ಹಾವೇರಿ(ಏ.11): ರಾಜ್ಯದಲ್ಲಿ ಈಗಾಗಲೇ 2 ತಿಂಗಳ ಪಡಿತರ ಸಾಮಗ್ರಿಯನ್ನು ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ರೇಶನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರಿಗೂ ಪಡಿತರ ಸಾಮಗ್ರಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ 3ನೇ ಹಂತಕ್ಕೆ ತಲುಪದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲು ಸೂಚಿಸಲಾಗಿದೆ. ದುಡಿಯುವ ವರ್ಗದ ಕಾರ್ಮಿಕರಿಗೆ ಜೀವನ ನಿರ್ವಹಣೆ ಕಷ್ಟವಾಗಿದ್ದು, ಸೂಕ್ತ ಪರಿಹಾರಕ್ಕೆ ಚಿಂತಿಸಲಾಗಿದೆ. ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಹೆಚ್ಚುವರಿ ಅವಧಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಹೆಚ್ಚುವರಿ ಭತ್ಯೆ ನೀಡಲು ಚಿಂತಿಸಲಾಗಿದೆ ಎಂದರು.

ಇರುವುದೊಂದೇ ರೇಷನ್‌ ಅಂಗಡಿ: 1500 ಕಾರ್ಡುದಾರರು!

ಕೊರೋನಾ ತುರ್ತು ಚಿಕಿತ್ಸೆಗಾಗಿ ಕೇಂದ್ರೀಕೃತ ಆ್ಯಕ್ಸಿಜನ್‌ ಪೂರೈಕೆಯಾಗುವಂತೆ ಜಿಲ್ಲಾ ಕೇಂದ್ರದಲ್ಲಿ 40 ಹಾಸಿಗೆ ಸೌಲಭ್ಯ ಹಾಗೂ ಪ್ರತಿ ತಾಲೂಕಿನಲ್ಲಿ ಕನಿಷ್ಠ 5 ಹಾಸಿಗೆ ಸೌಲಭ್ಯವಿರುವ ವಾರ್ಡ್‌ಗಳನ್ನು ಸಿದ್ಧಪಡಿಸಿಕೊಳ್ಳಲು ಸೂಚಿಸಲಾಗಿದೆ. ಈಗಾಗಲೇ 550 ಪಿಪಿಇ ಕಿಟ್‌ಗಳು, 10500 ಎನ್‌-95 ಮಾಸ್ಕ್‌, 1 ಲಕ್ಷ ಥ್ರೀ ಲೇಯರ್‌ ಮಾಸ್ಕ್‌ ಹಾಗೂ ಅಗತ್ಯ ಔಷಧಿಗಳು ಬಂದಿವೆ. ಖಾಲಿ ಇರುವ ವೈದ್ಯಕೀಯ ಹಾಗೂ ಅರೇ ವೈದ್ಯಕೀಯ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲು ಆದೇಶಿಸಲಾಗಿದೆ ಎಂದರು.