ದತ್ತಜಯಂತಿಗೆ ಜನರನ್ನು ಆಹ್ವಾನಿಸಲು ಸಂಘಪರಿವಾರದ ಕಾರ್ಯಕರ್ತರಿಂದ ಬೈಕ್ ರ್‍ಯಾಲಿ
ರಾಜ್ಯದ ವಿವಾದಿತ ಕೇಂದ್ರವಾದ ಚಿಕ್ಕಮಗಳೂರಿನ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ನಡೆಯುವ ದತ್ತಜಯಂತಿಗೆ ಸಾರ್ವಜನಿಕರನ್ನು ಆಹ್ವಾನಸಲು ಸಂಘಪರಿವಾರದಿಂದ ಬೈಕ್ ರ್‍ಯಾಲಿ ನಡೆಯಿತು.
ಚಿಕ್ಕಮಗಳೂರು (ಡಿ.3): ರಾಜ್ಯದ ವಿವಾದಿತ ಕೇಂದ್ರವಾದ ಚಿಕ್ಕಮಗಳೂರಿನ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ನಡೆಯುವ ದತ್ತಜಯಂತಿಗೆ ಸಾರ್ವಜನಿಕರನ್ನು ಆಹ್ವಾನಸಲು ಸಂಘಪರಿವಾರದಿಂದ ಬೈಕ್ ರ್‍ಯಾಲಿ ನಡೆಯಿತು.ಇದೇ 6-7-8 ರಂದು ನಡೆಯುವ ದತ್ತಜಯಂತಿಯ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ದತ್ತಮಾಲಾಧಾರಿಗಳು ಬೃಹತ್ ಬೈಕ್ ರ್‍ಯಾಲಿ ನಡೆಸಿದರು. ಚಿಕ್ಕಮಗಳೂರು ನಗರದ ಲಂಚ್ ಹೋಂ ವೃತ್ತದ ಶ್ರೀರಾಮ ಮಂದಿರದಿಂದ ಆರಂಭವಾದ ಬೈಕ್ ರ್‍ಯಾಲಿ ಯಲ್ಲಿ ಸುಮಾರು 300ಕ್ಕೂ ಹೆಚ್ಚು ಬೈಕ್‍ಗಳು ಪಾಲ್ಗೊಂಡಿದ್ದವು. ನಗರದ ಎಂ.ಜಿ.ರಸ್ತೆ, ಐ.ಜಿ.ರೋಡ್, ಬಸವನಹಳ್ಳಿ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ದತ್ತಪೀಠದ ಪರ ಘೋಷಣೆ ಕೂಗಿದರು. ಡಿಸೆಂಬರ್ 6ರಂದು ನಗರದಲ್ಲಿ ಸಾವಿರಾರು ಮಹಿಳೆಯರಿಂದ ಬೃಹತ್ ಅನಸೂಯ ಜಯಂತಿ ನಡೆದರೆ, 7ರಂದು ನಗರದಲ್ಲಿ 50 ಸಾವಿರಕ್ಕೂ ಅಧಿಕ ಜನರಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, 8ರಂದು ರಾಜ್ಯದ ವಿವಿಧ ಭಾಗಗಳಿಂದ ಬರುವ ಸಾವಿರಾರು ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದು ಪುನೀತರಾಗಲಿದ್ದಾರೆ. ಹಾಗಾಗಿ, ಇಂದು ದತ್ತಜಯಂತಿಯ ಪೂರ್ವಭಾವಿಯಾಗಿ ನೂರಾರು ಬೈಕ್‍ಗಳಲ್ಲಿ ಸರಿಸುಮಾರು ಸಾವಿರಕ್ಕೂ ಅಧಿಕ ದತ್ತಭಕ್ತರು, ಭಜರಂಗದಳ ಹಾಗೂ ವಿ.ಎಚ್.ಪಿ.ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿದ್ದಾರೆ.
ದತ್ತಪೀಠ ವ್ಯವಸ್ಥಾಪನಾ ಸಮಿತಿ ರದ್ದುಪಡಿಸಿ: ಎಸ್‌ಡಿಪಿಐ
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ರಚಿಸಿರುವ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಒಳಗೊಂಡ 8 ಜನರನ್ನು ಹೊಂದಿರುವ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಿಂದ ಎಂ.ಜಿ.ರಸ್ತೆಯ ಮೂಲಕ ಆಜಾದ್ ಪಾರ್ಕ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಪೂಜಾ ವಿಧಿವಿಧಾನಕ್ಕೆ ಸಂಬಂಧಿಸಿದಂತೆ ಹೈಕೋರ್ಚ್‌ನಲ್ಲಿ ಶಾಖಾದ್ರಿಯವರು ದಾವೆ ಹೂಡಿದ್ದಾರೆ. ಈ ಅರ್ಜಿ ಇನ್ನು ಇತ್ಯರ್ಥವಾಗಿಲ್ಲ, ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟು ರಚನೆ ಮಾಡಿರುವ 8 ಜನರು ಒಳಗೊಂಡ ವ್ಯವಸ್ಥಾಪನಾ ಸಮಿತಿಯಲ್ಲಿ ನಾಮಕಾವಸ್ಥೆಗೆ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಓರ್ವರನ್ನು ಸೇರಿಸಿಕೊಳ್ಳಲಾಗಿದೆ. ಇದು, ಸಮಂಜಸವಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೂಡಲೇ ಈ ಸಮಿತಿಯನ್ನು ರದ್ದುಪಡಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ಸಮಿತಿ ಯಾವುದೇ ತೀರ್ಮಾನ ತೆಗೆದುಕೊಂಡರೆ ಅದು ಜಾರಿಗೆ ತರಬಾರದು. ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದನ್ನು ಪಕ್ಷ ಖಂಡಿಸುತ್ತದೆ ಎಂದು ಹೇಳಲಾಗಿದೆ.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಗೌಸ್ ಮುನೀರ್, ಅಜ್ಮತ್ ಪಾಶಾ, ಗೌಸ್ ಮೊಹಿಯುದ್ದೀನ್, ಜಂಶಿದ್ ಖಾನ್, ಅಲ್ತಾಫ್ ಬಿಳಗೊಳ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
ಮಾಂಸಹಾರಕ್ಕೆ ನಿಷೇಧ: ಖಂಡನೆ
ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿ ಮಾಂಸಾಹಾರ ತಯಾರಿಗೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಕೂಡಲೇ ಈ ಆದೇಶವನ್ನು ಕೈ ಬಿಡಬೇಕೆಂದು ಬಾಬಾಬುಡನ್‌ಗಿರಿ ಸಮಿತಿ ಅಧ್ಯಕ್ಷ ಸಿರಾಜ್ ಹುಸೇನ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದ ಸಿರಾಜ್ ಹುಸೇನ್, ಹರಕೆ ತೀರಿಸಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಪ್ರತಿ ವರ್ಷ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಈ ಹಿಂದೆ ಇಲ್ಲಿ ಮಾಂಸಾಹಾರ ತಯಾರಿಸಲು ನಿಷೇಧ ಇರಲಿಲ್ಲ. ನ್ಯಾಯಾಲಯದ ಆದೇಶವೂ ಇಲ್ಲ, ಆದರೆ, ಜಿಲ್ಲಾಡಳಿತ ಅಡುಗೆ ತಯಾರಿಸಲು ನಿಷೇಧ ಹೇರಿದ್ದು ಸರಿಯಲ್ಲ ಎಂದರು.
ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ, ಸರ್ಕಾರದಿಂದ ಮಹತ್ವದ ಆದೇಶ
2004ರಲ್ಲಿ ಬಾಬಾಬುಡನ್‌ಗಿರಿ ಬಳಿ ಮಾಂಸದ ಅಂಗಡಿ ಇದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳು ಇವೆ. ಅದೇ ವರ್ಷ ಅಂದಿನ ಜಿಲ್ಲಾಧಿಕಾರಿ ಆಗಿದ್ದ ರಾಜೇಂದ್ರಕುಮಾರ್ ಕಟಾರಿ ಅವರು ಗಿರಿಪ್ರದೇಶದಿಂದ 200 ಮೀ. ದೂರದಲ್ಲಿ ಮಾಂಸದ ಅಂಗಡಿಯನ್ನು ಇಡಲು ಆದೇಶಿಸಿದ್ದರು ಎಂದು ತಿಳಿಸಿದರು.
ಬಾಬಾಬುಡನ್‌ಗಿರಿಯಲ್ಲಿ ಮಾಂಸಾಹಾರ ತಯಾರಿಕೆ ನಿಷೇಧಿಸಿ ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಒಂದುವೇಳೆ ಬಾಬಾಬುಡನ್ ಗಿರಿಯಲ್ಲಿ ಮಾಂಸಾಹಾರ ತಯಾರಿಕೆ ಮಾಡದಂತೆ ನ್ಯಾಯಾಲಯದ ಆದೇಶವಿದ್ದರೇ, ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ: ಆಡಳಿತ ಮಂಡಳಿ ರಚನೆಗೆ ವಿರೋಧ
ನಿತ್ಯ ಇಲ್ಲಿಗೆ ಆಗಮಿಸುವ ಭಕ್ತರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದು, ಭಕ್ತರಿಗೆ ತೊಂದರೆ ನೀಡದಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರು. ಮನವಿ ಸಲ್ಲಿಸಿದ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಸಮಿತಿಯ ಜಿಲ್ಲಾಧ್ಯಕ್ಷ ಜಂಶಿದ್ ಖಾನ್, ಅವರಂಗ್ ಇದ್ದರು.