ಮೂಡಿಗೆರೆ(ಜು.28): ಸಚಿವ ಸಂಪುಟ ಪುನರ್‌ ರಚನೆ ವೇಳೆ ಸಚಿವ ಸ್ಥಾನ ಸಿಗದೇ ಅಸಮಾಧಾನಕ್ಕೀಡಾಗಿದ್ದ 24 ಮಂದಿ ಬಿಜೆಪಿ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೋಮವಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ತಮಗೆ ನೀಡಿರುವ ಎಂಸಿಎ ಅಧ್ಯಕ್ಷ ಸ್ಥಾನ ತಿರಸ್ಕರಿಸುವುದಾಗಿ ತಿಳಿಸಿದ್ದಾರೆ.

ಸೋಮವಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಘೋಷಣೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ತನ್ನ ಕ್ಷೇತ್ರದಲ್ಲಿ ಕಳೆದ ಬಾರಿ ಅತಿವೃಷ್ಟಿಯಿಂದ ಬಾರಿ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಇದರಿಂದ ತಮ್ಮ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದ ಕ್ಷೇತ್ರವಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಗರಿಷ್ಠ ಪ್ರಮಾಣದ ಅನುದಾನ ನೀಡಿದರೆ ಸಾಕು. ನನಗೆ ಅಧಿಕಾರದ ಆಸೆಯಿಲ್ಲ. ನನಗೆ ನೀಡಿರುವ ಕರ್ನಾಟಕ ಮಾರುಕಟ್ಟೆ ಕನ್ಸಲ್ಟೆಂಟ್ಸ್‌ ಮತ್ತು ಏಜೆನ್ಸೀಸ್‌ ಲಿಮಿಟೆಡ್‌ (ಎಂಸಿಎ) ಇದರ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದು ನನಗೆ ಬೇಡ. ಈ ಸ್ಥಾನವನ್ನು ತಿರಸ್ಕರಿಸುವುದಾಗಿ ತಿಳಿಸಿದರು.

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಬಿಎಸ್‌ವೈ ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ

ಕಳೆದ ವರ್ಷ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸುವ ವೇಳೆ 3 ಬಾರಿ ಶಾಸಕರಾಗಿರುವ ಎಂ.ಪಿ.ಕುಮಾರಸ್ವಾಮಿ ಅವರಿಗೂ ಸಂಪುಟದಲ್ಲಿ ಸ್ಥಾನ ನೀಡುತ್ತಾರೆಂದು ಭಾವಿಸಲಾಗಿತ್ತು. ಎಂ.ಪಿ.ಕುಮಾರಸ್ವಾಮಿ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿ ಹೋದಾಗ ಅವರಿಗೆ ನಿರಾಸೆಯಾಗಿತ್ತು. ಬಳಿಕ ನಡೆದ ಸಂಪುಟ ಪುನರ್‌ರಚನೆ ವೇಳೆಯೂ ಸ್ಥಾನ ನೀಡದೇ ದೂರವಿಡಲಾಗಿತ್ತು. ಇದರಿಂದ ತೀರಾ ಅಸಮಾಧಾನಗೊಂಡಿದ್ದರು. ಈಗ ಗಂಜಿ ಕೇಂದ್ರವೆಂದೇ ಕರೆಯಲ್ಪಡುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದಾಗ ತನಗೆ ಈ ಸ್ಥಾನ ಬೇಡವೆಂದು ನಯವಾಗಿಯೇ ನಿರಾಕರಿಸಿ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡು ನಿರಾಕರಿಸುತ್ತಿದ್ದೀರಾ ಎಂಬ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧವಾಗಲೀ, ಸರ್ಕಾರ ವಿರುದ್ಧವಾಗಲೀ ಮಾತನಾಡಲಾರೆ. ನನಗೆ ಈಗ ನೀಡಿರುವ ಅಧಿಕಾರ ಬೇಡ. ನಾನು ಕೇಳಿದಷ್ಟು ಅಭಿವೃದ್ಧಿ ಅನುದಾನ ನೀಡಿದರೆ ಸಾಕು ಎಂದು ಹೇಳಿದರು.