ಹೊನ್ನಾಳಿ(ಜು.28): ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕುಗಳ ಪಿಡಿಒಗಳು ಇಂದಿನಿಂದ ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇದ್ದು ಕೊರೋನಾ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಶಾಸಕ ರೇಣುಕಾಚಾರ್ಯ ಎಚ್ಚರಿಕೆ ನೀಡಿದರು. ಸೋಮವಾರ ತಾಪಂ ಸಭಾಂಗಣದಲ್ಲಿ ಅವಳಿ ತಾಲೂಕುಗಳ ಪಿಡಿಒ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಿಡಿಒಗಳು ಹೆಚ್ಚಾಗಿ ತಾಪಂ ಕಚೇರಿಗಳಲ್ಲಿ ಇರುತ್ತಾರೆ ಎನ್ನುವ ದೂರು ಬಂದಿದೆ. ಕೆಲಸದ ಅನಿವಾರ್ಯತೆ ಇದ್ದಲ್ಲಿ ಕಚೇರಿಗೆ ಭೇಟಿ ನೀಡುವುದು ತಪ್ಪಲ್ಲ. ಆದರೆ ಕೆಲವರು ವಿನಾ ಕಾರಣ ಕುಳಿತಿರುತ್ತಾರೆ. ಅಂಥವರು ತಮ್ಮ ಕೆಲಸವಾದ ನಂತರ ಗ್ರಾಮಗಳಿಗೆ ಭೇಟಿ ಕೊಡಬೇಕು. ಇಲ್ಲದಿದ್ದರೆ ಅಂಥಹವರ ಬಗ್ಗೆ ಮಾಹಿತಿ ಪಡೆದು ಗಂಭೀರವಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಗ್ರಾಮದ ಮುಗ್ಧ ಜನತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ, ಮಾಸ್ಕ್‌ ಕಡ್ಡಾಯವಾಗಿ ಧರಿಸುವಂತೆ ಸಲಹೆ ನೀಡಬೇಕು. ಪಾಸಿಟಿವ್‌ ಪ್ರಕರಣ ಪತ್ತೆಯಾದ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಬೇಕು. ನೀವೂ ಕೂಡಾ ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು. ನಾನು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳನ್ನು ನಾಲ್ಕು ಬಾರಿ ಸುತ್ತಿ ಸೋಂಕು ಹರಡದಂತೆ ಜಾಗೃತಿ ಮೂಡಿಸಿದ್ದೇನೆ. ಈ ಸಂದರ್ಭದಲ್ಲಿ ಪಿಡಿಒಗಳು ನನಗೆ ಕಂಡು ಬಂದಿದ್ದು ಕಡಿಮೆ. ನಿಮ್ಮ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಹಾಗಂತ ನಿಮ್ಮ ನಿರ್ಲಕ್ಷ್ಯ ಇನ್ನು ಮುಂದೆ ನಾನು ಸಹಿಸುವುದಿಲ್ಲ ಎಂದರು.

ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡವೆಂದ ಬಿಜೆಪಿ ಶಾಸಕ

ಗ್ರಾಮಗಳ ಸ್ವಚ್ಛತೆ ಬಗ್ಗೆ, ಆದ್ಯತೆ ನೀಡಬೇಕು. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ನಾನು ಸರ್ಕಾರದ ಒಂದು ಭಾಗವಾಗಿ ಈ ಮಾತು ಹೇಳುತ್ತಿದ್ದೇನೆ. ಜಾಗೃತಿ ಮೂಡಿಸುವ ಸಲುವಾಗಿ ಕರಪತ್ರಗಳನ್ನು ಮುದ್ರಿಸಿದ್ದೇನೆ. ನಾಳೆಯಿಂದ ಪ್ರತಿ ಮನೆ ಮನೆಗೂ ಅವುಗಳನ್ನು ಪ್ರತಿಯೊಬ್ಬ ಪಿಡಿಒಗಳು ಹಂಚಿಕೆ ಮಾಡಬೇಕು. ಇದು ಬಿಜೆಪಿ ಪಕ್ಷದ ಕರಪತ್ರವಲ್ಲ. ಇದು ಸಾರ್ವಜನಿಕ ಹಿತಾಸಕ್ತಿಯಡಿ ಜನಜಾಗೃತಿ ಮೂಡಿಸುವ ಕರಪತ್ರ ಹಂಚಬೇಕು. ಗ್ರಾಮಗಳಲ್ಲಿ ವಾರ್ಡ್‌ ಸಮಿತಿಗಳನ್ನು ರಚಿಸಬೇಕು. ವಾರ್ಡ್‌ ಸಭೆಗಳನ್ನು ಆಯೋಜಿಸಬೇಕು ಎಂದು ತಾಕೀತು ಮಾಡಿದರು.

ತಾಪಂ ಅಧ್ಯಕ್ಷ ಕೆ.ಎಲ್‌. ರಂಗಪ್ಪ ಹಾಗೂ ನ್ಯಾಮತಿ ತಾಪಂ ಅಧ್ಯಕ್ಷ ರವಿಕುಮಾರ್‌ ಮಾತನಾಡಿ, ಗ್ರಾಮಗಳಲ್ಲಿ ಜನ ಶಾಸಕರ ಕಾರು ತಡೆದು ಸ್ವಚ್ಛತೆ ಕೈಗೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ಇದರಿಂದ ಪಿಡಿಒ ತಮ್ಮ ಜವಾಬ್ದಾರಿ ಹೇಗೆ ನಿರ್ವಹಿಸಿದ್ದಾರೆ ಎಂದು ತಿಳಿದುಬರುತ್ತದೆ . ಬಾಕಿ ಇರುವ ಕಂದಾಯವನ್ನು ವಸೂಲಿ ಮಾಡಬೇಕೆಂದು ಸೂಚಿಸಿದರು. ತಾ.ಪಂ. ಇಒ ಗಂಗಾಧರಮೂರ್ತಿ ಮಾತನಾಡಿ, ಆಗಸ್ಟ್‌ 10 ರಂದು ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಅದರಂತೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ತಾಪಂ ಉಪಾಧ್ಯಕ್ಷ ಮರಿಕನ್ನಪ್ಪ, ಸಹಾಯಕ ನಿರ್ದೇಶಕ ರಾಘವೇಂದ್ರ ಹಾಗೂ ಪಿಡಿಒಗಳು ಇದ್ದರು.