ಬೆಳಗಾವಿ[ಜ.22]: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಪೊಲೀಸರಿಗೆ ಶರಣಾಗಿದ್ದಾನೆ. ಈತ  ಕೆಲಸ ಸಿಕ್ಕಿಲ್ಲವೆಂದು ಮಾನಸಿಕವಾಗಿ ನೊಂದಿದ್ದನು ಎಂದು ತಿಳಿದು ಬಂದಿದೆ. ತನಿಖೆಯ ಸಂಬಂಧ ಮಂಗಳೂರು ಪೊಲೀಸರು 3 ತಂಡಗಳನ್ನ ರಚನೆ ಮಾಡಿದ್ದಾರೆ. ಆರೋಪಿ ಆದಿತ್ಯರಾವ್‌ಗೆ ಈಗಾಗಲೇ ಎರಡು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಎಲ್ಲ ಆಯಾಮದಿಂದ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಎಚ್‌ಡಿಕೆಗೆ ಪೊಲೀಸರ ಮೇಲೆ ಡೌಟು; ಎಚ್‌ಡಿಕೆ ಸಿಎಂ ಆಗಿದ್ರಾ ಎಂದು ಗೃಹಮಂತ್ರಿಗೆ ಡೌಟು!

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿಯನ್ನ ಮಂಗಳೂರು ಪೊಲೀಸರ ವಶಕ್ಕೆ ನೀಡಲಾಗುತ್ತದೆ.  ಸಿಕ್ಕಿರುವ ವಸ್ತುಗಳನ್ನ FSLಗೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ಎಲ್ಲಾ ಗೊತ್ತಾಗಲಿದೆ. NSG ಎಲ್ಲಾ ವಿವರಗಳನ್ನು ಮಂಗಳೂರಿನಲ್ಲಿ ಪಡೆದುಕೊಂಡಿದೆ. ಪ್ರಕರಣದ ಹಿನ್ನೆಲೆಯನ್ನ ಪತ್ತೆ ಹಚ್ಚುವ ಕೆಲಸ ನಡೆಯಲಿದೆ ಎಂದು ಹೇಳಿದ್ದಾರೆ. 

ಈ ಪ್ರಕರಣದ ಸಂಬಂಧ ವಿರೋಧ ಪಕ್ಷದವರು ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ.  ನಡೆದ ಎಲ್ಲ ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.  ನಮ್ಮ ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಮಂಗಳೂರು ಘಟನೆಯಲ್ಲಿ ರಾಜಕೀಯ ನಡೆಯುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಓಲೈಕೆಗೆ ಪೈಪೋಟಿ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿಯ ಬ್ರೈನ್‌ ಮ್ಯಾಪಿಂಗ್‌ ಅಗತ್ಯ: ಬಿಜೆಪಿ

ರಾಜಕೀಯ ಮಾಡುವ ಭರಾಟೆಯಲ್ಲಿ ದೇಶದ್ರೋಹಿ ಕೃತ್ಯಗಳಿಗೆ ಪ್ರಚೋದನೆ ಕೊಡಬಾರದು. ಮಾಜಿ ಸಿಎಂ ಕುಮಾರಸ್ವಾಮಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಕುಮಾರಸ್ವಾಮಿ ಅವರಿಗೆ ಇಡೀ ರಾಜ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಸರಿನಾ ಅಂತ ಕೇಳುತ್ತಿದ್ದಾರೆ ಎಂದಿದ್ದಾರೆ. 

ಸ್ಫೋಟಕ ವಸ್ತುಗಳನ್ನ ಪಡೆದುಕೊಂಡ ಬಗ್ಗೆ ತನಿಖೆ ನಡೆಯುತ್ತಿದೆ. ಮಂಗಳೂರು ಘಟನೆ ಬಳಿಕ ಮುನ್ನೆಚ್ಚರಿಕೆ ಕ್ರಮಕೈಕೊಂಡಿದ್ದೇವೆ. ಏರ್ಪೋರ್ಟ್ ಹತ್ತಿರ ಅಗತ್ಯ ಭದ್ರತೆ ಮತ್ತು ಅಗತ್ಯ ಬಾಂಬ್ ಸ್ಕ್ವಾಡ್ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.