ದಾವಣಗೆರೆ (ಆ.31):  ಕೋವಿಡ್‌ ಪಾಸಿಟಿವ್‌ ಪ್ರಕರಣದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆಲ್ಲಾ ಕಿವಿಗೊಡದಂತೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಜನತೆಗೆ ಮನವಿ ಮಾಡಿದ್ದಾರೆ.

ಪಾಸಿಟಿವ್‌ ಬಂದವರಿಗೆ ಸರ್ಕಾರದಿಂದ ದುಡ್ಡು ಬರುತ್ತದೆ. ಅದರಲ್ಲಿ ವೈದ್ಯರು, ಆಸ್ಪತ್ರೆಗೆ ಹಣ ಹಂಚಿಕೆಯಾಗುತ್ತದೆಂಬುದೆಲ್ಲಾ ಬರೀ ಸುಳ್ಳು ಸುದ್ದಿ. ಇದನ್ನೆಲ್ಲಾ ಜನತೆ ನಂಬಬಾರದು ಎಂದು ಹೊನ್ನಾಳಿಯಿಂದ ಮಾಡಿದ ವಿಡಿಯೋ ಸಂದೇಶದಲ್ಲಿ ಅವರು ಕೋರಿದ್ದಾರೆ.

ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಸೋಂಕು ವ್ಯಾಪಿಸಿದ್ದು, ಅದಕ್ಕೆ ನಮ್ಮ ದೇಶ, ರಾಜ್ಯ, ಜಿಲ್ಲೆ, ಹೊನ್ನಾಳಿ ಕ್ಷೇತ್ರವೂ ಹೊರತಲ್ಲ. ಪಾಸಿಟಿವ್‌ ಬಂದವರಿಂದ ಮತ್ತಷ್ಟುಜನರಿಗೆ ಸೋಂಕು ಹರಡಬಾರದೆಂಬ ಸದುದ್ದೇಶದಿಂದ ಪಾಸಿಟಿವ್‌ ಬಂದವರಿಗೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ಇಟಲಿ, ಬ್ರಿಟನ್‌, ಅಮೆರಿಕ, ಬ್ರೆಜಿಲ್‌ನಲ್ಲಿ ಹೇಗಿದೆ?...

ವೈರಸ್‌ ಹರಡದಂತೆ, ಸಾವಿನ ಪ್ರಮಾಣ ನಿಯಂತ್ರಿಸಲು ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಜನರ ಆರೋಗ್ಯ, ಪ್ರಾಣ ಕಾಪಾಡುವ ಕಳಕಳಿ ಇದೆ. ನನ್ನ ಮನೆಯಲ್ಲೂ ಸಹೋದರ ಸೇರಿದಂತೆ ಕುಟುಂಬದ 6 ಜನರಿಗೆ ಪಾಸಿಟಿವ್‌ ಬಂದಿದೆ. ನಾನು 5 ಸಲ ಟೆಸ್ಟ್‌ ಮಾಡಿಸಿದರೂ ನೆಗೆಟಿವ್‌ ಬಂದಿದೆ ಎಂದು ಹೇಳಿದರು.

ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಕೊರೋನಾ ಸೋಂಕು ರಾಜ್ಯದಲ್ಲಿ, ಜಿಲ್ಲೆಯಲ್ಲಿ ಕಂಡು ಬಂದಾಗಿನಿಂದಲೂ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಬಡವರಿಗೆ ಆಹಾರ ಕಿಟ್‌ಗಳನ್ನು ನೀಡುತ್ತಿದ್ದೇನೆ. ಅದೇನೂ ಸರ್ಕಾರದ ಹಣವಲ್ಲ. ನನ್ನ ಸ್ವಂತ ಹಣದಲ್ಲಿ ಬಡವರಿಗೆ ಆಹಾರ ಕಿಟ್‌ ನೀಡುವ ಜೊತೆಗೆ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ.

'ದೇಶದಲ್ಲಿ ದೀಪಾವಳಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ'!...

ನನ್ನನ್ನೂ ಸೇರಿದಂತೆ ಜಿಲ್ಲಾಡಳಿತ, ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಪೌರ ಕಾರ್ಮಿಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಶುಶ್ರೂಷಕರು, ಆಸ್ಪತ್ರೆ ಸಿಬ್ಬಂದಿ ಹಗಲಿರುಳು ಎನ್ನದೇ, ತಮ್ಮ ಪ್ರಾಣ, ಕುಟುಂಬದ ಹಿತವನ್ನೇ ಬದಿಗಿಟ್ಟು, ಕೊರೋನಾ ವಿರುದ್ಧ ಹೋರಾಟ ನಡೆಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರದ ವಿರುದ್ಧ ಅಪಪ್ರಚಾರ, ವದಂತಿಗೆ ಜನತೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ಕೇಂದ್ರ-ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ, ಆರೋಗ್ಯ, ಪೊಲೀಸ್‌, ಜಿಪಂ ಸೇರಿದಂತೆ ವಿವಿಧ ಇಲಾಖೆಗಳು ಕೊರೋನಾ ಬಗ್ಗೆ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಜನತೆ ಮಾತ್ರ ಇಂದಿಗೂ ಎಚ್ಚೆತ್ತಿಲ್ಲ. ಸರ್ಕಾರದ ನಿಯಮಾವಳಿ, ಮಾರ್ಗಸೂಚಿ ಎಲ್ಲರಿಗೂ ಒಂದೇ ಆಗಿರುತ್ತವೆ ಎಂಬುದನ್ನು ಯಾರೂ ಮರೆಯಬಾರದು ಎಂದರು.

 ವಿವಾಹ ನಿಶ್ಚಯವಾದ ಜೋಡಿಗೆ ಮಾಸ್ಕ್‌

  ವಿವಾಹ ನಿಶ್ಚಿತಾರ್ಥ ಮಾಡಿಕೊಂಡ ಶಿಲ್ಪಾ, ಸುದೀಪ್‌ ಜೋಡಿಗೆ ಹೊನ್ನಾಳಿ ತಾ. ಲಿಂಗಾಪುರ ಗ್ರಾಮದಲ್ಲಿ ಶುಭಾ ಹಾರೈಸಿದ ಶಾಸಕ ರೇಣುಕಾಚಾರ್ಯ ನವ ಜೋಡಿಗೆ ಮಾಸ್ಕ್‌ ಹಾಕಿಸುವ ಮೂಲಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಸಿದರು. ಲಿಂಗಾಪುರ ಗ್ರಾಮದ ಶಿಲ್ಪಾ, ಸುದೀಪ್‌ ಜೋಡಿ ವಿವಾಹ ನಿಶ್ಚಯದ ಹಿನ್ನೆಲೆ ಕುಟುಂಬದ ಆಹ್ವಾನದ ಮೇರೆಗೆ ಭೇಟಿ ನೀಡಿ,  ಮಾತನಾಡಿದ ಶಾಸಕರು ಪ್ರತಿಯೊಬ್ಬರೂ ಸಾಮಾಜಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌ ಕಡ್ಡಾಯವಾಗಿ ಧರಿಸಿ. ಸ್ಯಾನಿಟೈಸರ್‌, ಸೋಪಿನಿಂದ ಆಗಾಗ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಿ. ಮದುವೆ, ನಿಶ್ಚಿತಾರ್ಥ, ಗೃಹ ಪ್ರವೇಶ, ಧಾರ್ಮಿಕ ಕಾರ್ಯ ಮನೆಯಲ್ಲಿ ಯಾವುದೇ ಶುಭ ಕಾರ್ಯವಾಗಿರಲಿ ಕಡ್ಡಾಯ ಮಾಸ್ಕ್‌ ಧರಿಸಿರಿ. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಿ, ಸರ್ಕಾರದ ಮಾರ್ಗಸೂಚಿ ಪಾಲಿಸಿ, ಕನಿಷ್ಟಸಂಖ್ಯೆಯಲ್ಲಿ ಜನ ಸೇರುವಂತೆ ಕಿವಿಮಾತು ಹೇಳಿದರು.

ಇದನ್ನೂ ನೋಡಿ | ಆಶಾ ಕಾರ್ಯಕರ್ತೆಯರಿಗೆ ಕೈಯಾರೆ ಊಟ ಬಡಿಸಿದ ರೇಣುಕಾಚಾರ್ಯ

"