ಕೊರೋನಾತಂಕ: ಇ-ಪಾಸ್ ಇಲ್ಲದವರನ್ನು ತಡೆಯಿರಿ, ಸಚಿವ ಬೊಮ್ಮಾಯಿ
ಸರ್ಕಾರದ ಮಾರ್ಗಸೂಚಿ ಅನುಸರಿಸಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ| ಕೋವಿಡ್-19 ನಿಯಂತ್ರಣದಲ್ಲಿ ಗಡಿ ಭಾಗದ ಚೆಕ್‌ಪೋಸ್ಟ್ ಪಾತ್ರ ಪ್ರಮುಖ| ಸೇವಾ ಸಿಂಧು ಮೂಲಕ ಇ-ಪಾಸ್ ಪಡೆದುಕೊಂಡು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಲಾಗುತ್ತಿದೆ|
ಬೆಳಗಾವಿ(ಮೇ.31): ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲೇ ಅತಿ ಹೆಚ್ಚು ಸೋಂಕು ಕಂಡುಬಂದಿದೆ. ಇದು ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇ-ಪಾಸ್ ಇಲ್ಲದೆ ಬರುತ್ತಿರುವವರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲರನ್ನೂ ತಪಾಸಣೆ ನಡೆಸಿ ಅಗತ್ಯ ಎನಿಸಿದಲ್ಲಿ ಕ್ವಾರಂಟೈನ್ ಮಾಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಬಳಿ ಇರುವ ಅಂತಾರಾಜ್ಯ ಚೆಕ್‌ಪೋಸ್ಟ್‌ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್-19 ನಿಯಂತ್ರಣದಲ್ಲಿ ಗಡಿ ಭಾಗದ ಚೆಕ್‌ಪೋಸ್ಟ್ ಪಾತ್ರ ಪ್ರಮುಖವಾಗಿದೆ. ಸೇವಾ ಸಿಂಧು ಮೂಲಕ ಇ-ಪಾಸ್ ಪಡೆದುಕೊಂಡು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಲಾಗುತ್ತಿದೆ. ಕಳೆದ ವಾರದಿಂದ ಇ-ಪಾಸ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸಲಾಗುವುದು ಎಂದರು.
ಕಮಲ ಪಾಳಯದಲ್ಲಿ ಅಸಮಾಧಾನ: 'ವಲಸಿಗರಿಂದ ಮೂಲ ಬಿಜೆಪಿಗರಿಗೆ ಅನ್ಯಾಯ, ಜಾರಕಿಹೊಳಿ
ಅಂತಾರಾಜ್ಯ ಗಡಿ ಚೆಕ್‌ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿರುವವರು ಯಾವುದೇ ಒತ್ತಡ ಅಥವಾ ಶಿಫಾರಸಿಗೆ ಮಣಿಯದೇ ಕಾರ್ಯನಿರ್ವಹಿಸಬೇಕು. ಪೊಲೀಸ್, ಆರೋಗ್ಯ ಸೇರಿದಂತೆ ಕೊರೋನಾ ವಾರಿಯರ್ಸ್‌ಗಳಿಗೂ ಸೋಂಕು ಕಂಡುಬರುತ್ತಿರುವುದರಿಂದ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.