ಹಾವೇರಿ(ನ.02): ಮುಂದಿನ ಚುನಾವಣೆಯಲ್ಲೂ ಬಿ.ಎಸ್‌. ಯಡಿಯೂರಪ್ಪ ಅವರೇ ನೇತೃತ್ವ ವಹಿಸಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಮಾತನಾಡುವವರಿಗೆ ತಿರುಗೇಟು ನೀಡಿದ್ದಾರೆ.

ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಈಗಾಗಲೇ ಹೈಕಮಾಂಡ್‌, ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮುಗಿದ ವಿಚಾರ. ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಕಳೆದ ಬಾರಿ ಚುನಾವಣೆ ನಡೆದು ಅಧಿಕಾರಕ್ಕೆ ಬಂದಾಗಿದೆ. ಈ ಅವಧಿಯಲ್ಲಿ ಅವರು ಸಂಪೂರ್ಣವಾಗಿ ಮುಖ್ಯಮಂತ್ರಿಯಾಗಿಯೇ ಆಗಿರುತ್ತಾರೆ. ಮುಂದಿನ ಚುನಾವಣೆಯ ನೇತೃತ್ವವನ್ನು ಯಡಿಯೂರಪ್ಪ ಅವರೇ ವಹಿಸುತ್ತಾರೆ. ಈ ಕುರಿತು ತೀರ್ಮಾನವೂ ಆಗಿದೆ ಎಂದು ಅವರು ಹೇಳಿದರು.

ಸುಳ್ಳು ಹೇಳುತ್ತಿರುವ ಜಯಚಂದ್ರ:

ಶಿರಾ ಮತ್ತು ಆರ್‌.ಆರ್‌. ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಅಂತರದಲ್ಲಿ ಗೆಲ್ಲಲಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವರ್ಚಸ್ಸು ಮತ್ತು ಅವರ ಕೈ ಬಲಪಡಿಸುವ ಕೆಲಸವನ್ನು ಮತದಾರರು ಮಾಡುತ್ತಾರೆ ಎಂಬ ಭರವಸೆಯಿದೆ. ಶಿರಾ ಕ್ಷೇತ್ರದಲ್ಲಿ ಮಡ್ಲೂರ ಕೆರೆಯ ವಿಚಾರ ಹೆಚ್ಚಿನ ಚರ್ಚೆಯಾಗುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು ನಾನೇ ಆ ಕೆರೆಗೆ ನೀರು ತಂದಿರುವೆ ಎಂದು ದಶಕದಿಂದ ಹೇಳುತ್ತಿದ್ದಾರೆ. ಆದರೆ, ಅವರು ಸಚಿವರಾಗಿದ್ದರೂ ನೀರು ತರಲು ಆಗಿಲ್ಲ. ಸತ್ಯಾಂಶವೆಂದರೆ, ನಾನು 2008ರಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ತಳಂಬೆಳ ಕೆರೆಯಿಂದ ಮಡ್ಲೂರ ಕೆರೆಗೆ 0.9 ಟಿಎಂಸಿ ನೀರು ಹಂಚಿಕೆ ಮಾಡಿದ್ದು, ಅದು ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ. ಆನಂತರ . 60 ಕೋಟಿ ವೆಚ್ಚದಲ್ಲಿ 10 ಕಿಮೀ ಕಾಲುವೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕೇಂದ್ರ ಸರ್ಕಾರ ನಮ್ಮ ರಾಜ್ಯದ ಪಾಲಿನ ನೀರನ್ನು ನಮಗೆ ಕೊಟ್ಟಿದೆ. ಬರಪೀಡಿತವಾಗಿರುವ ಶಿರಾ ಕ್ಷೇತ್ರಕ್ಕೆ ಭದ್ರಾ ಮೇಲ್ದಂಡೆ ಮೂಲಕ ನೀರು ತರಲು ನಮ್ಮ ಸರ್ಕಾರ ಪ್ರಯತ್ನಿಸಿದೆ. ಆ ಬದ್ಧತೆಯಿಂದ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್‌ ಹಾಗೂ ನಂತರದ ಮೈತ್ರಿ ಸರ್ಕಾರದ 7 ವರ್ಷಗಳ ಅವಧಿಯಲ್ಲಿ ಶಿರಾಕ್ಕೆ ನೀರು ಕೊಡುವ ಕೆಲಸ ಆಗಿಲ್ಲ. ಜಯಚಂದ್ರ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರು.

'ವಾಮಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಹೆಚ್ಚು ದಿನ ಮುಂದುವರಿಯುವುದಿಲ್ಲ'

ಗಡಿಭಾಗದಲ್ಲಿ ಮತ್ತೆ ಎಂಇಎಸ್‌ ಪುಂಡಾಟಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರಾಳ ದಿನಾಚರಣೆಗೆ ಅವಕಾಶ ನೀಡದಂತೆ ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ. ಕೊರೋನಾ ಹಿನ್ನೆಲೆಯಲ್ಲಿ ರಾಜ್ಯೋತ್ಸವವನ್ನೇ ಸರಳವಾಗಿ ಆಚರಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಪುಂಡಾಟಿಕೆಗೆ ಅವಕಾಶ ನೀಡದಂತೆ ಸೂಚಿಸಿದ್ದೇನೆ ಎಂದರು.

ಹಾವೇರಿಯಲ್ಲೇ ಸಾಹಿತ್ಯ ಸಮ್ಮೇಳನ:

ಹಾವೇರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂಬ ತೀರ್ಮಾನ ಈಗಾಗಲೇ ಆಗಿದೆ. ಅದರಂತೆ ಸಮ್ಮೇಳನ ನಡೆಯುತ್ತದೆ. ಆದರೆ, ಕೊರೋನಾ ಇರುವುದರಿಂದ ಯಾವ ದಿನಾಂಕ ನಿಗದಿ ಮಾಡಬೇಕು ಎಂಬ ಕುರಿತು ಕಸಾಪ ಅಧ್ಯಕ್ಷರು, ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಡೆಸಿ ತೀರ್ಮಾನಿಸಲಾಗುವುದು. ಸೋಂಕು ಇನ್ನಷ್ಟು ಕಡಿಮೆಯಾದ ಆನಂತರ ಅಂದಾಜು ಎರಡರಿಂದ ಮೂರು ತಿಂಗಳಲ್ಲಿ ದಿನಾಂಕ ನಿಗದಿ ಮಾಡುತ್ತೇವೆ. ಹಾವೇರಿಯಲ್ಲಿಯೇ ಈ ಸಾರಿಯ ಸಾಹಿತ್ಯ ಸಮ್ಮೇಳನ ನಡೆದೇ ನಡೆಯುತ್ತದೆ. ಈ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.