ಬೆಂಗಳೂರು [ಮಾ.13]:  ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಎಲ್ಲಾ ಮಾದರಿಯ ಶಾಲೆಗಳಿಗೆ ಮಾ.13ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ.

ಪೂರ್ವ ಪ್ರಾಥಮಿಕ ತರಗತಿಯಿಂದ ಆರನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಕೂಡ ರದ್ದುಗೊಳಿಸಲಾಗಿದೆ. 6ರಿಂದ 10ನೇ ತರಗತಿಗಳಿಗೆ ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ. 6ರಿಂದ 10ನೇ ತರಗತಿ ಮಕ್ಕಳಿಗೂ ಶಾಲೆಗಳಿಗೆ ರಜೆ ನೀಡಲಾಗಿದ್ದು, ಪರೀಕ್ಷೆಗಳಿಗೆ ಮಾತ್ರ ಹಾಜರಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿರುವ ರಾಜ್ಯ ಪಠ್ಯಕ್ರಮ ಹಾಗೂ ಕೇಂದ್ರದ ಪಠ್ಯಕ್ರಮ ಬೋಧಿಸುವ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಸೇರಿದಂತೆ ಎಲ್ಲಾ ಮಾದರಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಬೇಸಿಗೆ ರಜೆ ಬಳಿಕ ಶಾಲೆಗಳನ್ನು ಪುನಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಮಹಾಮಾರಿ ಕರೋನಾಗೆ ಕರ್ನಾಟಕದಲ್ಲೇ ಮೊದಲ ಬಲಿ..ಎಚ್ಚರ ಎಚ್ಚರ..

ಈಗಾಗಲೇ ಪೂರ್ವ ಪ್ರಾಥಮಿಕ ತರಗತಿಗಳಿಂದ ಐದನೇ ತರಗತಿವರೆಗೆ ನೀಡಿದ್ದ ರಜೆಯನ್ನು ಆರನೇ ತರಗತಿವರೆಗೆ ವಿಸ್ತರಿಸಲಾಗಿದೆ. ಇದರ ಜತೆಗೆ ಪರೀಕ್ಷೆಗಳನ್ನು ಕೂಡ ರದ್ದುಗೊಳಿಸಲಾಗಿದೆ. ಎಲ್‌ಕೆಜಿ, ಯುಕೆಜಿ ಸೇರಿದಂತೆ 1ರಿಂದ 6ನೇ ತರಗತಿ ಮಕ್ಕಳಿಗೆ ಇಲ್ಲಿಯವರೆಗೆ ನಡೆಸಿರುವ ಮಧ್ಯವಾರ್ಷಿಕ, ಮಾಸಿಕ ಪರೀಕ್ಷೆಗಳು ಮತ್ತು ಕಲಿಕಾ ಪ್ರಗತಿ ಆಧರಿಸಿ ಶ್ರೇಣೀಕೃತ ಫಲಿತಾಂಶ ಪ್ರಕಟಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕು ಎಂದು ತಿಳಿಸಿದರು.

7ರಿಂದ 10ನೇ ತರಗತಿಗೆ ಪರೀಕ್ಷೆ:

ಇನ್ನು 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೂ ಶುಕ್ರವಾರದಿಂದಲೇ ಪರೀಕ್ಷಾ ಪೂರ್ವ ಸಿದ್ಧತಾ ರಜೆ (ಸ್ಟಡಿ ಲೀವ್‌) ಘೋಷಿಸಿ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಬೇಕು. ಅಲ್ಲದೆ, ಈಗಾಗಲೇ ನಿರ್ದೇಶನ ನೀಡಿರುವಂತೆ ಮಾ.23ರೊಳಗೆ 7ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ಣಗೊಳಿಸಿ ಬೇಸಿಗೆ ರಜೆ ನೀಡಬೇಕು. 10ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿತ ವೇಳಾಪಟ್ಟಿಯಂತೆ ಮಾ.27ರಿಂದ ಏ.9ರ ವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಸ್ಪಷ್ಟಪಡಿಸಿದರು.

ಉಳಿದ ಜಿಲ್ಲೆಗಳಿಗೆ ಅನ್ವಯವಾಗಲ್ಲ:

ಸರ್ಕಾರದ ಈ ಆದೇಶ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಉಳಿದ ಜಿಲ್ಲೆಗಳಿಗೆ ಈಗಾಗಲೇ ನಿರ್ದೇಶನ ನೀಡಿರುವಂತೆ 1ರಿಂದ 6 ನೇ ತರಗತಿಗೆ ಮಾ.10 ರಿಂದ 16, 7ನೇ ತರಗತಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆಯನ್ನು ಮಾ.16ರಿಂದ 21, 8 ಮತ್ತು 9ನೇ ತರಗತಿಗೆ 16ರಿಂದ 23ರೊಳಗೆ ಪರೀಕ್ಷೆ ಪೂರ್ಣಗೊಳಿಸಬೇಕು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಿಗದಿತ ವೇಳಾಪಟ್ಟಿಯಂತೆ ಮಾ.27ರಿಂದ ಏ.9ರ ವರೆಗೆ ಪರೀಕ್ಷೆ ನಡೆಯಲಿದೆ ಎಂದರು.

ಪರೀಕ್ಷೆಯಲ್ಲಿ ಮಾಸ್ಕ್‌ ಧರಿಸಲು ಅವಕಾಶ

ವಿದ್ಯಾರ್ಥಿಗಳ ಸುರಕ್ಷತಾ ಕ್ರಮವಾಗಿ 7ರಿಂದ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್‌ಗಳನ್ನು ಧರಿಸಿ ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅನುಮತಿ ನೀಡಬೇಕು. ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಲಾ ಮುಖ್ಯಸ್ಥರಿಗೆ ಸಚಿವರು ಸೂಚಿಸಿದರು.