ಚಂದ್ರು ಸಾವಿನ ಪ್ರಕರಣ: ಪೊಲೀಸರ ವಿರುದ್ಧ ರೇಣುಕಾಚಾರ್ಯ ಕಿಡಿ

ಪೊಲೀಸ್‌ ಇಲಾಖೆ ತನಿಖೆಯಲ್ಲಿ ವೈಫಲ್ಯ, ಚಂದ್ರು ಸಾವಿನ ಪ್ರಕರಣ ಆತ್ಯಹತ್ಯೆಯೆಂಬಂತೆ ಬಿಂಬಿಸುವ ಯತ್ನ: ಶಾಸಕ ರೇಣುಕಾಚಾರ್ಯ ಗರಂ

Honnalli MLA MP Renukacharya Slams Police grg

ದಾವಣಗೆರೆ(ನ.06): ಚಂದ್ರು ಸಾವಿನ ಪ್ರಕರಣದ ತನಿಖೆಯಲ್ಲಿ ಪೊಲೀಸ್‌ ಇಲಾಖೆ ಎಲ್ಲೋ ಒಂದು ಕಡೆ ವೈಫಲ್ಯ ಕಂಡಿದ್ದು, ಚಂದ್ರು ಕಗ್ಗೊಲೆಯಾಗಿದ್ದರೂ ಅದನ್ನು ಆತ್ಮಹತ್ಯೆಯೆಂಬಂತೆ ಬಿಂಬಿಸಲು ಇಲಾಖೆ ಹೊರಟಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಪೊಲೀಸ್‌ ಇಲಾಖೆ ತನಿಖೆ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ಹೊನ್ನಾಳಿಯ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಂದ್ರು ಕಗ್ಗೊಲೆಯಾದ ಬಗ್ಗೆ ಪೂರಕ ದಾಖಲೆ ನಮ್ಮ ಬಳಿ ಇವೆ. ಆದರೆ, ಇಲಾಖೆ ಅದನ್ನು ಆತ್ಮಹತ್ಯೆಯೆಂಬಂತೆ ತನಿಖೆ ನಡೆಸುತ್ತಿದೆ ಎಂದರು. ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಕಾರು ಬಿದ್ದಿದ್ದನ್ನು ಪತ್ತೆ ಮಾಡಿದ್ದು ನಮ್ಮ ಕೆಲವು ಕಾರ್ಯಕರ್ತರು ಹುಡುಕಿದ್ದು. ನಾಲೆಯಲ್ಲಿ ಚಂದ್ರು ಕಾರು ಇದ್ದುದನ್ನು ಪೊಲೀಸ್‌ ಇಲಾಖೆ ಪತ್ತೆ ಮಾಡಲಿಲ್ಲ. ಪೊಲೀಸ್‌ ತನಿಖೆ ಕಾರ್ಯ ವೈಖರಿ ಬಗ್ಗೆ ಬೇಸರದ ಮಾತುಗಳನ್ನು ತುಂಬಾ ನೋವಿನಿಂದ ಹೇಳಬೇಕಾಗಿದೆ ಎಂದು ತಿಳಿಸಿದರು.

ಚಂದ್ರು ನಿಗೂಢ ಸಾವು: ಇದು ಕೊಲೆಯೋ ಅಥವಾ ಅಪಘಾತವೋ?

ತಮ್ಮ ಪುತ್ರ ಚಂದ್ರು ಸಾವಿನ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ನಾವು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮಾಡಿದ್ದ ಚಂದ್ರು ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ವರದಿಗೆ ಕಾಯುತ್ತಿದ್ದೇವೆ. ಆ ನಂತರ ಏನು ಮಾಡಬೇಕೆಂದು ನಿರ್ಧಾರ ಮಾಡುವೆ ಎಂದು ಹೇಳಿದರು.

ಹೊನ್ನಾಳಿಯಲ್ಲಿ ಚಂದ್ರು ಯುವ ನಾಯಕನಾಗಿ ಬೆಳೆಯುತ್ತಿದ್ದ. ಪ್ರಬಲ ಹಿಂದುತ್ವವಾದಿಯಾಗಿದ್ದ ಚಂದ್ರುನನ್ನು ಕ್ಷೇತ್ರದ ಜನರು ಹಿಂದು ಹುಲಿ ಅಂತಲೇ ಕರೆಯುತ್ತಿದ್ದರು. ಇನ್ನು 5 ವರ್ಷ ಬಿಟ್ಟಿದ್ದರೆ ನನ್ನ ಉತ್ತರಾಧಿಕಾರಿಯಾಗಿರುತ್ತಿದ್ದ. ಇಂತಹ ಚಂದ್ರುವಿನ ಸಾವು ನನಗೆ, ಕುಟುಂಬಕ್ಕೆ ಎಂದಿಗೂ ಅರಗಿಸಿಕೊಳ್ಳಲಾಗದ ನೋವಾಗಿ ಜೀವನ ಪರ್ಯಂತ ಕಾಡಲಿದೆ ಎಂದು ರೇಣುಕಾಚಾರ್ಯ ಭಾವುಕರಾದರು.

ಚಂದ್ರುದು ಅಪಘಾತವಲ್ಲ, ಭೀಕರ ಕೊಲೆ

ಖಂಡಿತಾ ಚಂದ್ರು ಕಾರು ಅಪಘಾತಕ್ಕೀಡಾಗಿಲ್ಲ. ಉದ್ದೇಶಪೂರ್ವಕವಾಗಿ ಯಾರೋ ಆತನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು. ಹೊನ್ನಾಳಿ ತಾಲೂಕಿನ ಅರಬಘಟ್ಟ-ನ್ಯಾಮತಿ ರಸ್ತೆಯ ಕಡದಕಟ್ಟೆ ಸಮೀಪದ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಕಾರು, ಚಂದ್ರು ಶವ ಪತ್ತೆಯಾದ ಸ್ಥಳಕ್ಕೆ ಶನಿವಾರ ಮುಖಂಡರು, ಬೆಂಬಲಿಗರೊಂದಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಭಾಗವಾಗಿ ನಾನು ಮಾತನಾಡಬಾರದು. ಆದರೂ, ಚಂದ್ರು ಸಾವಿನ ತನಿಖೆಯಲ್ಲಿ ಪೊಲೀಸ್‌ ಇಲಾಖೆ ವೈಫಲ್ಯ ಹೇಳಲೇಬೇಕು ಎಂದರು. 

ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ ಪ್ರಕರಣ: ಚಂದ್ರು ಕಾರು ಕಾಲುವೆಯಲ್ಲಿ ಬಿದ್ದಿರುವ ಶಂಕೆ

ಯಡಿಯೂರಪ್ಪ ನಾಲ್ಕು ಸಲ ಕರೆ ಮಾಡಿ, ಹೊನ್ನಾಳಿಗೆ ಬಂದು ಹೋದರು. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ಮಕ್ಕಳು ಚಂದ್ರು ಸಾವಿಗೆ ಕಣ್ಣೀರು ಹಾಕುತ್ತಿದ್ದಾರೆ. ಮಗನ ಸಾವಿನಲ್ಲಿ ನಾನು ರಾಜಕಾರಣ ಮಾಡಲ್ಲ. ಜನಾನುರಾಗಿ ವ್ಯಕ್ತಿತ್ವದ ಚಂದ್ರು ಸಾವು ಈಗಲೂ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ ಎಂದು ತಿಳಿಸಿದರು.

ನ್ಯಾಯ ಸಿಗುವವರೆಗೂ ಹೋರಾಟ: ರೇಣುಕಾಚಾರ್ಯ

ನನ್ನ ಮೇಲೆ ನಿಮಗೆ ಯಾರಿಗಾದರೂ ರಾಜಕೀಯ ದ್ವೇಷವಿದ್ದರೆ ನನ್ನ ಮೇಲೆ ದಾಳಿ ಮಾಡಿ ಅದನ್ನು ಬಿಟ್ಟು ಮಕ್ಕಳ ಮೇಲೆ ಯಾಕೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು. ನಮ್ಮಂತಹ ರಾಜಕೀಯ ಮುಖಂಡರ ಪರಿಸ್ಥಿತಿ ಹೀಗಾದರೆ, ಜನ ಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು. ರೇಣುಕಾಚಾರ್ಯರ ಮತ್ತೊಂದು ಮುಖವೂ ಎಲ್ಲರಿಗೂ ಗೊತ್ತು. ನನಗೆ ನ್ಯಾಯ ಸಿಗುವವರೆಗೂ ನಾನು ಹೋರಾಟ ಮಾಡುತ್ತೇನೆ. ನನ್ನ ಮಗನ ಸಾವಿನ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು. ಅಲ್ಲಿವರೆಗೂ ನನ್ನ ಹೋರಾಟವೂ ನಿಲ್ಲಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.
 

Latest Videos
Follow Us:
Download App:
  • android
  • ios