತಿಂಗಳ ಅನುಬಂದ:

ಕಳೆದ 6 ತಿಂಗಳಿಂದ ಹೊನ್ನೆಕೇರಿಯ ಮಾಯಾ ಕೃಷ್ಣಾನಂದ ಶೆಟ್ಟಿ ಅವರ ಮನೆಯ ಬಳಿ ಹಾರ್ನ್‌ಬಿಲ್‌ ಕಾಣಿಸಿಕೊಂಡಿತ್ತು. ಹಕ್ಕಿಗೆ ಪ್ರೀತಿಯಿಂದ ಕರೆದು ಬ್ರೆಡ್‌ನ ತುಂಡನ್ನು ನೀಡಿದ್ದರಂತೆ. ಬ್ರೆಡ್‌ನ್ನು ಕಚ್ಚಿಕೊಂಡು ಹೊರಟ ಹಾರ್ನ್‌ಬಿಲ್‌ ಮರುದಿನ ಸಹ ಮನೆಯ ಎದುರು ಹಾಜರಾಗಿತ್ತಂತೆ. ಮನೆಯ ಎದುರು ನಿತ್ಯ ಬರುವ ಈ ಅತಿಥಿಗೆ ಅನ್ನ, ಚಪಾತಿ, ಬಾಳೆಹಣ್ಣು, ಬ್ರೆಡ್‌ ಇಡಲಾರಂಬಿಸಿದ್ದರು. ಕ್ರಮೇಣ ಅದು ಕೈಮೇಲೆ ಬಂದು ಕುಳಿತು ತಿನ್ನಲಾರಂಭಿಸಿತು. ಬಾ.. ಬಾ.. ಎಂದು ಕರೆದು ಹಣ್ಣು ತೋರಿಸದರೆ ಸಾಕು ಕೈಮೇಲೆ ಬಂದು ಕುಳಿತು, ನೀಡಿದ್ದನ್ನು ತಿನ್ನತ್ತ ಬೆರಗು ಮೂಡಿಸುತ್ತಿದೆ. ಕೇವಲ ಅವರ ಮನೆಯವರಷ್ಟೇ ಅಲ್ಲ, ಅವರ ಮನೆ ಮುಂದೆ ಬಂದು ಬೇರೆಯವರು ಕೊಟ್ಟಆಹಾರವನ್ನೂ ತಿನ್ನುತ್ತದೆ. ಹಾಗಂತ ಬೇರೆ ಮನೆಯ ಎದುರು ಹೋಗದು.

ತುಂಟಾಟವೂ ಚಂದ:

ಈ ಹಾರ್ನ್‌ಬಿಲ್‌ ಕೇವಲ ತಿಂಡಿ ತಿನ್ನಲು ಅಷ್ಟೇ ಬರದೇ, ಮನೆಯ ಪುಟಾಣಿಗಳಾಗಿರುವ ಅಕ್ಷಯಕುಮಾರ, ದುರ್ಗೇಶ ಅವರೊಂದಿಗೆ ತುಂಟಾಟದಲ್ಲಿ ಪಾಲ್ಗೊಳ್ಳುವುದನ್ನು ನೋಡುವುದೇ ಚಂದ. ಮಕ್ಕಳನ್ನು ಹಿಡಿಯಲು ಹೋಗುವುದು, ನಂತರ ತನ್ನನ್ನು ಮುಟ್ಟುವಂತೆ ಓಡಾಡುತ್ತಾ ಮನೆಯ ಸದಸ್ಯರಂತೆ ಮುಕ್ತವಾಗಿ ಬೆರೆತುಬಿಟ್ಟಿದೆ. ಅಲ್ಲದೇ ಚಂಡಾಟದಲ್ಲೂ ಹಾರ್ನ್‌ಬಿಲ್‌ ಸೈ ಎನಿಸಿಕೊಂಡು ಮಕ್ಕಳಿಗೆ ಮುದ್ದಿನ ಅತಿಥಿಯಾಗಿದೆ.
ಇದು ಗ್ರೇಟ್‌ ಇಂಡಿಯನ್‌ ಪ್ರಭೇದಕ್ಕೆ ಸೇರಿದ ಹಾರ್ನ್‌ಬಿಲ್‌ ಇದಾಗಿದೆ. ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳ ಪಟ್ಟಿಯಲ್ಲಿರುವ ಹಾರ್ನ್‌ಬಿಲ್‌ ಬಾನಾಡಿಗಳಲ್ಲೇ ಅಪರೂಪವಾದದ್ದು. ಎಂದು ಸಹ ಮನಷ್ಯರೊಂದಿಗೆ ಒಡನಾಡುವುದಿಲ್ಲ. ಆದರೆ ಹೊನ್ನೆಕೇರಿಯಲ್ಲಿ ಇದು ಮನುಷ್ಯನ ಪ್ರೀತಿಗೆ ಮಾರು ಹೋಗಿರುವುದು ವೈಜ್ಞಾನಿಕ ಲೋಕಕ್ಕೂ ಸವಾಲಾಗಿದೆ ಎಂದು ದಾಂಡೇಲಿಯ ಪಕ್ಷಿ ತಜ್ಞೆ  ರಜನಿ ರಾವ್‌ ಅವರು ತಿಳಿಸಿದ್ದಾರೆ.

ಕಳೆದ 6 ತಿಂಗಳುಗಳಿಂದ ನಮ್ಮ ಕುಟುಂಬದ ಸದಸ್ಯರಂತೆ ಹಾರ್ನ್‌ಬಿಲ್‌ ಸೇರಿಕೊಂಡಿದೆ. ನಿತ್ಯ ತುಂಬಾನೆ ಖುಷಿಯೊಂದಿಗೆ ನಾವು ಅದರೊಟ್ಟಿಗೆ ಕಾಲ ಕಳೆಯುತ್ತೇವೆ. ನನ್ನ ಮಕ್ಕಳಿಗಂತೂ ಈ ಹಾರ್ನ್‌ಬಿಲ್‌ ಎಂದರೆ ಅತಿ ಅಚ್ಚುಮೆಚ್ಚು. ಹಣ್ಣು, ಹಂಪಲುಗಳನ್ನು ತಿನ್ನುತ್ತ ಕಾಡಿನ ವಾಸವನ್ನೇ ಮರೆತು ನಮ್ಮೊಂದಿಗೆ ದಿನ ಕಳೆಯುತ್ತಿರುವುದು ಏನೋ ಒಂಥರಾ ಸಂತೋಷ ತಂದಿದೆ ಎಂದು ಮಾಯಾ ಕೃಷ್ಣಾನಂದ ಶೆಟ್ಟಿ ಅವರು ತಿಳಿಸಿದ್ದಾರೆ. 

ಹಾರ್ನ್‌ಬಿಲ್‌ ಕೌತಕದ ಮೂಟೆ:

ವಿಶ್ವದಲ್ಲಿರುವ ಹಾರ್ನ್‌ಬಿಲ್‌ಗಳ 5 ಪ್ರಭೇದಗಳ ಪೈಕಿ ರಾಜ್ಯದಲ್ಲೂ ಕೆಲ ಪ್ರಭೇದಗಳಿವೆ. ತೀರಾ ಅಪರೂಪದ ಹಾರ್ನ್‌ಬಿಲ್‌ನ ಜೀವನಶೈಲಿಯೇ ಕೌತುಕದ ಮೂಟೆಯಾಗಿದೆ. ಹಾರ್ನ್‌ಬಿಲ್‌ನ್ನು ತೀಕ್ಷ್ಣವಾಗಿ ಅಧ್ಯಯನ ನಡೆಸಿದ ಪಕ್ಷಿ ತಜ್ಞರು ಇದು ಮನುಷ್ಯರ ಹತ್ತಿರಕ್ಕೆ ಬಾರದು ಎಂದು ಉಲ್ಲೇಖಿಸಿದ್ದಾರೆ. ಆದರೆ ಅವರ ಅಧ್ಯಯನಗಳನ್ನು ಈ ಹಾರ್ನ್‌ಬಿಲ್‌ ಸುಳ್ಳಾಗಿಸಿದೆ.