ಗಂಗಾವತಿ(ನ.29): ಲಿಂಗಾಯತರಿಗೆ ಒಬಿಸಿ ಮೀಸಲು ಕುರಿತು ಕುಲ ಶಾಸ್ತ್ರೀಯ ಅಧ್ಯಯನ ನಂತರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಶನಿವಾರ ರಾಯಚೂರಿನಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಗಾಯತರಿಗೆ ಒಬಿಸಿ ಹೊಸ ಬೇಡಿಕೆ ಅಲ್ಲ. ಕಳೆದ 30- 35 ವರ್ಷಗಳ ಹೋರಾಟ ಇದಾಗಿದ್ದು, ಇದರ ಬಗ್ಗೆ ಸಮಗ್ರ ವರದಿ ಪಡೆಯಲು ಸೂಚಿಸಲಾಗಿದೆ. ವರಿಷ್ಠರ ಜತೆಗೆ ಚರ್ಚಿಸಿ ಮುಖ್ಯಮಂತ್ರಿಯವರು ತೀರ್ಮಾನ ಕೈಗೊಳ್ಳಲಿದ್ದಾರೆ. ಕಾನೂನುಬದ್ಧವಾಗಿ ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.

ಬಿಜೆಪಿಯಲ್ಲಿ ವಲಸಿಗರು ಮತ್ತು ಮೂಲ ಎಂಬ ಭಿನ್ನಮತ ಇಲ್ಲ. ಅದೆಲ್ಲಾ ಮಾಧ್ಯಮದವರ ಸೃಷ್ಟಿ. ಪಕ್ಷದಲ್ಲಿ ಎಲ್ಲ ಸರಿ ಇದೆ ಎಂದರು. ಕೊಪ್ಪಳ ಜಿಲ್ಲೆಗೆ ಸಚಿವ ಸ್ಥಾನ ದೊರಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನ ನೀಡುವಲ್ಲಿ ಹಳಬರು, ಹೊಸಬರು ಎನ್ನುವ ಪ್ರಶ್ನೆ ಇಲ್ಲ. ಮುಖ್ಯಮಂತ್ರಿಯವರಿಗೆ ಯಾರನ್ನು ಸಚಿವರನ್ನಾಗಿ ಮಾಡಬೇಕೆಂಬುದು ಗೊತ್ತಿದೆ ಎಂದರು.

ಕುಷ್ಟಗಿ: ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣ, ತಹಶೀಲ್ದಾರ್‌ ಸಸ್ಪೆಂಡ್‌

ಕೊಪ್ಪಳಕ್ಕೆ ಶೀಘ್ರದಲ್ಲಿ ಮಹಿಳಾ ಠಾಣೆ:

ಹಲವಾರು ವರ್ಷಗಳಿಂದ ಕೊಪ್ಪಳ ಜಿಲ್ಲೆಗೆ ಮಹಿಳಾ ಪೊಲೀಸ್‌ ಠಾಣೆ ಮಂಜೂರಿಗೆ ವಿಳಂಬವಾಗಿದೆ. ಕೂಡಲೆ ಮಹಿಳಾ ಪೊಲೀಸ್‌ ಠಾಣೆ ಮಂಜೂರು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ರಾಜ್ಯದಲ್ಲಿ 16 ಸಾವಿರ ಪೊಲೀಸರನ್ನು ನೇಮಕ ಮಾಡಲಾಗುತ್ತದೆ. ಅಲ್ಲದೇ ರಾಜ್ಯದಲ್ಲಿ ರಿಕ್ರಿಯೆಷನ್‌ ಕ್ಲಬ್‌ಗಳಿಗೆ ಕೋರ್ಟ್‌ ಆದೇಶ ಇರುವುದರಿಂದ ಕಾನೂನುಬದ್ಧವಾಗಿ ನಡೆಸುತ್ತಿದ್ದಾರೆ ಎಂದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆ ಯತ್ನದ ಕಾರಣ ತಮಗೆ ತಿಳಿದಿಲ್ಲ. ಇದರ ಬಗ್ಗೆ ತನಿಖೆ ನಡೆದಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು. ಸಂಸದ ಸಂಗಣ್ಣ ಕರಡಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಸಾಗರ ಮುನವಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎಂ. ಸಿದ್ದರಾಮಸ್ವಾಮಿ, ಸಂತೋಷ ಕೆಲೋಜಿ, ಎಚ್‌. ಗಿರೇಗೌಡ, ಕಾಶಿನಾಥ ಚಿತ್ರಗಾರ, ಅಕ್ಕಿ ಚಂದ್ರಶೇಖರ, ನಗರಸಭಾ ಸದಸ್ಯ ವಾಸುದೇವ ನವಲಿ, ಅಜಯ್‌ ಬಿಚ್ಚಾಲಿ, ರಾಚಪ್ಪ ಸಿದ್ದಾಪುರ, ನವೀನ್‌ ಪಾಟೀಲ್‌ ಸೇರಿದಂತೆ ಇತರರು ಇದ್ದರು.