ಹುಬ್ಬಳ್ಳಿ: ಮುರುಕು ಮನೆಗಳ ಮೇಲೆ ಸಂತ್ರಸ್ತರ ತಿರಂಗಾ..!
ಮೇ ಮಳೆಗೆ ಬಿದ್ದ ಮನೆಗಳಿಗೆ ಸಿಕ್ಕಿಲ್ಲ ಪರಿಹಾರ, ಸರ್ಕಾರದ ಕ್ರಮ ಖಂಡಿಸಿ ಕುಸಿದ ಮನೆಗಳ ಮೇಲೆ ಧ್ವಜಾರೋಹಣ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಆ.14): ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದಂಗವಾಗಿ ದೇಶಾದ್ಯಂತ ಎಲ್ಲ ಮನೆಗಳ ಮೇಲೆ ರಾಷ್ಟ್ರಧ್ವಜ ರಾರಾಜಿಸುತ್ತಿದೆ. ಆದರೆ ಈ ಗ್ರಾಮದಲ್ಲಿ ಮಾತ್ರ ಮುರುಕು ಮನೆಗಳ ಮೇಲೆಯೇ ಧ್ವಜ ಹಾರಾಡುತ್ತಿದೆ. ಸರ್ಕಾರದ ನಿಯಮದಿಂದಾಗಿ ಸೂಕ್ತ ಪರಿಹಾರ ಸಿಗದ ಕಾರಣ ಮುರುಕು ಮನೆಗಳ ಮೇಲೆಯೇ ಇಲ್ಲಿ ತಿರಂಗಾ ಹಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಇಲ್ಲಿನ ಸಂತ್ರಸ್ತರು. ಜತೆಗೆ ರಾಷ್ಟ್ರಧ್ವಜ ಹಾರಿಸಿ ದೇಶಪ್ರೇಮವನ್ನು ಮೆರೆದಿದ್ದಾರೆ.
ಇದು ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿನ ಪರಿಸ್ಥಿತಿ. ಮೇ ತಿಂಗಳಲ್ಲಿ ಸುರಿದ ಮಳೆಗೆ ಗ್ರಾಮದಲ್ಲಿ ಬರೋಬ್ಬರಿ 18 ಮನೆಗಳು ನೆಲಕಚ್ಚಿವೆ. ಇವುಗಳಲ್ಲಿ ಐದಾರು ಮನೆ ಪೂರ್ಣವಾಗಿ ಕುಸಿದರೆ, 12 ಮನೆ ಭಾಗಶಃ ಕುಸಿದಿವೆ. ಭಾಗಶಃ ಕುಸಿದ ಮನೆಗಳ ಮಾಲೀಕರು ಅಲ್ಪಸ್ವಲ್ಪ ದುರಸ್ತಿ ಮಾಡಿಕೊಂಡು ಅದರಲ್ಲೇ ವಾಸವಾಗಿದ್ದರೆ, ಪೂರ್ಣ ಮನೆ ಕಳೆದುಕೊಂಡವರು ದನದ ಕೊಟ್ಟಿಗೆ ಹಾಗೂ ಬಾಡಿಗೆ ಮನೆ ಹಿಡಿದು ವಾಸವಾಗಿದ್ದಾರೆ.
ಪರಿಹಾರ ಏಕೆ ಸಿಕ್ಕಿಲ್ಲ?:
ಸರ್ಕಾರ ಜೂನ್ ಅಥವಾ ಅದರ ನಂತರ ಅಂದರೆ ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಕುಸಿದ ಮನೆಗಳಿಗೆ ಪರಿಹಾರ ಘೋಷಿಸಿದೆ. ಎ,ಬಿ,ಸಿ ಎಂದು ಕೆಟಗೇರಿ ಮಾಡಿ ಪರಿಹಾರ ವಿತರಿಸುತ್ತಿದೆ. ಎ ಅಂದರೆ ಪೂರ್ಣವಾಗಿ ಬಿದ್ದ ಮನೆಗಳಿಗೆ .5 ಲಕ್ಷ, ಬಿ ಕೆಟಗೇರಿ ಶೇ. 75ಕ್ಕೂ ಹೆಚ್ಚು ಪ್ರಮಾಣ ಬಿದ್ದ ಮನೆಗಳನ್ನು ಹೊಸದಾಗಿ ನಿರ್ಮಿಸಿಕೊಳ್ಳುವವರಿದ್ದರೆ .5 ಲಕ್ಷ, ಬಿದ್ದ ಮನೆ ದುರಸ್ತಿ ಮಾಡಿಸಿ ಉಳಿದ ಭಾಗ ಕಟ್ಟಿಸಿಕೊಳ್ಳುವವರಿಗೆ . 3 ಲಕ್ಷ ಪರಿಹಾರ ವಿತರಿಸಲಾಗುತ್ತಿದೆ. ಇನ್ನೂ ಸಿ ಕೆಟಗೇರಿ ಎಂದರೆ ಭಾಗಶಃ ಬಿದ್ದ ಮನೆಗಳಿಗೆ . 50 ಸಾವಿರ ಪರಿಹಾರ ವಿತರಿಸಲಾಗುತ್ತಿದೆ.
ದೇಶ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ; ಇತ್ತ ವಿದ್ಯಾಕಾಶಿಯಲ್ಲಿ ರಾಶಿ ರಾಶಿ ಕಸ!
ಈ ಎ,ಬಿ,ಸಿ ಕೆಟಗೇರಿಯ ಪರಿಹಾರ ಜೂನ್ ಹಾಗೂ ಅದರ ನಂತರ ಬಿದ್ದ ಮನೆಗಳಿಗೆ ಅನ್ವಯಿಸುತ್ತದೆ. ಅದಕ್ಕಿಂತ ಮುಂಚೆ ಸುರಿದ ಮಳೆಗೆ ಕುಸಿದ ಮನೆಗಳಿಗಲ್ಲ. ಇಲ್ಲಿ ಕುಸಿದಿರುವ ಮನೆಗಳೆಲ್ಲ ಮೇ ನಲ್ಲಿ ಸುರಿದ ಮಳೆಗೆ. ಹೀಗಾಗಿ ಈ 18 ಮನೆ ಮಾಲೀಕರಿಗೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪ್ರತಿ ಮನೆಗೆ . 5200, . 3200 ಮಾತ್ರ ಪರಿಹಾರ ಕೊಡಲು ತಾಲೂಕಾಡಳಿತ ಮುಂದಾಗಿತ್ತು. ಆಗ ಮನೆ ಕಳೆದುಕೊಂಡವರು ‘ನೀವು ಕೊಡುವ ದುಡ್ಡು ಯಾವುದಕ್ಕೂ ಸಾಕಾಗುವುದಿಲ್ಲ. ಇಷ್ಟೇ ದುಡ್ಡು ಕೊಡುತ್ತೇವೆ ಎಂದರೆ ಬೇಡ. ನಮ್ಮ ಮನೆಗಳೆಲ್ಲ ಪೂರ್ಣ ಪ್ರಮಾಣದಲ್ಲಿ ಕುಸಿದಿವೆ. ಅದಕ್ಕೆ . 5 ಲಕ್ಷ ಅಥವಾ ಕನಿಷ್ಠ . 3 ಲಕ್ಷವಾದರೂ ಕೊಡಿ’ ಎಂದು ಮನವಿ ಮಾಡಿದ್ದಾರೆ. ನಿಮ್ಮ ಮನೆ ಮುಂಗಾರು ಹಂಗಾಮಿನಲ್ಲಿ ಕುಸಿದಿಲ್ಲ. ಅದಕ್ಕಿಂತ ಪೂರ್ವದಲ್ಲಿ ಸುರಿದ ಮಳೆಗೆ ಕುಸಿದಿವೆ. ಸರ್ಕಾರದ ನಿಯಮದಂತೆ ನಿಮಗೆ . 5 ಸಾವಿರ ವರೆಗೆ ಮಾತ್ರ ಪರಿಹಾರ ಕೊಡಲು ಸಾಧ್ಯ ಎಂದು ಅಧಿಕಾರಿ ವರ್ಗ ತಿಳಿಸಿದೆ. ಮೇನಲ್ಲಿ ಮನೆಗಳು ಬಿದ್ದ ಕಾರಣ ಇವರಿಗೆ ಪರಿಹಾರವೇ ಸಿಕ್ಕಿಲ್ಲ.
ಸಿಎಂ ಬದಲಾವಣೆ ಯಾವುದೇ ಚಿಂತನೆಯಿಲ್ಲ: ಕೇಂದ್ರ ಸಚಿವ ಜೋಶಿ
ಒಟ್ಟಿನಲ್ಲಿ ಸರ್ಕಾರದ ನಿಯಮದಿಂದಾಗಿ ಮೇನಲ್ಲಿ ಮನೆ ಕಳೆದುಕೊಂಡವರು ಸೂಕ್ತ ಪರಿಹಾರ ಸಿಗದೇ ನಿರಾಶ್ರಿತರಾಗಿದ್ದಾರೆ. ಇನ್ನಾದರೂ ಸರ್ಕಾರ ಇವರತ್ತ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.
ಮೇನಲ್ಲೇ ನಮ್ಮ ಮನೆಗಳೆಲ್ಲ ಕುಸಿದಿವೆ. ಆದರೆ ನಮಗೆ ಬರೀ . 3ರಿಂದ . 5 ಸಾವಿರ ಮಾತ್ರ ಪರಿಹಾರ ಕೊಡಲು ಬಂದಿದ್ದರು. ಉಳಿದವರಂತೆ ನಮಗೂ . 3 ಲಕ್ಷ ಅಥವಾ . 5 ಲಕ್ಷ ಪರಿಹಾರ ಕೊಡಿ ಎಂದು ಹೇಳಿದೆವು. ಮೇನಲ್ಲಿ ಬಿದ್ದಿರುವುದರಿಂದ ಕೊಡಲು ಬರಲ್ಲ ಎಂದಿದ್ದಾರೆ. ಹೀಗಾಗಿ ಪರಿಹಾರ ಪಡೆದಿಲ್ಲ. ಬೇರೆ ಮನೆ ಇಲ್ಲದ ಕಾರಣ ಮುರುಕು ಮನೆ ಮೇಲೆ ಧ್ವಜಾರೋಹಣ ಮಾಡಿದ್ದೇವೆ ಅಂತ ಮನೆ ಕಳೆದುಕೊಂಡ ನಾಗಪ್ಪ ಡೊಳ್ಳಿನ ತಿಳಿಸಿದ್ದಾರೆ.
ಸರ್ಕಾರ ಮುಂಗಾರು ಹಂಗಾಮಿನಲ್ಲಿ ಕುಸಿದ ಮನೆಗಳಿಗೆ ಮಾತ್ರ ಎ,ಬಿ,ಸಿ ಕೆಟಗೇರಿ ಮಾಡಿ . 5 ಲಕ್ಷ, . 3 ಲಕ್ಷ ಹಾಗೂ . 50 ಸಾವಿರ ಪರಿಹಾರ ವಿತರಿಸುತ್ತಿದೆ. ಆದರೆ ಪಶುಪತಿಹಾಳದಲ್ಲಿ ಬಿದ್ದಿರುವ 18 ಮನೆಗಳು ಮುಂಗಾರಿನ ಮಳೆಗೆ ಬಿದ್ದಿಲ್ಲ. ಹೀಗಾಗಿ ಅವರಿಗೆ ಕೊಡಲು ನಿಯಮದ ಪ್ರಕಾರ ಬರುವುದಿಲ್ಲ. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಕೊಡಲು ಹೋಗಿದ್ದೆವು, ಅವರೇ ಬೇಡ ಅಂತ ಹೇಳಿದ್ದಾರೆ ಅಂತ ಕುಂದಗೋಳ ತಹಸೀಲ್ದಾರ್ ಅಶೋಕ ಶಿಗ್ಗಾವಿ ಹೇಳಿದ್ದಾರೆ.