Asianet Suvarna News Asianet Suvarna News

ಪೊಲೀಸರ ಕಣ್ತಪ್ಪಿಸಿ ಹೊರಗಡೆ ಓಡಾಟ: ತಲೆನೋವಾದ ಹೋಂ ಕ್ವಾರಂಟೈನ್‌ಗಳು

ಮನೆ ನಿಗಾದಲ್ಲಿ ಇರುವವರು ಹೊರಗಡೆ ಓಡಾಡುವುದರಿಂದ ಮತ್ತೆ ವೈರಾಣು ಹರಡುವ ಆತಂಕ|ಕೊರೋನಾ ವೈರಸ್‌ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಮನವರಿಕೆ ಮಾಡಿಕೊಡುತ್ತಲೇ ಬರಲಾಗುತ್ತಿದೆ| ಜಿಲ್ಲೆಯ ಬಹುತೇಕ ಕಡೆ ಇದು ಪಾಲನೆಯಾಗುತ್ತಿಲ್ಲ| 

Home Qrantine Persons came to Outside from the Houses in Ballari District
Author
Bengaluru, First Published Apr 9, 2020, 10:52 AM IST

ಬಳ್ಳಾರಿ(ಏ.09): ಜಿಲ್ಲೆಯಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಸತತ ಪ್ರಯತ್ನದಲ್ಲಿರುವ ಜಿಲ್ಲಾಡಳಿತಕ್ಕೆ ಕ್ವಾರಂಟೈನ್‌ನಲ್ಲಿ ಇರುವರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮನೆ ನಿಗಾ ವಹಿಸಿರುವವರು ಯಾವುದೇ ಕಾರಣಕ್ಕೆ ಹೊರಗಡೆ ಬರಬೇಡಿ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾಗ್ಯೂ ಹೊರ ಓಡಾಟ ಕಂಡು ಬರುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

"

ಕೊರೋನಾ ವೈರಾಣು ಸೋಂಕಿತರು ಹಾಗೂ ಶಂಕಿತರನ್ನು ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡುವ ಕಾರ್ಯವಾಗುತ್ತಿದೆ. ಇದರಿಂದ ಜಿಲ್ಲಾಡಳಿತಕ್ಕೆ ಯಾವ ಸಮಸ್ಯೆಯೂ ಇಲ್ಲ. ಆದರೆ, ಮನೆ ನಿಗಾದಲ್ಲಿ ಇರುವವರು ವಿನಾಕಾರಣ ಹೊರಗಡೆ ಓಡಾಡುವುದರಿಂದ ಮತ್ತೆ ವೈರಾಣು ಹರಡುವ ಆತಂಕ ಜಿಲ್ಲಾಡಳಿತವನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ 1211 ಜನರು ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. ಆದರೆ, ಇವರು ತಮಗೆ ಯಾವುದೇ ಕಾಯಿಲೆ ಸೋಂಕಿಲ್ಲ ಎಂದು ವರ್ತಿಸುತ್ತಿದ್ದು ಪೊಲೀಸರಿಗೆ ಕಣ್ತಪ್ಪಿಸಿ ಊರೂರು ಅಲೆದಾಡುತ್ತಿದ್ದಾರೆ. ಮನೆಯಲ್ಲಿ ಬೇಸರವಾಗುತ್ತಿದೆ ಎಂದು ಹೊರಗಡೆ ಓಡಾಡುವ ಚಾಳಿ ರೂಢಿಸಿಕೊಂಡಿದ್ದಾರೆ. ಹೀಗಾದರೆ ಸೋಂಕು ನಿಯಂತ್ರಣ ಮಾಡುವುದು ಹೇಗೆ ? ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಹಂಪಿ ವಿರೂಪಾಕ್ಷೇಶ್ವರನಿಗೂ ತಟ್ಟಿದ ಕೊರೋನಾ ಭೀತಿ: ರಥೋತ್ಸವ ರದ್ದು

ಬಳ್ಳಾರಿ ಸೂಕ್ಷ್ಮ ಪ್ರದೇಶ:

ಜಿಲ್ಲೆಯಲ್ಲಿ ಈಗಾಗಲೇ 6 ಪ್ರಕರಣಗಳು ಪತ್ತೆಯಾಗಿರುವುದರಿಂದ ಜಿಲ್ಲೆಯನ್ನು ಸೂಕ್ಷ್ಮ ಪ್ರದೇಶ ಎಂದೇ ಪರಿಗಣಿಸಲಾಗಿದೆ. ಹೊಸಪೇಟೆ ನಗರದಲ್ಲಿಯೇ ನಾಲ್ಕು ವೈರಸ್‌ ಪ್ರಕರಣಗಳು ಕಂಡು ಬರುವುದರಿಂದ ಕೊರೋನಾ ವೈರಸ್‌ ಸೋಂಕಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ಜನರ ನಿರ್ಬಂಧ ಸೇರಿದಂತೆ ವೈರಾಣು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಆದ್ಯತೆ ನೀಡಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ. ಇನ್ನು ಬಳ್ಳಾರಿ ನಗರದ ಗುಗ್ಗರಹಟ್ಟಿಪ್ರದೇಶವನ್ನು ಸಹ ಸೋಂಕಿತ ಪ್ರದೇಶ ಎಂದು ಗುರುತಿಸಿ ಈ ಪ್ರದೇಶದ ಜನರ ಪ್ರತಿಯೊಬ್ಬರ ಆರೋಗ್ಯದ ಮೇಲೆ ನಿಗಾ ಇಟ್ಟು ಪರೀಕ್ಷೆ ನಡೆದಿದೆ.

1 ಲಕ್ಷ ಜನರ ಆರೋಗ್ಯ ತಪಾಸಣೆ:

ಜಿಲ್ಲೆಯಲ್ಲಿ ಕೊರೋನಾ ವೈರಾಣು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚಿನ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಏ. 8ರ ಮಧ್ಯಾಹ್ನ 2 ಗಂಟೆ ವೇಳೆಗೆ 1,08,228 ಜನರ ಆರೋಗ್ಯ ತಪಾಸಣೆ ನಡೆದಿತ್ತು. ದಿನದಿನಕ್ಕೆ ಆರೋಗ್ಯ ತಪಾಸಣೆ ಒಳಪಡಿಸುವವರ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಮನೆ ನಿಗಾದಲ್ಲಿರುವವರ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದೆ.

ಕ್ವಾರಂಟೈನ್‌ ಆಗಿರುವವರ ವೈದ್ಯಕೀಯ ವರದಿ ನೆಗೆಟಿವ್‌ ಬಂದಿದ್ದಾಗ್ಯೂ ಅವರ ಟ್ರಾವೆಲ್‌ ಇತಿಹಾಸ ನೋಡಿ ಸೋಂಕು ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದ್ದು, ಅವರ ಸುರಕ್ಷತೆ ದೃಷ್ಟಿಯಿಂದ ಇದು ಅತ್ಯುತ್ತಮ ಮಾರ್ಗವೂ ಹೌದು. ಆದರೆ, ಇದನ್ನು ಮನೆ ನಿಗಾ ಇರುವವರು ಅರ್ಥ ಮಾಡಿಕೊಳ್ಳದೆ ಹೊರಗಡೆ ಓಡಾಡಲು ಮುಂದಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಸೋಂಕು ಹರಡುವ ಸಾಧ್ಯತೆ ಆತಂಕ ಜಿಲ್ಲಾಡಳಿತವನ್ನು ಕಾಡುತ್ತಿದೆ.

ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ:

ಕೊರೋನಾ ವೈರಸ್‌ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಮನವರಿಕೆ ಮಾಡಿಕೊಡುತ್ತಲೇ ಬರಲಾಗುತ್ತಿದೆ. ಆದರೆ, ಜಿಲ್ಲೆಯ ಬಹುತೇಕ ಕಡೆ ಇದು ಪಾಲನೆಯಾಗುತ್ತಿಲ್ಲ. ಬಡಜನರು ದುಡಿಮೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು 2 ತಿಂಗಳ ಪಡಿತರವನ್ನು ಜಿಲ್ಲೆಯಲ್ಲಿ ವಿತರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಪಡಿತರಕ್ಕೆ ಜನರು ಮುಗಿ ಬೀಳುತ್ತಿದ್ದಾರೆ. ತರಕಾರಿ ಹಾಗೂ ದಿನಸಿ ಖರೀದಿಗೆ ಪಾಲನೆಯಾಗುತ್ತಿರುವುದು ಕಂಡು ಬರುತ್ತಿದ್ದು, ಅಲ್ಲಲ್ಲಿ ಉಲ್ಲಂಘನೆಯ ದೃಶ್ಯಗಳು ಗಮನ ಸೆಳೆಯುತ್ತವೆ.
 

Follow Us:
Download App:
  • android
  • ios