ಮಂಗಳೂರು(ಜ.22): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾದ ಘಟನೆ ಕುರಿತು ಪೊಲೀಸರ ವಿರುದ್ಧ ಸಂಶಯದ ಹೇಳಿಕೆ ನೀಡಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ನಡವಳಿಕೆಗೆ ದ.ಕ. ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇತ್ತೀಚೆಗೆ ಈ ರೀತಿ ಹೇಳಿಕೆ ನೀಡುತ್ತಿರುವ ಕುಮಾರಸ್ವಾಮಿ ಅವರನ್ನು ಬ್ರೈನ್‌ ಮ್ಯಾಪಿಂಗ್‌ಗೆ ಒಳಪಡಿಸಬೇಕು ಎಂದು ಜಿಲ್ಲಾ ಬಿಜೆಪಿ ನಿರ್ಗಮನ ಅಧ್ಯಕ್ಷ, ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿಯವರು ಪೊಲೀಸರ ನೈತಿಕತೆಯನ್ನೇ ಪ್ರಶ್ನಿಸುತ್ತಿದ್ದಾರೆ. ಬಾಂಬ್‌ನ್ನು ಪತ್ತೆ ಮಾಡುವ ಮೂಲಕ ಸಂಭಾವ್ಯ ಜೀವಹಾನಿ ಅನಾಹುತವನ್ನು ಪೊಲೀಸರು ತಪ್ಪಿಸಿದ್ದಾರೆ. ಆದರೆ ಇದನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಚ್‌ಡಿಕೆಗೆ ಪೊಲೀಸರ ಮೇಲೆ ಡೌಟು; ಎಚ್‌ಡಿಕೆ ಸಿಎಂ ಆಗಿದ್ರಾ ಎಂದು ಗೃಹಮಂತ್ರಿಗೆ ಡೌಟು!

ಬಾಂಬ್‌ ಪತ್ತೆ ಘಟನೆ ಕುರಿತು ಪೊಲೀಸರು ಕೂಲಂಕಷ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಾಂಬ್‌ ಪತ್ತೆ ಹಚ್ಚಿದ ಪೊಲೀಸರ ಕ್ರಮ ಶ್ಲಾಘನೀಯ ಎಂದಿದ್ದಾರೆ.

ಶಾಸಕರಾದ ವೇದವ್ಯಾಸ ಕಾಮತ್‌, ಡಾ.ಭರತ್‌ ಶೆಟ್ಟಿ, ಮುಖಂಡರಾದ ಮೋನಪ್ಪ ಭಂಡಾರಿ, ನಿಯೋಜಿತ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಸುಧೀರ್‌ ಶೆಟ್ಟಿಕಣ್ಣೂರು ಇದ್ದರು.

27ರಂದು ರಾಜನಾಥ್‌ ಸಿಂಗ್‌ ಮಂಗಳೂರಿಗೆ

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ನೇತೃತ್ವದಲ್ಲಿ ಜ.27ರಂದು ಮಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಭಾಗವಹಿಸಲಿದ್ದಾರೆ.

ಸಂಜೆ 3ರಿಂದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅವಿಭಜಿತ ದ.ಕ. ಜಿಲ್ಲೆಯ 12 ಮಂದಿ ಶಾಸಕರು, ಸ್ಥಳೀಯಾಡಳಿತ ಬಿಜೆಪಿ ಸದಸ್ಯರು, ದ.ಕ. ಜಿಲ್ಲೆಯ 1,861 ಹಾಗೂ ಉಡುಪಿ ಜಿಲ್ಲೆಯ 1 ಸಾವಿರ ಬೂತ್‌ಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. ಪ್ರತಿ ಬೂತ್‌ನಿಂದ ತಲಾ 100 ಮಂದಿಯಂತೆ ಸುಮಾರು 2 ಲಕ್ಷದಷ್ಟುಮಂದಿ ಪಾಲ್ಗೊಳ್ಳಲಿದ್ದಾರೆ. ಗೋಲ್ಟ್‌ ಫಿಂಚ್‌ ಸಿಟಿಯ 108 ಎಕರೆ ಮೈದಾನದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ ಎಂದಿದ್ದಾರೆ.