Asianet Suvarna News Asianet Suvarna News

Chikkamagaluru: ದತ್ತಪೀಠದಲ್ಲಿ 2 ದಶಕಗಳ ಬಳಿಕ ಹೋಮ

  • ದತ್ತಪೀಠದಲ್ಲಿ 2 ದಶಕಗಳ ಬಳಿಕ ಹೋಮ
  • ದತ್ತ ಜಯಂತಿ ಉತ್ಸವಕ್ಕೆ ಶಾಂತಿಯುತ ತೆರೆ
  • ಗುಹೆಯೊಳಗೆ ದತ್ತಪಾದುಕೆಗಳಿಗೆ ಹಿಂದೂ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಕೆ
  •  ರಾಜ್ಯದ ವಿವಿಧೆಡೆಯಿಂದ ದತ್ತಪೀಠಕ್ಕೆ ಆಗಮಿಸಿದ್ದ ಸಾವಿರಾರು ದತ್ತಮಾಲಾಧಾರಿಗಳು
Homa was performed at Dattapeeth after two decades at chikkamagaluru rav
Author
First Published Dec 9, 2022, 7:39 AM IST

ಚಿಕ್ಕಮಗಳೂರು (ಡಿ.8) : ಜಿಲ್ಲೆಯ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದತ್ತಪೀಠದಲ್ಲಿ ಗುರುವಾರ ನಡೆದ ದತ್ತ ಜಯಂತಿ ಉತ್ಸವದಲ್ಲಿ ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ದತ್ತಭಕ್ತರು ಬೆಳಗ್ಗೆ ಗುಹಾಂತರ ದೇವಾಲಯದ ಪೀಠದ ಗರ್ಭಗುಡಿಯಲ್ಲಿ ದತ್ತ ಪಾದುಕೆಗೆ ಮಹನ್ಯಾಸ ಪೂರ್ವಕ ರುದ್ರಾಭಿಷೇಕ, ಅರ್ಚನೆ, ಕಲಾನ್ಯಾಸ, ಆವಾಹನೆ, ಆರಾಧನೆ, ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ವಿಶೇಷ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ನೇಮಿಸಿರುವ ಅರ್ಚಕರಾದ ಡಾ.ಸಂದೀಪ್‌ ಶರ್ಮ ಹಾಗೂ ಶೃಂಗೇರಿ ಕೆ.ಶ್ರೀಧರ್‌ ಭಟ್‌ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಶ್ರೀ ದತ್ತಾತ್ರೇಯ ಮೂಲಮಂತ್ರ ಹೋಮ, ಸುದರ್ಶನ ಹೋಮವನ್ನು ಸಾಂಗವಾಗಿ ನೆರವೇರಿಸಿದರು.

ದತ್ತಜಯಂತಿಗೆ ಜನರನ್ನು ಆಹ್ವಾನಿಸಲು ಸಂಘಪರಿವಾರದ ಕಾರ್ಯಕರ್ತರಿಂದ ಬೈಕ್ ರ್‍ಯಾಲಿ

ಬೆಂಗಳೂರು, ತುಮಕೂರು, ಚಿತ್ರದುರ್ಗ, ಕೋಲಾರ ಸೇರಿದಂತೆ ರಾಜ್ಯ ಹಲವು ಜಿಲ್ಲೆಗಳಿಂದ ದತ್ತಮಾಲಾಧಾರಿಗಳು ಆಗಮಿಸಿದ್ದರು. ಆದರೆ, ಪ್ರಮುಖವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಪ್ರತಿ ವರ್ಷ ಬರುತ್ತಿದ್ದ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿತು. ಈ ಹಿಂದೆ ಬೆಳ್ಳಂಬೆಳಿಗ್ಗೆ ಭಕ್ತರು ದತ್ತಪೀಠಕ್ಕೆ ತೆರಳುತ್ತಿದ್ದರು, ಆದರೆ, ಈ ಬಾರಿ ಮಧ್ಯಾಹ್ನದವರೆಗೆ ಕೇವಲ 5 ಸಾವಿರ ಭಕ್ತರಷ್ಟೇ ಪೀಠಕ್ಕೆ ಭೇಟಿ ನೀಡಿದ್ದರು. ಈ ಸಂಖ್ಯೆ ಮಧ್ಯಾಹ್ನದ ವೇಳೆಗೆ ಹೆಚ್ಚಾಗಿದ್ದು, ಸಂಜೆಯ ವೇಳೆಗೆ ಸುಮಾರು 25 ಸಾವಿರ ಭಕ್ತರು ದತ್ತಪೀಠಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ಆ ಆರ್ಚಕರಿಂದಲೇ ಪಾದುಕೆಗಳಿಗೆ ಪೂಜೆ ಸಲ್ಲಿಸಬೇಕು, ದತ್ತಪೀಠದ ಪರಿಮಿತಿಯೊಳಗೆ ಹೋಮ, ಹವನ ನಡೆಸಬೇಕೆಂಬ ಸಂಘ ಪರಿವಾರದ ಈ ಮೂರು ಬೇಡಿಕೆಗಳು ಈ ಬಾರಿಯ ದತ್ತಜಯಂತಿಯಲ್ಲಿ ಈಡೇರಿದೆ. ದತ್ತಪೀಠದ ಹೊರ ವಲಯದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಶೆಡ್‌ನಲ್ಲಿ ಹೋಮ, ಹವನ, ಧಾರ್ಮಿಕ ಸಭೆಗಳು ನಡೆಯುತ್ತಿದ್ದವು. ಆದರೆ, ಈ ಸ್ಥಳ ಅಪವಿತ್ರವಾಗಿದೆ. ದತ್ತಪೀಠದ ಪರಿಮಿತಿಯೊಳಗೆ ಇರುವ ತುಳಸಿ ಕಟ್ಟೆಯಲ್ಲಿ ಹೋಮ ನಡೆಸಲು ಅವಕಾಶ ನೀಡಬೇಕೆಂಬ ಬಜರಂಗದಳದ ಮನವಿಗೂ ಸರ್ಕಾರ ಸ್ಪಂದಿಸಿ ಅವಕಾಶ ನೀಡಿದ್ದರಿಂದ ಶ್ರೀ ಗುರುದತ್ತಾತ್ರೇಯ ಪೀಠ ಆವರಣದ ತುಳಸಿಕಟ್ಟೆಬಳಿಯೇ ಹಿಂದೂ ಅರ್ಚಕರ ಸಮ್ಮುಖದಲ್ಲಿ ಹೋಮ ಹವನ ನಡೆಯಿತು. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌, ಶಾಸಕ ಸಿ.ಟಿ.ರವಿ, ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಪಾಲ್ಗೊಂಡು ಸಂಕಲ್ಪ ಮಾಡಿದರು.

2001ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಇದೇ ಸ್ಥಳದಲ್ಲಿ ದತ್ತಜಯಂತಿ ಸಂದರ್ಭದಲ್ಲಿ ಹೋಮ ನಡೆದಿತ್ತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಬಿ. ಚಂದ್ರೇಗೌಡ ಭಾಗವಹಿಸಿದ್ದರು. ಅನಂತರದಲ್ಲಿ ಇಲ್ಲಿ ಹೋಮ ನಡೆಸುವುದನ್ನು ಕೈ ಬಿಡಲಾಗಿತ್ತು. 20 ವರ್ಷಗಳ ಬಳಿಕ ಪೀಠದ ಆವರಣದಲ್ಲಿ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಉಪಸ್ಥಿತಿಯಲ್ಲಿ ಹಿಂದೂ ಪದ್ಧತಿಯಂತೆ ಹೋಮ, ಹವನ ಪೂರ್ಣಾಹುತಿ ನೆರವೇರಿದ್ದು ವಿಶೇಷವಾಗಿತ್ತು.

ಸಚಿವ ಭೈರತಿ ಬಸವರಾಜ್‌, ಶಾಸಕ ಸಿ.ಟಿ.ರವಿ ಯಜ್ಞಯಾಗಾದಿಗಳಲ್ಲಿ ಪಾಲ್ಗೊಂಡು ನಿರಂತರವಾಗಿ ಹಿಂದೂ ಸಂಪ್ರದಾಯದಲ್ಲೆ ಪೂಜಾ ಪದ್ಧತಿಗಳು ನಡೆಯಬೇಕೆಂದು ಮಹಾಸಂಕಲ್ಪ ಮಾಡಿದರು. ಪ್ರದೀಪ್‌ ಭಟ್‌, ಪ್ರವೀಣ್‌ ಖಾಂಡ್ಯ, ಸುಮಂತ್‌ ನೇತೃತ್ವದಲ್ಲಿ ಹೋಮ ನೆರವೇರಿಸಿದರು.

ಯಳನಾಡು ಶ್ರೀ ಜ್ಞಾನಪ್ರಭು ರಾಜದೇಶೀಕೇಂದ್ರ ಸ್ವಾಮೀಜಿ, ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿ, ಬೀರೂರು ಶ್ರೀ ರಂಭಾಪುರಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ , ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ್‌, ಅಖಿಲ ಭಾರತ ವಿಎಚ್‌ಪಿ ಸಹ ಕಾರ್ಯದರ್ಶಿ ಅಂಬರೀಶ್‌, ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಸಿಡಿಎ ಅಧ್ಯಕ್ಷ ಸಿ.ಆನಂದ್‌, ಜಿಪಂ ಸಿಇಒ ಜಿ.ಪ್ರಭು, ಭಾಷಾ, ದೀಪಕ್‌ ದೊಡ್ಡಯ್ಯ, ನರೇಂದ್ರ ಪಾಲ್ಗೊಂಡಿದ್ದರು.

ಕಾಲ್ನಡಿಗೆ:

ಶಾಸಕರಾದ ಸಿ.ಟಿ.ರವಿ, ಡಿ.ಎಸ್‌.ಸುರೇಶ್‌, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಎಚ್‌.ಡಿ.ತಮ್ಮಯ್ಯ ಸೇರಿದಂತೆ ಹಲವರು ಇರುಮುಡಿ ಹೊತ್ತು ಹೊನ್ನಮ್ಮನ ಹಳ್ಳದಿಂದ ದತ್ತನಾಮ ಸ್ಮರಣೆಯೊಂದಿಗೆ ಭಜನೆ ಮಾಡುತ್ತಾ ದತ್ತಪೀಠಕ್ಕೆ ತೆರಳಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತ ಸಮೂಹ ಸರದಿ ಸಾಲಿನಲ್ಲಿ ಸಾಗಿ ಗುಹಾಂತರ ದೇವಾಲಯದ ಗರ್ಭಗುಡಿಯಲ್ಲಿದ್ದ ದತ್ತ ಪಾದುಕೆ ದರ್ಶನ ಪಡೆದರು. ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಬೆಳ್ಳಿಪ್ರಕಾಶ್‌, ಸಿಡಿಎ ಅಧ್ಯಕ್ಷ ಸಿ.ಆನಂದ್‌, ಉಪ ವಿಭಾಗಾಧಿಕಾರಿ ರಾಜೇಶ್‌, ತಹಸೀಲ್ದಾರ್‌ ವಿನಾಯಕ್‌ ಸಾಗರ್‌, ಸಂಘ ಪರಿವಾರದ ಆರ್‌.ಡಿ.ಮಹೇಂದ್ರ, ಯೋಗೀಶ್‌ ರಾಜ್‌ ಅರಸ್‌, ಶಶಾಂಕ್‌ ಹಿಂದೂ , ಅಮಿತ್‌ಗೌಡ, ಶ್ಯಾಮ್‌ ವಿ. ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ ಇದ್ದರು.\

ಚಿಕ್ಕಮಗಳೂರು: ದತ್ತಜಯಂತಿ ಉತ್ಸವಕ್ಕೆ ಇಂದು ಚಾಲನೆ; ಬಿಗಿ ಪೊಲೀಸ್ ಬಂದೋಬಸ್ತ್

ಟ್ರಾಫಿಕ್‌ ಜಾಮ್‌

ಮುಳ್ಳಯ್ಯನಗಿರಿ ಕ್ರಾಸ್‌ನಿಂದ ಕವಿಕಲ್‌ ಗಂಡಿ, ಹೊನ್ನಮ್ಮನಹಳ್ಳದವರೆಗೂ ಸಂಪೂರ್ಣ ಟ್ರಾಫಿಕ್‌ ಜಾಮ್‌ ಆಗಿ ಪೊಲೀಸರು ಹರಸಾಹಸ ಪಟ್ಟು ನಿಯಂತ್ರಿಸಿ, ಭಕ್ತರು ಪೀಠಕ್ಕೆ ತೆರಳಲು ಸುಗಮ ಹಾದಿ ಕಲ್ಪಿಸಿದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳು ಸಾಗಲಾಗಷ್ಟುದಟ್ಟಣೆಯಾಗಿ ವಾಹನ ಸವಾರರು ಪರದಾಡಿದ ದೃಶ್ಯ ಕಂಡುಬಂತು. ಸಂಚಾರ ದಟ್ಟಣೆ ನಿಯಂತ್ರಿಸಲು ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಾರ್ಯಕರ್ತರು ಹಲವು ಕಿಮೀ ದೂರ ನಡೆದುಕೊಂಡೆ ಸಾಗುತ್ತ ಭಕ್ತರಿಗೆ ಪೀಠಕ್ಕೆ ತೆರಳಲು ಸಹಕರಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ನೇತೃತ್ವದಲ್ಲಿ ನಗರ ಸೇರಿದಂತೆ ಕೈಮರದಿಂದ ಪೀಠದವರೆಗೂ ಬಿಗಿ ಚೆಕ್‌ ಪೋಸ್ಟ್‌ಗಳನ್ನು ತೆರೆದು ತಪಾಸಣೆ ಮೂಲಕ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ಒಟ್ಟಾರೆ ಮೂರು ದಿನಗಳ ದತ್ತಜಯಂತಿಗೆ ಶಾಂತಿಯುತ ತೆರೆಬಿದ್ದಿತು.

Follow Us:
Download App:
  • android
  • ios